ಕನ್ನಡ ವಾರ್ತೆಗಳು

ಕ.ವಿ.ಮಂ.ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಭೆ,

Pinterest LinkedIn Tumblr

jayamala_zp_sabhe

ಮಂಗಳೂರು, ಅ.15 : ಮೈಸೂರು ವಿಭಾಗಕ್ಕೊಳಪಟ್ಟ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಮಕ್ಕಳಲ್ಲಿನ ಅಪೌಷ್ಟಿಕತೆಯ ಕುರಿತಾಗಿ ಅಧಿಕಾರಿಗಳು ಒದಗಿಸಿರುವ ಮಾಹಿತಿಯು ಅಸಮರ್ಪಕವಾಗಿದ್ದು, ಸಮಿತಿಗೆ ತಕ್ಷಣವೇ ಸಮರ್ಪಕ ಮಾಹಿತಿಯನ್ನು ಒದಗಿಸಬೇಕು ಎಂದು ಕರ್ನಾಟಕ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಸಮಿತಿಯು ಸೂಚಿಸಿದೆ.

ದ.ಕ. ಜಿಪಂ ಸಭಾಂಗಣದಲ್ಲಿ ಇಂದು ಸಮಿತಿಯ ಅಧ್ಯಕ್ಷ ಮಾಲಿಕಯ್ಯ ವಿ. ಗುತ್ತೇದಾರ್ ಅಧ್ಯಕ್ಷತೆಯಲ್ಲಿ ನಡೆದ ಮಹಿಳೆಯರು, ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಕಲ್ಯಾಣ ಯೋಜನೆ/ ಕಾರ್ಯಕ್ರಮಗಳ ಅನುಷ್ಠಾನ ಕುರಿತಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ದೇಶನವನ್ನು ನೀಡಲಾಯಿತು. ಕೆಲ ಜಿಲ್ಲೆಗಳಲ್ಲಿ ಸರಕಾರಿ ಆಸ್ಪತ್ರೆ ವರದಿ ಹಾಗೂ ಅಂಗನವಾಡಿ ಕೇಂದ್ರಗಳ ಆಧಾರದಲ್ಲಿ ಅಧಿಕಾರಿಗಳು ವರದಿಯನ್ನು ತಯಾರಿಸುತ್ತಾರೆ. ಅಂಗನವಾಡಿ ಕೇಂದ್ರಗಳಿಗೆ ಬಾರದ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಲಾಗಿರುವುದಿಲ್ಲ. ಸಭೆಗಾಗಿ ತಂದ ಮಾಹಿತಿ ಇದಾಗಿರುತ್ತದೆ. ಇದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೀರಾ ಎಂದು ಸದಸ್ಯ ಡಾ. ರಾಮಕೃಷ್ಣ ಅಧಿಕಾರಿಗಳನ್ನು ಪ್ರಶ್ನಿಸಿದರು.

ಚಿಕ್ಕಮಗಳೂರಿನ ಪ್ಲಾಂಟೇಶನ್ ಪ್ರದೇಶಗಳಲ್ಲಿ ಬಹಳಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಕ್ಷ ಮಾಲಿಕಯ್ಯ ಹೇಳಿದರು. ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸರಕಾರದಿಂದ ಹಣ ಬರುತ್ತದೆ, ಅದರಲ್ಲಿ ಹಾಲು ಮೊಟ್ಟೆ ಕೊಡುತ್ತೇವೆಂಬ ಅಂಕಿಅಂಶ ನೀಡಿದರೆ ಸಾಲದು. ಅಪೌಷ್ಟಿಕತೆ ಎಷ್ಟರ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ ಹಾಗೂ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ನಿಖರ ಮಾಹಿತಿ ನೀಡುವಂತೆ ಎಸ್. ವಿ. ಸಂಕನೂರ ತಾಕೀತು ಮಾಡಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳ ಅಂಕಿ ಅಂಶಕ್ಕೆ ಬೆರಗಾದ ಸಮಿತಿ!
ವಿಕಲಚೇತನರ ಬಗೆಗಿನ ಸರಕಾರಿ ಯೋಜನೆಗಳ ಅನುಷ್ಠಾನದ ಕುರಿತಂತೆ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ ಗುರುತಿಸಲಾದ 25,055 ವಿಕಲಚೇತನರ ಪೈಕಿ ಮಾನಸಿಕ ಅಸ್ವಸ್ಥರ ಸಂಖ್ಯೆ 2 ಹಾಗೂ ಕುಷ್ಟರೋಗಿಗಳ ಸಂಖ್ಯೆ ಶೂನ್ಯ ಎಂದಾಗ ಸಮಿತಿ ಸದಸ್ಯರು ಬೆರಗಾದರು. ಸಮಿತಿಗೆ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದಾಗ ರಾಜ್ಯ ಮಟ್ಟದ ಅಧಿಕಾರಿ ಪ್ರತಿಕ್ರಿಯಿಸುತ್ತಾ, ರಾಜ್ಯದಲ್ಲಿ ಒಟ್ಟು 13,24,000 ವಿಕಲಚೇತನರನ್ನು ಗುರುತಿಸಲಾಗಿದೆ. ವಿಕಲಚೇತನರಲ್ಲಿರುವ ವಿಭಿನ್ನ ಪ್ರಕಾರಗಳ ಕುರಿತು ಸಮರ್ಪಕ ಮಾಹಿತಿ ಕಲೆ ಹಾಕದೆ ಇರುವುದು ರಾಜ್ಯ ಮಟ್ಟದ ಸಭೆಯಲ್ಲಿ ಗಮನಕ್ಕೆ ಬಂದಿದೆ ಎಂದು ಪ್ರತಿಕ್ರಿಯಿಸಿದರು. ಸಮಿತಿ ಜಂಟಿ ಕಾರ್ಯದರ್ಶಿ ಎಸ್. ಮೂರ್ತಿ, ಸದಸ್ಯರಾದ ಜೆ.ಎಚ್. ಶ್ರೀನಿವಾಸ್, ಸಂಭಾಜಿ ಲಕ್ಷ್ಮಣ ಪಾಟೀಲ್, ಉಮೇಶ್ ಜಾಧವ, ಅಲ್ಲಮಪ್ರಭು ಪಾಟೀಲ್ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಂದಾಯ, ಗೃಹ ಇಲಾಖೆಗೆ ಸಂಬಂಧಿಸಿದ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳು, ಚಿಕ್ಕಮಗಳೂರು ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ, ದ.ಕ. ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಹಾಸನ ಎಎಸ್ಪಿ ಡಾ. ಶೋಭಾ ರಾಣಿ, ಹಾಸನ ಹೆಚ್ಚುವರಿ ಜಿಲ್ಲಾಧಿಕಾರಿ ಜಾನಕಿ ಸೇರಿದಂತೆ ನಾಲ್ಕು ಜಿಲ್ಲೆಗಳ ಜಿಪಂ ಕಾರ್ಯನಿರ್ವಹಣಾಧಿಕಾರಿಗಳು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು.

ಬದ್ಧತೆಯಿಂದ ಕಾರ್ಯನಿರ್ವಹಿಸುವ ಮೇಲ್ವಿಚಾರಕರನ್ನು ಒದಗಿಸಿ
ಗರ್ಭಿಣಿ ಮಹಿಳೆಯರು ಅಪೌಷ್ಟಿಕವಾಗಿರುವುದು ಕೂಡಾ ಮಕ್ಕಳ ಅಪೌಷ್ಟಿಕತೆಗೆ ಕಾರಣವಾಗುತ್ತದೆ. ಇದಕ್ಕಾಗಿ ಮಗು ತಾಯಿಯ ಹೊಟ್ಟೆಯಲ್ಲಿ ಗರ್ಭಾವಸ್ಥೆಯಲ್ಲಿರುವಾಗ ಮತ್ತು ಹುಟ್ಟಿದ ಬಳಿಕ ಕಬ್ಬಿಣಾಂಶದಿಂದ ಕೂಡಿದ ಔಷಧಗಳನ್ನು ನೀಡಬೇಕಾಗುತ್ತದೆ. ಮಾತ್ರವಲ್ಲದೆ, ಎಚ್‌ಐವಿ ಪೀಡಿತ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಈ ನೆಲೆಯಲ್ಲಿ ಅಪೌಷ್ಟಿಕ ಗರ್ಭಿಣಿ ಮಹಿಳೆಯರು ಹಾಗೂ ಮಕ್ಕಳನ್ನು ಗುರುತಿಸಿ ಸೂಕ್ತ ರೀತಿಯ ಚಿಕಿತ್ಸಾ ವ್ಯವಸ್ಥೆಗೆ ಕ್ರಮಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ಸಭೆಗೆ ಮುಂಚಿತವಾಗಿಯೇ ಸರಕಾರದ ಗಮನಕ್ಕೆ ತರಬಹುದಿತ್ತಲ್ಲಾ? ಸರಕಾರಕ್ಕೆ ಬರೆದಿದ್ದೀರಾ ಎಂದು ಸಮಿತಿ ಸದಸ್ಯೆ ಹಾಗೂ ನಟಿ ಡಾ. ಜಯಮಾಲಾರ ಪ್ರಶ್ನೆಗೆ ಡಾ.ವಿಶಾಲ್ ರವಿ ಹೌದು ಎಂದು ಪ್ರತಿಕ್ರಿಯಿಸಿದರು. ಸರಕಾರ ಅನುದಾನ ಹೆಚ್ಚಿಸುವ ಜೊತೆಗೆ, ತಳ ಮಟ್ಟದಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸುವ ಮೇಲ್ವಿಚಾರಕರು ಹಾಗೂ ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿಗಳ ಅಗತ್ಯವಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿಶಾಲ್ ರವಿ ಸಮಿತಿಯ ಗಮನ ಸೆಳೆದರು. ಈ ಬಗ್ಗೆ ಸರಕಾರದ ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತರುವಂತೆ ಅಧ್ಯಕ್ಷ ಮಾಲಿಕಯ್ಯ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಕೃಪೆ: ವಾ.ಭಾ

Write A Comment