ಬೆಂಗಳೂರು, ಅ.17: ಮಣಪ್ಪುರಂ ಗೋಲ್ಡ್ ಲೋನ್ ಶಾಖೆಯಲ್ಲಿ ದರೋಡೆ ನಡೆಸಿ ಪರಾರಿಯಾಗಿರುವ ಮುಸುಕುಧಾರಿಗಳ ಸುಳಿವು ಸದ್ಯ ಸಿಕ್ಕಿಲ್ಲ. ಇವರ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜ್ಞಾನಭಾರತಿ ವ್ಯಾಪ್ತಿಯ ಜ್ಞಾನಗಂಗಾನಗರದಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ 2ನೇ ಮಹಡಿಯಲ್ಲಿನ ಮಣಪ್ಪುರಂ ಗೋಲ್ಡ್ ಲೋನ್ ಶಾಖೆಗೆ ಸಿನಿಮೀಯ ರೀತಿಯಲ್ಲಿ ನಾಲ್ವರಿದ್ದ ಮುಸುಕುಧಾರಿ ಗುಂಪು ಸಂಜೆ ಒಳನುಗ್ಗಿ ಸಿಬ್ಬಂದಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದರು.
ಮುಸುಕುಧಾರಿಗಳ ಪತ್ತೆಗಾಗಿ ರಚನೆಗೊಂಡಿರುವ ಮೂರು ತಂಡದ ಪೈಕಿ ಒಂದು ತಂಡ ಘಟನೆ ನಡೆದ ಸುತ್ತಮುತ್ತಲ ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದರೆ, ಮತ್ತೊಂದು ತಂಡ ಹಳೇ ದರೋಡೆಕೋರರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಇನ್ನೊಂದು ತಂಡ ಸ್ಥಳೀಯ ಅಂಗಡಿಗಳು, ಹೋಟೆಲ್ಗಳವರಿಂದ ಸಂಜೆ ಬೈಕ್ನಲ್ಲಿ ಹೆಲ್ಮೆಟ್ ಧರಿಸಿ ಬಂದ ನಾಲ್ವರ ಬಗ್ಗೆ ವಿಷಯ ಸಂಗ್ರಹಿಸುತ್ತಿದೆ. ನಿನ್ನೆ ಸಂಜೆಯಿಂದಲೇ ಕಾಯಾಚರಣೆಯಲ್ಲಿ ತೊಡಗಿರುವ ತಂಡ ಮುಸುಕುಧಾರಿ ದರೋಡೆ ಕೋರರಿಗಾಗಿ ತನಿಖೆ ಚುರುಕುಗೊಳಿಸಿದೆ. ಈ ಹಿಂದೆಯೂ ರಾಜಗೋಪಾಲನಗರದಲ್ಲಿ ಎರಡು ಕಡೆ ಮುತ್ತೂಟ್ ಫೈನಾನ್ಸ್ ಕಚೇರಿಗೆ ನುಗ್ಗಿ ದರೋಡೆಗೆ ಯತ್ನ ನಡೆದಿದ್ದನ್ನು ಸ್ಮರಿಸಬಹುದು.
