ಮಂಗಳೂರು,ಅ.19 : ಮೂಡುಬಿದಿರೆಯಲ್ಲಿ ಇತ್ತೀಚೆಗೆ ನಡೆದ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಖಂಡಿಸಿ ಮತ್ತು ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಅ. 20ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಮಂಗಳೂರು ಪುರಭವನದ ಎದುರು ದ.ಕ. ಬಿಜೆಪಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.
ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿ ಸಹಿತಾ ನಾಲ್ವರನ್ನು ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ ನಾಳೆ ದ. ಕ. ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಒಂದು ದಿನದ ಧರಣಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದುಕೊಂಡಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ತಿಳಿಸಿದ್ದಾರೆ.
ಸೋಮವಾರ ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಶಾಂತ್ ಪೂಜಾರಿ ಹತ್ಯ ಆರೋಪಿಗಳಲ್ಲಿ ಕೆಲವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸ್ವಲ್ಪ ತಡವಾಗಿಯಾದರೂ ಆರೋಪಿಗಳ ಬಂಧನದ ಹಿನ್ನೆಲೆಯಲ್ಲಿ, ಹಾಗೂ ಪೊಲೀಸ್ ಅಧಿಕಾರಿಗಳ ಕೋರಿಕೆಯನ್ನು ಮನ್ನಿಸಿ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದೇವೆ ಎಂದು ಅವರು ಹೇಳಿದರು. ಜೊತೆಗೆ ಈ ಕಾರ್ಯಕ್ಕಾಗಿ ಪೊಲೀಸ್ ಇಲಾಖೆಯನ್ನು ಅಭಿನಂದಿಸುವುದಾಗಿ ಹೇಳಿದ ಅವರು ಮುಂದಿನ ತನಿಖೆಯಲ್ಲಿ ಪೊಲೀಸರೊಂದಿಗೆ ಸಹಕರಿಸುವುದಾಗಿ ತಿಳಿಸಿದರು.
ಹತ್ಯೆಯ ಹಿಂದಿರುವ ಎಲ್ಲಾ ಶಕ್ತಿಗಳನ್ನು ಬಂಧಿಸಬೇಕು, ಸಮಾಜದಲ್ಲಿ ಅಶಾಂತಿ ನಿರ್ಮಿಸುವ ಸಮಾಜ ಘಾತುಕ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಹತ್ಯೆ ಪ್ರಕರಣದ ಹಿಂದಿರುವ ಬೇರುಗಳನ್ನು ಹುಡುಕಿ ತೆಗೆಯಬೇಕು. ಒತ್ತಡ, ಒತ್ತಾಯ, ಹೋರಾಟ ಮಾಡದಿದ್ದರೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳವುದಿಲ್ಲ. ಅದ್ದರಿಂದ ಬಿಜೆಪಿ ನಿರಂತರ ಒತ್ತಡ ಹಾಕಿ. ಪ್ರತಿಭಟನೆ ನಡೆಸುವುದಾಗಿ ಹೇಳಿದ ಬಳಿಕ ಆರೋಪಿಗಳ ಬಂಧನವಾಗಿದೆ ಎಂದು ಹೇಳಿದರು.
ದ. ಕ. ಜಿಲ್ಲೆಯ ಸಚಿವರುಗಳ ಮನೋಸ್ಥಿತಿ ಹೇಗಿದೆ ಎಂದರೆ `ಕನಿಷ್ಟ ಹತ್ಯೆಯನ್ನು ಖಂಡಿಸುವ ಸೌಜನ್ಯ ಸಚಿವರಿಗಿಲ್ಲ, ಸಚಿವ ಅಭಯಚಂದ್ರ ಜೈನ್ ಮೂಡುಬಿದಿರೆಯವರಾದರೂ ಹತ್ಯೆಗೀಡಾದ ಪ್ರಶಾಂತ್ ಮನೆಗೆ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳುವ ಸೌಜನ್ಯತೆ ಇಲ್ಲ ಎಂದು ಪ್ರತಾಪಸಿಂಹ ನಾಯಕ್ ವಿಷಾದವ್ಯಕ್ತಪಡಿಸಿದರು.
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದಾಗಿನಿಂದ ಬಹುಸಂಖ್ಯಾಕರ ಮೇಲೆ ಒಂದಲ್ಲ ಒಂದು ರೀತಿಯ ದಾಳಿ ನಡೆಯುತ್ತಿವೆ. ಜೊತೆಗೆ ರಾಜ್ಯ ಸರ್ಕಾರ ದ್ವಂದ್ವ, ತಾರತಮ್ಯ ನೀತಿ ಅನುಸರಿಸುತ್ತಿದೆ. ದನ ಕಳ್ಳ ಸತ್ತಾಗ ಆತನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಿದೆ. ಆದರೆ ಒಬ್ಬ ಸಾಮಾಜಿಕ ಕಾರ್ಯಕರ್ತ ಹತ್ಯೆಗೀಡಾದಾಗ ಸರ್ಕಾರ ಪರಿಹಾರ ನೀಡದೆ ಸುಮ್ಮನಾಗಿದೆ. ಸರ್ಕಾರದ ಇಂತಹ ನಿಲುವಿನಿಂದಾಗಿ ಜನತೆ ಸರ್ಕಾರ. ಕಾನೂನಿನ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಬಿಜೆಪಿ ನಾಯಕರಾದ ಮೋನಪ್ಪ ಭಂಡಾರಿ, ಸುಧೀರ್ ಶೆಟ್ಟಿ, ನಿತಿನ್ ಕುಮಾರ್, ಡಾ. ಭರತ್ ಶೆಟ್ಟಿ, ಸಂಜಯ ಪ್ರಭು, ಎಸ್.ಗಣೇಶ್ ರಾವ್, ಭಾಸ್ಕರ ಚಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


