ಕರ್ನಾಟಕ

ಕಾಕನಕೋಟೆಯಲಿ ನಡುರಾತ್ರಿ ಬೇಟೆ; ಇಲ್ಲಿ ನಡೆಯುತ್ತೆ  ಗಾಂಜಾ, ಮದ್ಯ ಸ್ಮಗ್ಲಿಂಗ್​ !

Pinterest LinkedIn Tumblr

kakana2

ವರದಿ: ವಿಜಯಲಕ್ಷ್ಮಿ ಶಿಬರೂರು(ಸುವರ್ಣ ನ್ಯೂಸ್​ನ ಕವರ್​ಸ್ಟೋರಿ)

ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ಈ ಬಾರಿ ಮತ್ತೊಮ್ಮೆ ನಡು ರಾತ್ರಿ ಬೇಟೆಗೆ ಹೊರಟಿದೆ. ಈ ಬಾರಿ ನಾವು ಬೇಟೆಗೆ ಹೊರಟಿದ್ದು ಅತಿಂಥಾ ಜಾಗಕ್ಕಲ್ಲ. ನಾವು ಹೊರಟಿದ್ದು ಕಾಕನಕೋಟೆಯ ದಟ್ಟಾರಣ್ಯಕ್ಕೆ. ಅತ್ಯಂತ ಅಪಾಯಕಾರಿ ಹಾಗೂ ಅಷ್ಟೇ ನಟೋರಿಯಸ್​ ಆಗಿರೋ ಈ ಕಾಡು ಕ್ರೂರ ಪ್ರಾಣಿಗಳ ನೆಲೆ ಬೀಡು. ಅಷ್ಟೇ ಅಲ್ಲ ಕರಾಳ ದಂಧೆ ನಡೆಸೋ ಖದೀಮರ ಕಾರ್ಯ ಸ್ಥಾನ. ಆದ್ರೂ ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ಈ ಎಲ್ಲಾ ಅಪಾಯಗಳನ್ನ ಮನಗಂಡು, ತನ್ನ ಪ್ರಾಣವನ್ನೇ ಪಣಕ್ಕಿಟ್ಟು, ಮೈಸೂರಿನ ಹೆಚ್​.ಡಿ.ಕೋಟೆಯ ಕಾಕನಕೋಟೆಯ ದಟ್ಟಾರಣ್ಯದೊಳಗೆ ನುಗ್ಗಿಯೇ ಬಿಟ್ತು.

ನಮ್ಮೀ ಸಾಹಸಯಾತ್ರೆಯ ವೇಳೆ ನಮಗೆ ಕೆಲ ಕಟುಸತ್ಯಗಳು ಗೊತ್ತಾದವು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದೊಳಗೆ ಜೀವಿಸುತ್ತಿರೋ ಡಿ.ಬಿ ಕುಪ್ಪೆ ಪಂಚಾಯತ್​ ವ್ಯಾಪ್ತಿಯ ಮಂದಿಯ ನರಕಯಾತನೆಯ ದರ್ಶನವೂ ಆಯ್ತು. ಈ ಪಂಚಾಯತ್​ ವ್ಯಾಪ್ತಿಯಲ್ಲಿ ಸುಮಾರು ಮೂರು ಸಾವಿರ ಮಂದಿ ಜೀವಿಸುತ್ತಿದ್ದಾರೆ. ಆದ್ರೆ ಇವರ ಬದುಕು ಕಾಡು ಪ್ರಾಣಿಗಳಿಗಿಂತ ಕಡೆಯಾಗಿದೆ. ಕರ್ನಾಟಕದ ಗಡಿ ಭಾಗದಲ್ಲಿರೋ ಈ ಪಂಚಾಯತ್​ಗೆ ಸರ್ಕಾರಿ ವ್ಯವಸ್ಥೆಗಳು ತಲುಪೋದೇ ಇಲ್ಲ. ತಲುಪಿದ್ರೂ ಅದನ್ನ ಅರಣ್ಯ ಕಾಯ್ದೆಗಳು ತಡೆಯುತ್ತಿವೆ. ಆಸ್ಪತ್ರೆ, ರಸ್ತೆ, ಕುಡಿಯುವ ನೀರು, ವಿದ್ಯುತ್​ ಇವರಿಗೆ ಮರೀಚಿಕೆಯಾಗಿದೆ. ಇನ್ನು ಶಿಕ್ಷಣ ವ್ಯವಸ್ಥೆ ದೇವರಿಗೇ ಪ್ರೀತಿ. ಇವರು ಪಟ್ಟಣಕ್ಕೆ ಬರಬೇಕಾದ್ರೆ ಹೆಚ್​.ಡಿ ಕೋಟೆ, ಹುಣಸೂರು ಅಥವಾ ಮೈಸೂರಿಗೆ ಬರಬೇಕು. ಅಥವಾ ಅತ್ತ ಕೇರಳಾಕ್ಕೆ ಹೋಗಬೇಕು.

kakana1

ಸ್ವಾತಂತ್ರ್ಯವೇ ಸಿಕ್ಕಿಲ್ಲ !: ಇಲ್ಲಿನ ಮಂದಿ ಹೇಳುವ ಪ್ರಕಾರ ಇವರಿಗೆ ಸ್ವಾತಂತ್ರ್ಯವೇ ಸಿಕ್ಕಿಲ್ಲವಂತೆ. ಸಿಕ್ಕಿದ್ರೂ ಮುಂಜಾನೆ 6ರಿಂದ ಸಂಜೆ ಆರು ಗಂಟೆ ತನಕ ಮಾತ್ರವಂತೆ. ಯಾಕಂದ್ರೆ ಅರಣ್ಯ ಇಲಾಖೆಯವರು ಆ ಬಳಿಕ ಕೇರಳ ಕರ್ನಾಟಕ ಹೆದ್ದಾರಿಯನ್ನ ಮುಚ್ಚಿ ಬಿಡ್ತಾರೆ. ಆ ಬಳಿಕ ಜನ, ವಾಹನ ಸಂಚಾರವನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜನರಿಗೆ ಏನಾದ್ರು ತೊಂದರೆ ಆದ್ರೂ ಗೇಟ್​​ ತೆರೆಯೋವರೆಗೆ ಕಾಯಬೇಕು. ಅನಾರೋಗ್ಯ ಕಾಡಿದ್ರೆ, ಅರಣ್ಯ ಅಧಿಕಾರಿಗಳನ್ನ ಕಾಡ.. ಬೇಡಬೇಕು. ಇದರಿಂದ ಅನೇಕರು ಪ್ರಾಣವನ್ನೇ ಕಳೆದುಕೊಂಡಿದ್ದಾರಂತೆ. ಅರಣ್ಯ ಅಧಿಕಾರಿಗಳ ದಬ್ಬಾಳಿಕೆ ಇವರ ಬದುಕನ್ನೇ ದುಸ್ತರಗೊಳಿಸಿದೆ.

ಈ ರೀತಿ ಕಾಡಿನ ಮಧ್ಯೆ ಕಾಡು ಪ್ರಾಣಿಗಳಿಗಿಂತ ಕಡೆಯಾಗಿ ಜೀವಿಸುತ್ತಿರೋ ಈ ಮಂದಿಯನ್ನ ಸರ್ಕಾರಿ ವ್ಯವಸ್ಥೆ ಇನ್ನಿಲ್ಲದಂತೆ ಶೋಷಿಸುತ್ತಿದೆ. ಇದರಿಂದ ಈಗಾಗ್ಲೇ ಈ ಮಂದಿ ನಲುಗಿ ಹೋಗಿದ್ದಾರೆ. ಇವರ ಹಾಳಾದ ಬದುಕನ್ನ ಇನ್ನಷ್ಟು ಬರ್ಬಾದ್​ ಮಾಡ ಹೊರಟಿದೆ ಒಂದು ಕರಾಳ ದಂಧೆ. ಆ ದಂಧೆ ಯಾವುದು ಗೊತ್ತಾ? ಗಾಂಜಾ, ಮದ್ಯ ಸ್ಮಗ್ಲಿಂಗ್​ ! ಈ ಕಾಕನಕೋಟೆಯಲ್ಲಿ ಗಾಂಜಾ ಹಾಗೂ ಅಕ್ರಮ ಮದ್ಯ ಸ್ಮಗ್ಲಿಂಗ್​ ರಾಜಾರೋಷವಾಗಿಯೇ ನಡೀತಿದೆ. ಆ ಖದೀಮರ ಬಣ್ಣ ಬಯಲಾಗಲೇ ಬೇಕಾಗಿದೆ. ಯಾಕಂದ್ರೆ ಅವರು ಡಿ.ಬಿ ಕುಪ್ಪೆ ಮಂದಿಯ ಪ್ರಾಣ ಹಿಂಡುತ್ತಿದ್ದಾರೆ. ಅಲ್ಲಿನ ಜನರ ನೆಮ್ಮದಿಯನ್ನೇ ಹಾಳು ಮಾಡಿದ್ದಾರೆ. ಆ ಕರಾಳದಂಧೆಗೆ ಅನೇಕ ಜೀವಗಳು ಬಲಿಯಾಗಿವೆ. ನೂರಾರು ಕುಟುಂಬಗಳು ಬೀದಿ ಪಾಲಾಗಿವೆ. ಅಷ್ಟೇ ಅಲ್ಲ. ಈ ಕರಾಳ ದಂಧೆ ಕೇರಳ ಹಾಗೂ ಕರ್ನಾಟಕ ಮಂದಿಯ ಮಧ್ಯೆ ದ್ವೇಷದ ವಿಷ ಬೀಜ ಬಿತ್ತುತಿದೆ. ಕೇರಳ ಗಡಿ ಭಾಗದಲ್ಲಿರೋ ಡಿ.ಬಿ ಕುಪ್ಪೆ ಮಂದಿ ಆತಂಕದಿಂದ ದಿನ ಕಳೆಯುತ್ತಿದ್ದಾರೆ. ಪರದಾಜ್ಯದಲ್ಲಿ ದಾಳಿಗೆ ಬೆದರಿ ಬೆಂಡಾಗಿದ್ದಾರೆ.

kakana

ದಿನೇ ದಿನೇ ಕಾಕನಕೋಟೆಯಲ್ಲಿ ಸ್ಮಗ್ಲರ್​ಗಳ ದರ್ಬಾರ್​ ಅತ್ಯಂತ ಅಪಾಯಕಾರಿ ಮಟ್ಟ ತಲುಪುತ್ತಿದೆ. ಆದ್ರೆ ಇವರ ಅಟ್ಟಹಾಸಕ್ಕೆ ಬ್ರೇಕ್​ ಹಾಕಲು ಅಬಕಾರಿ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಇನ್ನು ಪೊಲೀಸರೋ ಸ್ಮಗ್ಲರ್​ಗಳ ಪರವಾಗಿಯೇ ನಿಂತು, ದೂರು ಕೊಡೋ ಸ್ಥಳೀಯರ ಮೇಲೆಯೇ ಇಲ್ಲ ಸಲ್ಲದ ಪ್ರಕರಣ ದಾಖಲಿಸುತ್ತಿದ್ದಾರಂತೆ. ಅಧಿಕಾರಿಗಳ ಬೆಂಬಲದಿಂದ ದಂಧೆಕೋರರ ಬಲ ಇನ್ನಷ್ಟು ಹೆಚ್ಚಾಗಿದೆ. ಇವರನ್ನ ಕೇಳುವವರೇ ಇಲ್ಲದಂತಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ರೋಸಿ ಹೋಗಿದ್ದ ಡಿ.ಬಿ ಕುಪ್ಪೆ ಮಂದಿ ಮದ್ಯಪಾನ ವಿರೋಧಿ ಅನ್ನೋ ಮೂವತ್ತು ಮಂದಿ ಯುವರಕ ಒಂದು ಸಮಿತಿ ರಚಿಸಿದ್ದಾರೆ. ಈ ಸಮಿತಿ ಅಕ್ರಮ ಮದ್ಯ, ಗಾಂಜಾ ಮಾರಾಟಕ್ಕೆ ಬ್ರೇಕ್​ ಹಾಕಲು ಕೈಲಾದಷ್ಟು ಪ್ರಯತ್ನ ಮಾಡುತ್ತಿದೆ. ಒಂದಷ್ಟು ದಂಧೆಕೋರರನ್ನ ಹಿಡಿದು ಪೊಲೀಸರಿಗೂ ಒಪ್ಪಿಸಿದೆ. ಆದ್ರೆ ಆರೋಪಿಗಳು ತಮ್ಮ ಹಣದ ಪ್ರಭಾವ ಬಳಸಿ ಒಂದೆರೆಡು ದಿನಕ್ಕೆ ಜೈಲಿನಿಂದ ಹೊರ ಬಂದು ಕರಾಳ ದಂಧೆಯನ್ನ ಯಥಾ ಪ್ರಕಾರ ಮುಂದುವರಿಸುತ್ತಿದ್ದಾರೆ.

ಹಾಡಹಗಲೇ ಹಲ್ಲೆ ಮಾಡ್ತಾರೆ !: ಅಷ್ಟೇ ಅಲ್ಲ, ಮದ್ಯಪಾನ ವಿರೋಧಿ ಸಮಿತಿಯವರ ಚಟುವಟಿಕೆಗಳಿಂದ ಆಕ್ರೋಶಿತರಾಗಿರೋ ಈ ದಂಧೆಕೋರರು ಸ್ಥಳೀಯರ ಮೇಲೆ ಹಾಡಹಗಲೇ ಹಲ್ಲೆ ಮಾಡ್ತಿದ್ದಾರೆ. ಈ ಖದೀಮರು ಹೆಣ್ಣು ಮಕ್ಕಳ ಮೇಲೆಯೂ ದಾಳಿ ಮಾಡಿ, ಮಕ್ಕಳನ್ನೂ ಹೊಡೆದಿದ್ದಾರೆ. ಜೊತೆಗೆ ಈ ದಂಧೆಕೋರರು ಡಿ.ಬಿ ಕುಪ್ಪೆಯ ಮಂದಿಗೆ ನಕಲಿ ಮದ್ಯ ಕುಡಿಸಿ ಅವರ ಜೀವದ ಜೊತೆಯೇ ಚಲ್ಲಾಟ ಆಡ್ತಿದ್ದಾರೆ. ಈ ಸ್ಮಗ್ಲರ್​ಗಳ ಆಟಾಟೋಪಗಳಿಂದ ನೊಂದಿರುವ ಕಾಕನಕೋಟೆ ಮಂದಿ ದಂಧೆಕೋರರ ಬಣ್ಣ ಬಯಲು ಮಾಡಲು ಕವರ್​ಸ್ಟೋರಿ ತಂಡ ಜೊತೆ ಕೈ ಜೋಡಿಸಿದ್ರು. ಈ ಖದೀಮರು ಯಾವ ರೀತಿ ಸ್ಮಗ್ಲಿಂಗ್​ ಮಾಡ್ತಾರೆ. ಅವರ ಕಾರ್ಯಚಟುವಟಿಕೆ ಹೇಗಿರುತ್ತೆ ಅನ್ನೋದನ್ನ ತಿಳಿಯಲು ನಾವು ಕಾರ್ಯಾಚರಣೆ ಪ್ರಾರಂಭಿಸಿದೆವು.

ಆಗ ನಮಗೆ ತಿಳಿದು ಬಂದು ಒಂದು ಅಂಶ ಏನು ಗೊತ್ತಾ? ಯಾವಾಗ ಕೇರಳದಲ್ಲಿ ಮದ್ಯ ಮಾರಾಟ ನಿಷೇಧಿಸಲಾಯ್ತೋ ಆವತ್ತಿನಿಂದ ಡಿ.ಬಿ ಕುಪ್ಪೆ ವ್ಯಾಪ್ತಿಯಲ್ಲಿ ದಂಧೆಕೋರರ ಬಿಸಿನೆಸ್​ ಭರ್ಜರಿಯಾಗಿ ಹೆಚ್ಚಿತು. ಜೊತೆಗೆ ಈ ಭಾಗದಲ್ಲಿ ಗಾಂಜಾಕ್ಕೂ ಬೇಡಿಕೆಯೂ ಹೆಚ್ಚಿತು. ಹಾಗಾಗಿ ದಂಧೆಕೋರರು ತಮ್ಮ ಮನೆ ಸುತ್ತ ಮುತ್ತ ಕಾನೂನು ಬಾಹಿರವಾಗಿ ಗಾಂಜಾ ಬೆಳೆಸುತ್ತಿದ್ದಾರೆ ಅಂಶ ಗೊತ್ತಾಯ್ತು. ಇದನ್ನ ಪತ್ತೆ ಹಚ್ಚ ಹೊರಟ ನಮ್ಮ ತಂಡಕ್ಕೂ ಕೆಲ ಗಿಡಗಳು ಕಾಣ ಸಿಕ್ಕವು.

ಕಪಿಲೆಯ ಮಡಿಲಲ್ಲಿ ಅಕ್ರಮ !: ಸ್ಮಗ್ಲರ್​ಗಳಿಗೆ ಕಪಿಲಾ ನದಿಯೇ ಮುಖ್ಯ ವಾಹಿನಿ. ಈ ನದಿ ಕೇರಳಾ ಹಾಗೂ ಕರ್ನಾಟಕ ಗಡಿಯನ್ನ ಪ್ರತ್ಯೇಕಿಸುತ್ತೆ. ಇದು ದಂಧೆಕೋರರಿಗೆ ವರದಾನವಾಗಿದೆ. ಸ್ಮಗ್ಲರ್​ಗಳು ನಡುರಾತ್ರೀಲಿ ಗಾಂಜಾ ಹಾಗೂ ಮದ್ಯವನ್ನ ಅಕ್ರಮವಾಗಿ ಈ ನದಿ ಮೂಲಕವೇ ತೆಪ್ಪದಲ್ಲಿ ಸಾಗಿಸುತ್ತಾರೆ ಅನ್ನೋ ಪಕ್ಕಾ ಮಾಹಿತಿ ನಮಗೆ ಸಿಕ್ತು.

ನಡುರಾತ್ರಿ ಬೇಟೆಗೆ ರೆಡಿ: ಅಮಾವಾಸ್ಯೆಯ ನಡುರಾತ್ರಿ. ನಾವು ಸ್ಮಗ್ಲರ್​ಗಳ ಜಾಡು ಹಿಡಿದು ಕಪಿಲಾ ನದಿ ದಂಡೆ ಕಡೆ ಪ್ರಯಾಣ ಆರಂಭಿಸಿದ್ವಿ. ಪಕ್ಕದಲ್ಲೇ ಆನೆಗಳ ಹಿಂಡು ರೈತರ ಭತ್ತದ ಬೆಳೆಯನ್ನ ತಿಂದು ಮುಕ್ಕುತ್ತಿತ್ತು. ಜಾಗರೂಕತೆಯಿಂದ ಗಿಡ, ಕಂಟಿ, ಪೊದೆ ದಾಟುತ್ತಾ ನದಿ ದಡ ಸೇರಿದ್ವಿ. ದಟ್ಟವಾದ ಪೊದೆಯೊಳಗೆ ನುಗ್ಗಿ ಕುಳಿತುಕೊಂಡೆವು. ರಾತ್ರಿ 12.15ರಿಂದ ಎರಡು ಗಂಟೆವರೆಗೆ ಆ ಖದೀಮರಿಗಾಗಿ ಕಾದೆವು. ಅಷ್ಟೋತ್ತಿಗೆ ನಮ್ಮ ಪಕ್ಕದಲ್ಲೇ ವಿಷದ ಹಾವೊಂದು ಪೊದೆಯಲ್ಲಿ ಹರಿದಾಡುತ್ತಿತ್ತು. ನಿಧಾನಕ್ಕೆ ಸಾವರಿಸಿಕೊಂಡು, ಧೈರ್ಯದಿಂದ ಕಾದು ಕುಳಿತೆವು. ಅಷ್ಟೋತ್ತಿಗೆ ಇಬ್ಬರು ನದಿ ದಾಟುತ್ತಾ ಕರ್ನಾಟಕ ದಡಕ್ಕೆ ಬಂದು ಕಾದು ಕುಳಿತ್ರು. ಸ್ವಲ್ಪ ಹೊತ್ತಿನ ಬಳಿಕ ಮೂವರ ತಂಡ ಬಂದು ಕ್ಷಣ ಮಾತ್ರದಲ್ಲಿ ವ್ಯವಹಾರ ಮುಗಿಸಿ ಮರೆಯಾಯ್ತು. ಈ ರೀತಿ ಈ ದಂಧೆಕೋರರು ಆರಾಮವಾಗಿಯೇ ತಮ್ಮ ವ್ಯವಹಾರ ಮುಗಿಸಿ ಭರ್ಜರಿ ಹಣ ಸಂಪಾದಿಸುತ್ತಿದ್ದಾರೆ. ಇವರ ದಂಧೆಗೆ ಬ್ರೇಕ್​ ಹಾಕಲು ಅರಣ್ಯ ಇಲಾಖೆಯವರು ಒಂದಿಷ್ಟು ಪ್ರಯತ್ನ ಮಾಡುತ್ತಿದ್ದಾರಂತೆ. ಆದ್ರೆ ನಮ್ಮ ಚೆಕ್​ ಪೋಸ್ಟ್​ಗಳಲ್ಲಿ ಅಬಕಾರಿ, ಪೊಲೀಸ್​ ಠಾಣೆಗಳೇ ಇಲ್ಲ. ಇನ್ನು ಇಲ್ಲಿ ಅಬಕಾರಿ, ಪೊಲೀಸರು ಬರೋದೇ ಅಪರೂಪ. ಹಾಗಾಗಿ ಈ ಖದೀಮರ ಆರಾಮವಾಗಿ ತಮ್ಮ ದಂಧೆ ನಡೆಸುತ್ತಿದ್ದಾರೆ. ಇದು ಕಾಡಿನೊಳಗೆ ಕಷ್ಟಪಟ್ಟು ಜೀವಿಸುತ್ತಿರೋ ಕಾಕನಕೋಟೆ ಮಂದಿಗೆ ನುಂಗಲಾಗದ ತುತ್ತಾಗಿದೆ.

ಇದಕ್ಕೆಲ್ಲಾ ಬ್ರೇಕ್​ ಹಾಕಲು ಗೃಹ ಇಲಾಖೆ ಹಾಗೂ ಅಬಕಾರಿ ಇಲಾಖೆ ತುರ್ತಾಗಿ ಕ್ರಮಕೈಗೊಳ್ಳಬೇಕು. ನೊಂದು ಬೆಂದಿರೋ ಇಲ್ಲಿನ ಮಂದಿಗೆ ಒಂದಿಷ್ಟು ಸಾಂತ್ವಾನ ಹೇಳಬೇಕು. ಇವರ ಮದ್ಯಮುಕ್ತ ಗ್ರಾಮದ ಹೋರಾಟಕ್ಕೆ ಸಹಕಾರ ನೀಡಬೇಕು.

Write A Comment