ಮಂಗಳೂರು,ಅ.15 : ವಿವಾದಾತ್ಮಕ ಎತ್ತಿನಹೊಳೆ ಯೋಜನೆಯ ಅನುಷ್ಠಾನ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋರಾಟ ದಿನದಿಂದ ದಿನಕ್ಕೆ ಭುಗಿಲೇಳುತ್ತಿದೆ. ದ.ಕ. ಜಿಲ್ಲಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದ್ದು, ಜೀವನದಿ ನೇತ್ರಾವತಿ ಉಳಿಸಿಕೊಳ್ಳುವ ಹೋರಾಟದ ಮುಂಚೂಣಿಯಲ್ಲಿರುವ ಸಂಘಟನೆಗಳ ನೇತೃತ್ವದಲ್ಲಿ ಪಕ್ಷಬೇಧ ಮರೆತು ರಾಜಕೀಯ ಮುಖಂಡರು ಸೇರಿದಂತೆ ಸಾವಿರಾರು ಜನರು ಗುರುವಾರ ಬೆಳಿಗ್ಗೆ ಪಂಪ್ವೆಲ್ ವೃತ್ತದ ಬಳಿ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನಾನಿತರು ಪಂಪ್ವೆಲ್ ವೃತ್ತದಲ್ಲಿ ನಾಲ್ಕೂ ರಸ್ತೆಗಳನ್ನು ಬಂದ್ ಮಾಡುವ ಮೂಲಕ ರಸ್ತೆ ತಡೆ ನಡೆಸಿದ್ದಾರೆ. ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರಿಂದ ಪಂಪ್ವೆಲ್ನಲ್ಲಿ ಹೆದ್ದಾರಿ ಬಂದ್ ಆಗಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ರತಿಭಟನಾಕಾರರನ್ನು ಬಲವಂತವಾಗಿ ಬಂಧಿಸಿ, ಬಳಿಕ ಬಿಡುಗಡೆಗೊಳಿಸಿದರು.










