ಮುಂಬೈ: ಪಾಕಿಸ್ತಾನ ಜೊತೆಗೆ ಕ್ರಿಕೆಟ್ ಸರಣಿ ನಡೆಸಲು ಮುಂದಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಚೇರಿಗೆ ಮುತ್ತಿಗೆ ಹಾಕಿದ್ದ ಶಿವಸೇನೆಯ 10 ಕಾರ್ಯಕರ್ತರನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಇಂದು ಬೆಳಗ್ಗೆ ಬಿಸಿಸಿಐ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ, ಭಿತ್ತಿಚಿತ್ರ ಪ್ರದರ್ಶಿಸಿ ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ ಶಿವಸೇನೆ ಕಾರ್ಯಕರ್ತರ ಬಂಧಿಸಿ, ಅವರ ವಿರುದ್ಧ ಐಪಿಸಿ ಸೆಕ್ಷನ್ 141, 143, 149 ಅಡಿ ಕೇಸ್ ದಾಖಲಿಸಿದ್ದಾರೆ.
ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರಿಗೂ ಮುತ್ತಿಗೆ ಹಾಕಿದ್ದ ಶಿವಸೇನೆ ಕಾರ್ಯಕರ್ತರು, ಅವರಿಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು. ಅಲ್ಲದೆ ಯಾವುದೇ ಕಾರಣಕ್ಕೂ ಭಾರತ ಪಾಕ್ ನಡುವೆ ಕ್ರಿಕೆಟ್ ಸರಣಿ ಆಯೋಜಿಸ ಬಾರದು ಎಂದು ಒತ್ತಾಯಿಸಿದ್ದರು.
ಭಾರತ-ಪಾಕ್ ಕ್ರಿಕೆಟ್ ಸರಣಿ ನಡೆಸುವ ಸಲುವಾಗಿ ಶಶಾಂಕ್ ಮನೋಹರ್ ಮತ್ತು ಶಹರಿಯಾರ್ ಖಾನ್ ಅವರ ಮಾತುಕತೆ ನಿಗದಿಯಾಗಿತ್ತು. ಆದರೆ ಶಿವಸೇನೆ ಕಾರ್ಯಕರ್ತರು ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಪಿಸಿಬಿ-ಬಿಸಿಸಿಐ ಸಭೆಯನ್ನು ನಾಳೆ ದೆಹಲಿಯ ಬಿಸಿಸಿಐ ಕಚೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.