ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಕಿಚ್ಚಸುದೀಪ್ ಕೇವಲ ನಟ ಮಾತ್ರನಲ್ಲ ಸಿಂಗರ್ ಕೂಡ, ಜೊತೆಗೆ ನಿರ್ದೇಶಕ ಕೂಡ ಹೌದು. ಸದ್ಯಕ್ಕೆ ಚಿತ್ರರಂಗದಲ್ಲಿ ತಮ್ಮನ್ನು ತಾವು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವ ಕಿಚ್ಚ ಈಗ ತಾವೇ ಆಕ್ಷನ್ ಕಟ್ ಹೇಳಿದ್ದ ಚಿತ್ರವೊಂದರ ಸೀಕ್ವೆಲ್ಗೆ ರೆಡಿಯಾಗಿದ್ದಾರಂತೆ.
ನಟನಾಗಿ ಕಾಣಿಸಿಕೊಂಡಿದ್ದ ಸುದೀಪ್ ಎಂತಹ ನಿರ್ದೇಶಕ ಎನ್ನುವುದನ್ನು ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳಿ ಪ್ರೂವ್ ಮಾಡಿದ್ದ ಮೈ ಆಟೋಗ್ರಾಫ್ ಚಿತ್ರದ ಮೂಲಕ ಉತ್ತಮ ನಿರ್ದೇಶಕನ ಸ್ಥಾನಪಡೆದಿದ್ದರು. ನಿರ್ದೇಶನದ ಮೊದಲ ಚಿತ್ರದಲ್ಲೇ ಡೈರೆಕ್ಟರ್ ಆಗಿ ಮೋಡಿ ಮಾಡಿದ ಇವರು ಆ ನಂತರ ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಮೂಲಕ ಮತ್ತೊಮ್ಮೆ ಡಿಫರೆಂಟ್ ಸ್ಟೋರಿಯನ್ನು ತೆರೆಮೇಲೆ ತಂದರು.
ಈ ಚಿತ್ರದ ಮೇಲೆ ಕುತೂಹಲವೂ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು ಇದಕ್ಕೆ ಕಾರಣ ಕಿಚ್ಚನ ಜೊತೆಗೆ ರಮ್ಯಾ ಮೂರನೇ ಬಾರಿಗೆ ನಾಯಕಿಯಾಗಿ ನಟಿಸಿದ್ದರು. ಸದ್ಯಕ್ಕೆ ನಿರೂಪಕನಾಗಿ ಕಿರುತೆರೆಯ ಬಿಗ್ ಬಾಸ್ ಆಗುವುದಕ್ಕೆ ಹೊರಟಿರುವ ಕಿಚ್ಚ ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಸೀಕ್ವೆಲ್ನ ಸ್ಕ್ರಿಪ್ಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ ಎನ್ನುವ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಶೂಟಿಂಗ್ ಮಧ್ಯದಲ್ಲಿ ಫ್ರೀ ಸಿಕ್ಕಾಗಲೆಲ್ಲ ಜಸ್ಟ್ ಮಾತ್ ಮಾತಲ್ಲಿ 2ನೇ ಅವತರಿಣಿಕೆಗೆ ಸ್ಕ್ರಿಪ್ಟಿಂಗ್ ಮಾಡುತ್ತಾ ಇರುವ ಸುದೀಪ್ ಮುಂದಿನ ವರ್ಷ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ. ಒಟ್ಟಿನಲ್ಲಿ ಜಸ್ಟ್ ಮಾತ್ ಮಾತಲ್ಲಿ ಚಿತ್ರ ಸೂಪರ್ ಹಿಟ್ ಆಗುವುದರ ಜೊತೆಗೆ ಹಾಡುಗಳು ಇಂದಿಗೂ ಜನರ ಮನಸ್ಸಲ್ಲಿ ಮಾಸದೇ ಉಳಿದಿವೆ. ಇದೀಗ ಚಿತ್ರದ 2ನೇ ಅವತರಿಣಿಕೆಯಲ್ಲಿ ರಮ್ಯಾ ಇರುತ್ತಾರ? ರಘು ದೀಕ್ಷಿತ್ ಸಂಗೀತ ಇರುತ್ತದೆಯೇ ಎನ್ನುವುದು ಸದ್ಯದ ಕುತೂಹಲ.
