ಮೂಡಬಿದ್ರೆ : ದಾಂಪಾತ್ಯ ಜೀವನಕ್ಕೆ ಕಾಲಿಡಲು ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಮೂಡಬಿದಿರೆಯ ಮಹಾವೀರ ಭವನದಲ್ಲಿ ಅಕ್ಟೋಬರ್ 25 ರಂದು ನಡೆಯಲಿರುವ ತನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ತನ್ನ ಸ್ನೇಹಿತರು ಹಾಗೂ ಸಂಬಂಧಿಕರಿಗೆ ನೀಡಲು ತೆರಳಿದ್ದ ಯುವಕನೊಬ್ಬ ಅಪಘಾತದಲ್ಲಿ ತನ್ನ ಜೀವ ಕಳೆದುಕೊಂಡ ಮನಮಿಡಿಯುವ ಘಟನೆಯೊಂದು ಇಂದು ( ಬುಧವಾರ) ಮೂಡಬಿದ್ರೆ ಸಮೀಪದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಬಳಿ ಸಂಭವಿಸಿದೆ.
ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸುತ್ತಿದ್ದ ಘನ ವಾಹನ ಮತ್ತು ಬಸ್ಸೊಂದು ಮಾರುತಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಶಿರ್ತಾಡಿಯ ಫೋಟೊಗ್ರಾಫರ್ ದುರ್ಮರಣ ಹೊಂದಿದ್ದಾರೆ.
ಶಿರ್ತಾಡಿ- ವಾಲ್ಪಾಡಿ ಮಹಾಲಿಂಗೇಶ್ವರ ದೇವಸ್ಥಾನ ದ ಬಳಿಯ ನಿವಾಸಿ ಶ್ರೀಧರ ಆಚಾರ್ಯ ಎಂಬವರ ಪುತ್ರ ಹರೀಶ್ ಆಚಾರ್ಯ (29) ಮೃತಪಟ್ಟ ದುರ್ದೈವಿ. ಸುಮಾರು 10 ವರ್ಷ ಗಳಿಂದ ಮೂಡುಬಿದಿರೆ ಸಹಿತ ಶಿರ್ತಾಡಿ ಯಲ್ಲಿ ಛಾಯಾಗ್ರಾಹಕನಾಗಿ ದುಡಿಯುತ್ತಿದ್ದ ಹರೀಶ್‌ಗೆ ಅ.25ರಂದು ಮೂಡುಬಿದಿರೆ ಮಹಾವೀರ ಭವನದಲ್ಲಿ ಮದುವೆ ನಿಗದಿಯಾಗಿತ್ತು.
ಹರೀಶ್ ಆಚಾರ್ಯ ಅವರು ಬುಧವಾರದಂದು ಕೈಕಂಬದಲ್ಲಿ ನಡೆದ ಕಾರ್ಯಕ್ರಮವೊಂದರ ಛಾಯಾಚಿತ್ರಣ ಮುಗಿಸಿ ಬಳಿಕ ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ತಮ್ಮ ಮದುವೆ ಆಮಂತ್ರಣ ಪತ್ರಿಕೆ ನೀಡಲು ತಮ್ಮ ಕಾರಿನಲ್ಲಿ ತೆರಳುತ್ತಿದ್ದ್ದ ಸಂದರ್ಭ ಮೂಡಬಿದ್ರೆ ಸಮೀಪದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಬಳಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಮಿಜಾರಿನ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಬಳಿ ರಾ.ಹೆ 169ರಲ್ಲಿ ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಬಸ್ ಇವರ ಕಾರಿಗೆ ಢಿಕ್ಕಿ ಹೊಡೆದ ರಭಸಕ್ಕೆ ಕಾರು ಒಂದು ಸುತ್ತು ತಿರುಗಿದೆ. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಘನ ವಾಹನವು ಓವರ್‌ಟೇಕ್ ಮಾಡುವ ಧಾವಂತದಲ್ಲಿ ಕಾರಿಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.
ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹರೀಶ್ ಗಂಭೀರ ಗಾಯಗೊಂಡಿದ್ದರು. ಬಳಿಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಕಾರಿಗೆ ಢಿಕ್ಕಿ ಹೊಡೆದ ಬಳಿಕ ಘನ ವಾಹನ ನಿಲ್ಲಿಸದೆ ಮುಂದೆ ಸಾಗಿದೆ. ಬಳಿಕ ಅದನ್ನು ಮೂಡುಬಿದಿರೆಯಲ್ಲಿ ತಡೆದು ನಿಲ್ಲಿಸಲಾಯಿತು. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ರಾ.ಹೆ ವಿಸ್ತರಣೆಯಾಗದಿರುವುದರಿಂದ ಹೆಚ್ಚಿನ ಅಪಘಾತವಾಗುತ್ತಿದ್ದು, ವಾಹನ ಸವಾರರನ್ನು ಬಲಿ ತೆಗೆದುಕೊಳುತ್ತಿದೆ. ಸರಕಾರ, ರಾ.ಹೆ. ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಮಿಜಾರಿನ ನಾಗರಿಕರು ಒತ್ತಾಯಿಸಿದ್ದಾರೆ.











