ಬಜ್ಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿಗಳು ಬಂಧಿಸಿ, ಸುಮಾರು 34 ಲಕ್ಷ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕಾಸರಗೋಡು ನಿವಾಸಿಗಳಾದ ಅಬ್ದುಲ್ ಲತೀಫ್ ಹಾಗೂ ಫಝಲ್ ರೆಹಮಾನ್ ಎನ್ನಲಾಗಿದೆ.
ಶನಿವಾರ ಬೆಳಗ್ಗೆ ದುಬೈಯಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಈ ಇಬ್ಬರು ಯಾನಿಗಳನ್ನು ಇಮಿಗ್ರೇಷನ್ ಅಧಿಕಾರಿಗಳು ತಪಾಷಣೆಗೊಳಪಡಿಸಿದಾಗ ಆರೋಪಿಗಳು ಚಿನ್ನದ ಗಟ್ಟಿಯನ್ನು ಮಿಕ್ಸರ್ ಗ್ರೈಂಡರ್‍ನ ಒಳಗಡೆ ಕ್ವಾಯಿಲ್ ರೂಪದಲ್ಲಿ ಪರಿವರ್ತಿಸಿ ಸಾಗಿಸುತ್ತಿದ್ದ ಸುಮಾರು 34 ಲಕ್ಷ ರೂ. ಮೌಲ್ಯದ 1 ಕೆ.ಜಿ. ಚಿನ್ನ ಪತ್ತೆಯಾಗಿದೆ.
ಆರೋಪಿಗಳಿಂದ ಚಿನ್ನ ವಶಪಡಿಸಿಕೊಂಡಿರುವ ಅಧಿಕಾರಿಗಳು ಆರೋಪಿಗಳನ್ನು ತನಿಖೆಗೊಳಪಡಿಸಿ ಮುಂದಿನ ಕ್ರಮಕ್ಕಾಗಿ ಬಜ್ಪೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
