ಕರ್ನಾಟಕ

ಮೈಸೂರಿನಲ್ಲಿ ಜಗದ್ವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ

Pinterest LinkedIn Tumblr

dasaraಮೈಸೂರು: ಜಗದ್ವಿಖ್ಯಾತ ಮೈಸೂರು ದಸರೆಯ ಕೇಂದ್ರ ಬಿಂದುವಾದ ಜಂಬೂಸವಾರಿ ಮೆರವಣಿಗೆಗೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ.   ನಾಡಿನ ಸಂಸ್ಕೃತಿ, ಪರಂಪರೆ, ಇತಿಹಾಸ ಬಿಂಬಿಸುವ ಜಂಬೂ ಸವಾರಿ ಮೆರವಣಿಗೆಗಾಗಿ ಮೈಸೂರು ನಗರ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ಅರಮನೆ ನಗರಿಗೆ ಜನ ಸಾಗರ ಹರಿದು ಬರುತ್ತಿದೆ. ಮಧ್ಯಾಹ್ನ 12.07ರಿಂದ 12.21ರವರೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಮನೆ ಉತ್ತರ ದ್ವಾರದ ಶ್ರೀಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವರು.

ನಂತರ ಅರಮನೆ ಆವರಣದಲ್ಲಿ 12.30ರಿಂದ 2 ಗಂಟೆಯೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಹಲವು ಮಂದಿ ಗಣ್ಯರು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಹೊತ್ತುಬರುವ ಆನೆ ಅರ್ಜುನನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯದಶಮಿಯ ದಿನದ ಜಂಬೂ ಸವಾರಿ ಮೆರವಣಿಗೆ ಚಾಲನೆ ನೀಡುವರು.

ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್, ಮೇಯರ್ ಲಿಂಗಪ್ಪ, ಜಿಲ್ಲಾಧಿಕಾರಿ ಶಿಖಾ, ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.  ಈ ಬಾರಿ ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ 23 ಸ್ತಬ್ಧ ಚಿತ್ರಗಳು, 33 ಕಲಾತಂಡಗಳು, ಪೊಲೀಸ್ ಪಡೆ, ಅಶ್ವಾರೋಹಿ ದಳ, ಸಾಲಾಂಕೃತ ನಿಶಾನೆ ಆನೆಗಳು, ಅರಮನೆ ಧ್ವಜ ಪತಾಕೆ, ಇವುಗಳು ಮೆರವಣಿಗೆಯಲ್ಲಿ ಸಾಗಿ ಬರಲಿವೆ.  4ನೇ ಬಾರಿ ಚಿನ್ನದ ಅಂಬಾರಿ ಹೊರುತ್ತಿರುವ ಅರ್ಜುನನೊಂದಿಗೆ ಅಭಿಮನ್ಯು, ಬಲರಾಮ, ವಿಕ್ರಮ, ಚೈತ್ರ, ಕಾವೇರಿ, ಗೋಪಾಲಕೃಷ್ಣ ,ದುರ್ಗಪರಮೇಶ್ವರಿ, ಹರ್ಷ, ಗೋಪಿ ಆನೆಗಳು ಮೆರವಣಿಗೆಯಲ್ಲಿ ರಾಜ ಗಾಂಭೀರ್ಯದಲ್ಲಿ  ನಡೆದು ಬರಲಿವೆ.

ಜನಜಂಗುಳಿಗೆ ಹೆದರಿರುವ ಕೆಂಚಾಂಬ ಆನೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದು ಅನುಮಾನವಿದೆ. ಮೆರವಣಿಗೆಯಲ್ಲಿ ಈ ಬಾರಿ ಆನೆ ಗಾಡಿಯಲ್ಲಿ ಪೊಲೀಸ್ ವಾದ್ಯ ವೃಂದದವರು ಸಾಗಿಬರಲಿದ್ದಾರೆ. ಅಂಬಾರಿಗಾಗಿ 15 ಕೋಟಿ ರೂ. ವಿಮೆ ಮಾಡಿಸಲಾಗಿದೆ.  ಜಂಬೂ ಸವಾರಿ ಮೆರವಣಿಗೆಯಲ್ಲಿ ನಾಡಿನ ಇತಿಹಾಸ, ಸಾಂಸ್ಕೃತಿಕ ಪರಂಪರೆ, ಕಲೆ, ವಿಜ್ಞಾನ, ಕೃಷಿ ಇವುಗಳನ್ನು ಬಿಂಬಿಸುವ ಸಂದೇಶ ನೀಡುವ ಸ್ತಬ್ದ ಚಿತ್ರಗಳನ್ನು ಸಿದ್ದಪಡಿಸಲಾಗಿದೆ. ಕೃಷಿ ಇಲಾಖೆಯು ಸಮಗ್ರ ಕೃಷಿ ಪದ್ಧತಿ, ಪುರತತ್ವ ಇಲಾಖೆ, ವರದರಾಜು ಸ್ವಾಮಿ ದೇವಾಲಯ, ಆಯುಷ್ ಇಲಾಖೆ ಜಾಗತಿಕ ಆರೋಗ್ಯ ಆಯುಷ್ ವೈದ್ಯ ಪದ್ಧತಿಗಳು ಪೂರಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜು ಅರಸು ಜನ್ಮ ಶತಮಾನೋತ್ಸವ, ಚೆಸ್ಕಾಂ ವತಿಯಿಂದ ಸೋಲಾರ್ ಬಳಸಿ ವಿದ್ಯತ್ ಉಳಿಸಿ ಸೇರಿದಂತೆ ವಿವಿಧ ಇಲಾಖೆಗಳು ಸ್ತಬ್ದ ಚಿತ್ರಗಳನ್ನು ಸಿದ್ದಪಡಿಸಿದ್ದು, ಇವೆಲ್ಲವೂ ಮೆರವಣಿಗೆಯಲ್ಲಿ ಸಾಗಿಬರಲಿವೆ.

ಪ್ರತಿವರ್ಷ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸ್ತಬ್ದ ಚಿತ್ರಗಳನ್ನು ಸಿದ್ದಪಡಿಸಲಾಗುತ್ತಿತ್ತು. ಆದರೆ ಈ ಬಾರಿ ಬರದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿರುವ ಸರ್ಕಾರಿ ಇಲಾಖೆಗಳು ಮಾತ್ರ ಸ್ತಬ್ದ ಚಿತ್ರಗಳನ್ನು ಸಿದ್ದಪಡಿಸಿವೆ.

ಅರಮನೆ ಆವರಣದಿಂದ ಸಾಗುವ ಜಂಬೂ ಸವಾರಿ ಮೆರವಣಿಗೆ ಓಲ್ಡ್ ಸ್ಟ್ಯಾಚು ವೃತ್ತ, ಕೆ.ಆರ್.ವೃತ್ತ ಹಾಗೂ ಸಯ್ಯಾಜಿರಾವ್ ರಸ್ತೆ ಮೂಲಕ ಬನ್ನಿಮಂಟಪ ತಲುಪಲಿದೆ.  ಸ್ತಬ್ದ ಚಿತ್ರಗಳಲ್ಲದೆ ಕಂಸಾಳೆ, ನಾದಸ್ವರ, ಬಿಜು ಕಂಸಾಳೆ, ತಮಟೆ ವಾದ್ಯ, ಗೊರವನಕುಣಿತ ಸೇರಿದಂತೆ  33 ಜಾನಪದ  ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿಬರಲಿವೆ.  ಇವುಗಳೊಂದಿಗೆ ಕೆಎಸ್‌ಆರ್‌ಪಿ, ಅಶ್ವರೋಹಿ ಪಡೆ, ಪೊಲೀಸ್ ಪಡೆ, ಪಿರಂಗಿ ಗಾಡಿ, ಎನ್‌ಸಿಸಿ ಹೋಮ್‌ಗಾರ್ಡ್ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

ಪಂಜಿನ ಕವಾಯತು: ಸಂಜೆ 7 ಗಂಟೆಗೆ ಬನ್ನಿ ಮಂಟಪದಲ್ಲಿ  ಆಕರ್ಷಕವಾದ ಪಂಜಿನ ಕವಾಯತು ನಡೆಯಲಿದ್ದು, ರಾಜ್ಯಪಾಲ ವಿ. ಆರ್.ವಾಲಾ ಅವರು ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ.  ಇವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೇಯರ್ ಲಿಂಗಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.  ಬಿಗಿ ಬಂದೋಬಸ್ತ್: ಜಂಬೂ ಸವಾರಿಯಲ್ಲಿ ಮೈಸೂರಿನಲ್ಲಿ ಪೊಲೀಸರ ಬಿಗಿಭದ್ರತೆ ಒದಗಿಸಲಾಗಿದ್ದು, ಒಟ್ಟು ಆರು ಸಾವಿರ ಮಂದಿ ಪೊಲೀಸರು ಭದ್ರತೆಗಾಗಿ ನಗರಕ್ಕೆ ಆಗಮಿಸಿದ್ದಾರೆ.

ಅರಮನೆಯಿಂದ ಹಿಡಿದು ಬನ್ನಿಮಂಟಪದವರೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಅಂಬಾರಿ ಹೊತ್ತು ಸಾಗುವ ಅರ್ಜುನ ಸುತ್ತ ಚಾಮುಂಡಿ ಕಮಾಂಡೋ ಪಡೆಗಳು ಸುತ್ತುವರೆದಿರುತ್ತಾರೆ.

ಗಣ್ಯ ವ್ಯಕ್ತಿಗಳಿರುವ ಕಡೆ ಶಸ್ತ್ರ ಸಜ್ಜಿತ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಜಂಬೂ ಸವಾರಿ ಮಾರ್ಗದುದ್ದಕ್ಕೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 250ಕ್ಕೂ ಹೆಚ್ಚು ಮಂದಿ ಪೊಲೀಸರು ಮಫ್ತಿಯಲ್ಲಿದ್ದು, ಬಾಂಬ್ ನಿಷ್ಕ್ರಿಯ ದಳವನ್ನು ನಿಯೋಜಸಲಾಗಿದೆ.

Write A Comment