ಮಂಗಳೂರು, ಅ. 20: ಆಸ್ತಿ ತೆರಿಗೆ, ನೀರಿನ ಕರ ಸಂಗ್ರಹ ಸೇರಿದಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಂದಾಯ ಸಂಗ್ರಹದಲ್ಲಿ ಪ್ರಗತಿ ಕಾಣದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ, ಕಂದಾಯ ಸಂಗ್ರಹ ಸಮರ್ಪಕವಾಗಿ ಆಗದಿದ್ದಲ್ಲಿ ಅಧಿಕಾರಿಗಳನ್ನೇ ಹೊಣೆಯಾಗಿಸಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಮನಪಾ ಸಭಾಂಗಣದಲ್ಲಿ ಮನಪಾ ಅಭಿವೃದ್ಧಿ ಕುರಿತಾದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಸಂಗ್ರಹದಲ್ಲಿ ಸೆಪ್ಟಂಬರ್‌ವರೆಗೆ ಶೇ. 45.96ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಉಪ ಆಯುಕ್ತ ರಾಜು ಮೊಗವೀರ ಸಭೆಯಲ್ಲಿ ತಿಳಿಸಿದರು. ಪ್ರತಿ ವರ್ಷ ಶೇ.88ರಷ್ಟು ಆಸ್ತಿ ತೆರಿಗೆ ಸಂಗ್ರಹಿಸಲಾಗುತ್ತಿದ್ದು, ಆಸ್ತಿಗಳ ಕಂಪ್ಯೂಟರ್ ದಾಖಲೀಕರಣ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಸ್ವಯಂ ಘೋಷಿತ ಆಸ್ತಿ ತೆರಿಗೆ ಫಾರಂ ಭರ್ತಿ ಮಾಡಿ ಆಗಿದೆ ಎಂದು ರಾಜು ಮೊಗವೀರ ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 76,0025 ಗೃಹಬಳಕೆ ಸೇರಿದಂತೆ 82,899 ನೀರಿನ ಸಂಪರ್ಕಗಳಿವೆ. ಕಳೆದ ಸಾಲಿನ ಸಂಗ್ರಹದ ಗುರಿ 40 ಕೋ.ರೂ.ನಲ್ಲಿ ಬಾಕಿ 25 .65 ಕೋ.ರೂ. ಬಾಕಿ ಇತ್ತು. ಈ ವರ್ಷದ ಸಂಗ್ರಹದ ಗುರಿ 40 ಕೋ.ರೂ. ಸೇರಿ ಒಟ್ಟು 65 ಕೋ.ರೂ. ಗುರಿಯಲ್ಲಿ 16.40 ಕೋ.ರೂ. ಸಂಗ್ರಹವಾಗಿದ್ದು, ಒಟ್ಟು 49.25 ಕೋ.ರೂ. ಸಂಗ್ರಹಕ್ಕೆ ಬಾಕಿ ಇದೆ ಎಂದು ಅಧಿಕಾರಿಗಳು ವಿವರಿಸಿದರು.
ಅಸ್ತಿ ತೆರಿಗೆ ಸಂಗ್ರಹದ ಗುರಿ 55.65 ಕೋ.ರೂ. ಆಗಿದ್ದು ಇದರಲ್ಲಿ 25.57 ಕೋ.ರೂ. ಸಂಗ್ರಹವಾಗಿದೆ ಎಂದು ಅವರು ವಿವರಿಸಿದರು. ಈ ಸಂದರ್ಭ ಸಿಬ್ಬಂದಿ ಕೊರತೆಯ ಕೂಗೂ ಸಭೆಯಲ್ಲಿ ವ್ಯಕ್ತವಾಯಿತು. ಇದರಿಂದ ಅಸಮಾಧಾನಗೊಂಡ ಸಚಿವ ಸೊರಕೆ, ಕಳೆದ ಬಾರಿ ಸಭೆಯಲ್ಲೂ ಇದೇ ಮಾತು ವ್ಯಕ್ತವಾಗಿತ್ತು.
ಆದಾಯ ಸಂಗ್ರಹಕ್ಕೆ ಸಂಬಂಧಿಸಿ ಬೇಡಿಕೆ ಮತ್ತು ಸಂಗ್ರಹದ ಬಗ್ಗೆ ಮಾಹಿತಿಯನ್ನೇ ಕಲೆ ಹಾಕಲಾಗಿಲ್ಲ. ರಾಜ್ಯಾದ್ಯಂತ ಮನಪಾಗಳಲ್ಲಿ ಆದಾಯ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ಸಭೆಯಲ್ಲಿ ಅಕ್ರಮ ನೀರಿನ ಸಂಪರ್ಕಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಚಿವ ಸೊರಕೆ ಬೇಸರಿಸಿದರು. ಬೆಂಗಳೂರು, ಬೆಳಗಾಂ, ಹುಬ್ಬಳ್ಳಿ- ಧಾರವಾಡ ಮೊದಲಾದ ಎಲ್ಲಾ ನಗರ ಪಾಲಿಕೆಗಳಲ್ಲೂ ತೆರಿಗೆ ಹೆಚ್ಚಳದ ಬಗ್ಗೆ ಕ್ರಮ ಕೈಗೊಂಡಿವೆ. ಅಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಅರಿತುಕೊಂಡು ಖಾಸಗಿ ಸಂಸ್ಥೆಯ ಮೂಲಕ ಮನಪಾ ವ್ಯಾಪ್ತಿಯಲ್ಲಿನ ಬೇಡಿಕೆ ಮತ್ತು ಸಂಗ್ರಹದ ಬಗ್ಗೆ ವೌಲ್ಯ ಮಾಪನ ನಡೆಸಿ ಎಲ್ಲಾ ಮಾಹಿತಿಗಳನ್ನು ಪರಿಷ್ಕರಣೆ ಮಾಡಿಕೊಳ್ಳಬೇಕು. ಈ ಬಗ್ಗೆ ಒಂದು ತಿಂಗಳಲ್ಲಿ ವಾರ್ಡ್ ಮಟ್ಟದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸರಕಾರಿ ಜಾಗದಲ್ಲಿ ಮನೆಕಟ್ಟಿ ಕುಳಿತವರಿಗೆ ಹಕ್ಕುಪತ್ರ:
ನಗರ ವ್ಯಾಪ್ತಿಯಲ್ಲಿ ಸರಕಾರಿ ಜಾಗದಲ್ಲಿ ಮನೆಕಟ್ಟಿ ಕುಳಿತವರಿಗೆ 94 ಸಿಸಿಯಡಿ ಅರ್ಜಿ ಸಲ್ಲಿಸಿದ್ದರೆ ಅವರಿಗೆ ಹಕ್ಕುಪತ್ರ ನೀಡಬೇಕು ಎಂದು ಸಚಿವ ಸೊರಕೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಮಹಾನಗರ ಪಾಲಿಕೆಯಲ್ಲಿ ಈಗಾಗಲೇ ಎರಡು ವಲಯ ಆಯುಕ್ತ ಇದ್ದಾರೆ. ಆದರೆ ಅಧಿಕಾರ ವಿಕೇಂದ್ರೀಕರಣಗೊಳಿಸಿ ಅವರಿಗೆ ವಲಯವಾರು ಅಧಿಕಾರ ನೀಡುವ ಕಾರ್ಯ ಆಗಿಲ್ಲ ಎಂದು
ಪ್ರೇಮಾನಂದ ಶೆಟ್ಟಿ ಗಮನ ಸೆಳೆದರು. ನಮ್ಮ ಅಧಿಕಾರವ್ಯಾಪ್ತಿಯನ್ನು ನಿರ್ದಿಷ್ಟವಾಗಿ ನಿಗದಿಪಡಿಸಿ ಆದೇಶವಾಗದ ಕಾರಣ ಆಡಳಿತಾತ್ಮಕವಾಗಿ ಕ್ರಮಗಳನ್ನು ಕೈಗೊಳ್ಳಲು ಕಷ್ಟಸಾಧ್ಯವಾಗಿದೆ ಎಂದು ವಲಯ ಆಯುಕ್ತರು ಸಚಿವರ ಗಮನ ಸೆಳೆದರು. ಈ ಬಗ್ಗೆ ಕೂಡಲೇ ಕ್ರಮವಹಿಸುವಂತೆ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಶಾಸಕ ಜೆ.ಆರ್. ಲೋಬೋ ಅಧಿಕಾರಿಗಳಿಗೆ ಸೂಚಿಸಿದರು. ಮಾಜಿ ಮೇಯರ್ ಮಹಾಬಲ ಮಾರ್ಲ, ಮುಖ್ಯ ಸಚೇತಕ ಶಶಿಧರ ಹೆಗ್ಗೆ , ಆಶೋಕ್ ಕುಮಾರ್ ಡಿ.ಕೆ., ವಿಪಕ್ಷ ನಾಯಕ ಸುಧೀರ್ ಶೆಟ್ಟಿ , ನವೀನ್ ಡಿಸೋಜ ಅವರು ಸರಕಾರಿ ನಿಯಮದಲ್ಲಿ ಕೆಲವೊಂದು ನಿಬಂಧನೆಗಳಿಂದ ಆಗುವ ಆಡಚಣೆಗಳ ಬಗ್ಗೆ ಸಚಿವರ ಗಮನ ಸೆಳೆದರು.
ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್, ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಆಯುಕ್ತ ಡಾ. ಗೋಪಾಲಕೃಷ್ಣ ಉಪಸ್ಥಿತರಿದ್ದರು. ಸಭೆಯಲ್ಲಿ ಮಾಜಿ ಮೇಯರ್ ಮಹಾಬಲ ಮಾರ್ಲ, ವಿಪಕ್ಷ ನಾಯಕ ಸುಧೀರ್ ಶೆಟ್ಟಿ ಹಾಗೂ ಪ್ರೇಮಾನಂದ ಶೆಟ್ಟಿ ಮೊದಲಾದವರು ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೊರಕೆ, ಯಾವ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ, ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ಯಾವ ಅಧಿಕಾರಿಗಳಿಂದ ತೊಡಕಾಗುತ್ತಿದೆ ಎಂಬುದನ್ನು ಗಮನಕ್ಕೆ ತನ್ನಿ ಎಂದು ಸದಸ್ಯರಿಗೆ ಸಲಹೆ ನೀಡಿದರು.

