ಬೆಂಗಳೂರು: ಮಡಿವಾಳದಲ್ಲಿ ಕಾಲ್‌ಸೆಂಟರ್ ಉದ್ಯೋಗಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಜನಮಾನಸದಲ್ಲಿ ಇನ್ನೂ ಹಸಿರಾಗಿರುವಾಗಲೇ ತಂದೆಯೇ ಮಲ ಮಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಸಂತ್ರಸ್ಥ ಅಪ್ರಾಪ್ತ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕಿಯ ತಾಯಿ ಮೊದಲ ಗಂಡನನ್ನು ತೊರೆದು ಆಟೋ ಚಾಲಕನೊಂದಿಗೆ ಜೀವನ ನಡೆಸುತ್ತಿದ್ದು, ಈ ದಂಪತಿಗೂ ಮಕ್ಕಳಿದ್ದಾರೆ. ಆಟೋ ಚಾಲಕನಿಗೂ ಈಗಾಗಲೇ ಮದುವೆಯಾಗಿದ್ದು, ಪತ್ನಿ ಹಾಗೂ ಮಗ ಬೇರೆ ವಾಸವಿದ್ದಾರೆ.
ಕಳೆದ 2 ದಿನಗಳಿಂದ ಸಂಬಂಧಿಕರ ಮನೆಯಲ್ಲಿದ್ದ ಬಾಲಕಿ ವಾಪಸ್ ತಾಯಿ ಮನೆಗೆ ಬರಲು ನಿರಾಕರಿಸುತ್ತಿದ್ದಳು ಎನ್ನಲಾಗಿದೆ. ಮನೆಗೆ ಬರಲು ಮಗಳು ನಕಾರ ವ್ಯಕ್ತಪಡಿಸುತ್ತಿದ್ದರಿಂದ ಅನುಮಾನಗೊಂಡ ತಾಯಿ ಮಗಳ ಬಳಿ ವಿಚಾರ ಮಾಡಿದಾಗ 2ನೆ ಗಂಡನ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದನ್ನು ಅರಿತ ಆಟೋ ಚಾಲಕ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆಕೈಗೊಂಡ ಪೊಲೀಸರು ಇಂದು ಬೆಳಗ್ಗೆ ಆಟೋ ಚಾಲಕನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
