ಲಕ್ನೋ,ಅ.18: ಹಣದಿಂದ ಏನನ್ನೂ ಕೊಳ್ಳಬಹುದು ಎಂದು ಹೇಳುವವರಿದ್ದಾರೆ.ಆದರೆ ಹಣದಿಂದ ರೋಗವನ್ನೂ ಉಚಿತವಾಗಿ ಪಡೆದುಕೊಳ್ಳಬಹುದು ಎನ್ನುವ ಕಾಲ ಈಗ ಬಂದಿದೆ. ಹೌದು ಕರೆನ್ಸಿ ನೋಟು,ನಾಣ್ಯಗಳಿಂದಲೂ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿದೆಯೆಂದು ಅಧ್ಯಯನವರದಿಯೊಂದು ಬಹಿರಂಗಪಡಿಸಿದೆ.
ಲಕ್ನೋದ ಕಿಂಗ್‌ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಸೂಕ್ಷ್ಮಜೀವಾಣು ಶಾಸ್ತ್ರ ವಿಭಾಗದ ವಿಜ್ಞಾನಿಗಳ ತಂಡವೊಂದು ನಡೆಸಿದ ಅಧ್ಯಯನವು, ಕರೆನ್ಸಿನೋಟುಗಳು ಹಾಗೂ ನಾಣ್ಯಗಳು ಸಾಂಕ್ರಾಮಿಕ ರೋಗಗಳನ್ನು ಹರಡುವ ಸೂಕ್ಷ್ಮಜೀವಿಗಳ ಉಗಮಸ್ಥಾನವಾಗಬಹುದೆಂಬ ಕಳವಳಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಸೈಕಲ್ ರಿಕ್ಷಾ ಎಳೆಯುವವರು, ಔಷಧಿ ಅಂಗಡಿಗಳು,ವ್ಯಾಪಾರಿಗಳು ಮತ್ತಿತರ ಮೂಲಗಳಿಂದ ಸಂಗ್ರಹಿಸಿದ ಕರೆನ್ಸಿ ನೋಟುಗಳು ಹಾಗೂ ನಾಣ್ಯಗಳ ಮೇಲ್ಮೈ ಯಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳು ಪತ್ತೆಯಾಗಿರುವುದಾಗಿ ಅಧ್ಯಯನ ವರದಿಯ ಪ್ರಧಾನ ಲೇಖಕ ಡಾ. ಸುನೀತಾ ಸಿಂಗ್ ಹೇಳಿದ್ದಾರೆ.
‘‘ಕರೆನ್ಸಿ ನೋಟು ಹಾಗೂ ನಾಣ್ಯಗಳು ಸೂಕ್ಷ್ಮಜೀವಿಗಳಿಂದ ಮಾಲಿನ್ಯಗೊಂಡಿರು ವುದನ್ನು ನಮ್ಮ ಸಂಶೋಧನೆಗಳು ತೋರಿಸಿ ಕೊಟ್ಟಿವೆ. ಮಲಿನಗೊಂಡ ಕರೆನ್ಸಿಯು ಅಪಾಯಕಾರಿ ಸೂಕ್ಷ್ಮಜೀವಿಗಳ ಹರಡುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆೆ’’ ಎಂದವರು ಎಚ್ಚರಿಕೆ ನೀಡಿದ್ದಾರೆ. ಅಧ್ಯಯನ ತಂಡವು ಲಕ್ನೋ ನಗರದ ವಿವಿಧೆಡೆಯಿರುವ ತರಕಾರಿ, ಮಾಂಸದಂಗಡಿಗಳು, ಆಟೊರಿಕ್ಷಾ ಚಾಲಕರು, ರಿಕ್ಷಾ ಎಳೆಯುವವರು, ಔಷಧಿ ಅಂಗಡಿಗಳು, ಕ್ಷಯ ರೋಗದ ಹೊರರೋಗಿ ವಿಭಾಗ ಹಾಗೂ ಆಸ್ಪತ್ರೆಯ ಒಪಿಡಿಗಳಿಂದ, ಆಯ್ದ 96 ಪೇಪರ್ ಕರೆನ್ಸಿಗಳನ್ನು ಹಾಗೂ 48 ನಾಣ್ಯಗಳನ್ನು ಪರೀಕ್ಷೆಗೊಳಪಡಿಸಿತ್ತು.
