ಮೈಸೂರು, ಅ.13: ಮೈಸೂರು ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ವಿಶ್ವವಿಖ್ಯಾತ ದಸರಾ ಉತ್ಸವವನ್ನು ರೈತರೊಬ್ಬರು ಉದ್ಘಾಟಿಸುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದರು. ದಸರೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಎಚ್‌ಡಿ ಕೋಟೆ ತಾಲೂಕಿನ ಮಲಾರದ ಪ್ರಗತಿಪರ ರೈತ ಪುಟ್ಟಯ್ಯ ಅವರು, ರೈತರೇ ಧೃತಿಗೆಡಬೇಡಿ, ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ದೇಶವನ್ನೇ ಸಾಕುವ ಶಕ್ತಿ ನಮಗಿದೆ. ಆತ್ಮಹತ್ಯೆ ಮಾಡಿಕೊಂಡರೆ ನಿಮ್ಮ ಕುಟುಂಬಗಳು ಬೀದಿ ಪಾಲಾಗುತ್ತವೆ. ಆತ್ಮಹತ್ಯೆಯಂತಹ ಯೋಚನೆಯಿಂದ ಹಿಂದೆ ಸರಿಯಿರಿ ಎಂದು ರೈತರಿಗೆ ಕಳಕಳಿಯ ಮನವಿ ಮಾಡಿಕೊಂಡರು.
1962ರಲ್ಲಿ ಭೀಕರ ಬರಗಾಲ ಕಂಡಿದ್ದೇನೆ. ನಂತರ 1976ರಲ್ಲಿಯೂ ಅಂತಹದ್ದೇ ಬರಗಾಲ ಕಂಡಿದ್ದೇನೆ. ಆದರೆ ಧೃತಿಗೆಟ್ಟಿಲ್ಲ. ಈಗ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ರೈತರಿಗೆ ನೀಡುತ್ತಿದೆ. ಸಮಗ್ರ ಕೃಷಿಯಿಂದ ಮನುಷ್ಯನ ಬದುಕನ್ನು ಬಂಗಾರ ಮಾಡಿಕೊಳ್ಳಬಹುದು.
ಎಲ್ಲ ರೀತಿಯ ಬೆಳೆ ಬೆಳೆದರೆ ಸಮೃದ್ಧ ಬದುಕು ಸಾಗಿಸಬಹುದು ಎಂದು ಅವರು ಕಿವಿಮಾತು ಹೇಳಿದರು. ಇಂದು ಬೆಳಗ್ಗೆ 11.05ರಿಂದ 11.55ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ವಿಶ್ವವಿಖ್ಯಾತ ದಸರಾಗೆ ಚಾಲನೆ ನೀಡುವ ಮೂಲಕ ಪುಟ್ಟಯ್ಯ ಮುನ್ನುಡಿ ಬರೆದರು. ಈ ಬಾರಿಯ ಸರಳ ದಸರಾಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ವಿ.ಶ್ರೀನಿವಾಸ ಪ್ರಸಾದ್, ಎಚ್.ಎಸ್.ಮಹದೇವ ಪ್ರಸಾದ್, ಉಮಾಶ್ರೀ, ಮೇಯರ್ ಲಿಂಗಪ್ಪ, ಶಾಸಕ ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್, ಜಿ.ಟಿ.ದೇವೇಗೌಡ ಮತ್ತಿತರರು ರೈತ ಪುಟ್ಟಯ್ಯರಿಗೆ ಸಾಥ್ ನೀಡಿದರು.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಇಂದು ಬೆಳಗ್ಗೆ ನಾಡದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ರೈತ ಪುಟ್ಟಯ್ಯ ದೀಪ ಬೆಳಗಿ ದಸರಾ ಆಚರಣೆ ಚಾಲನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪ್ರಸಾದ್, ಸಚಿವರುಗಳಾದ ಮಹದೇವ ಪ್ರಸಾದ್, ಮಹದೇವಪ್ಪ , ಉಮಾಶ್ರೀ , ಟಿ.ಬಿ.ಜಯಚಂದ್ರ, ಮೇಯರ್ ಲಿಂಗಪ್ಪ , ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಆಡಂಬರವಿಲ್ಲ-ಸಂಪ್ರದಾಯ ಬಿಟ್ಟಿಲ್ಲ
ಈ ಬಾರಿಯ ದಸರಾದಲ್ಲಿ ಅದ್ಧೂರಿ, ಆಡಂಬರವಿಲ್ಲ. ಆದರೆ, ಸಂಪ್ರದಾಯಕ್ಕೇನೂ ಧಕ್ಕೆಯಿಲ್ಲ. ರಾಜ್ಯದಲ್ಲಿ ಬರ, ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಆದರೆ, ಸಂಪ್ರದಾಯ ಮತ್ತು ಪರಂಪರೆಯನ್ನು ಮುಂದುವರೆಸಿದ್ದೇವೆ ಎಂದು ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.
ಪ್ರತಿ ಬಾರಿ ದಸರಾ ಆಚರಣೆ 15 ರಿಂದ 18 ಕೋಟಿ ರೂ. ವೆಚ್ಚದಲ್ಲಿ ಆಗುತ್ತಿತ್ತು. ಆದರೆ, ಈ ಬಾರಿ ಕೇವಲ 4 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಆಡಂಬರ, ಅಬ್ಬರ ಮಾಡುತ್ತಿಲ್ಲ. ಸಂಪ್ರದಾಯಗಳನ್ನು ಬಿಟ್ಟಿಲ್ಲ ಎಂದು ಅವರು ಹೇಳಿದರು.ದಸರಾ ಉತ್ಸವಕ್ಕೆ ಗಣ್ಯ ವ್ಯಕ್ತಿಗಳಿಂದ ಚಾಲನೆ ಸಿಗುತ್ತಿತ್ತು. ಆದರೆ, ನಮ್ಮ ಸರ್ಕಾರ ಸಾಮಾನ್ಯ ರೈತನಿಂದ ದಸರಾ ಉತ್ಸವಕ್ಕೆ ಚಾಲನೆ ಕೊಡಿಸಿದೆ. ದೇಶದ ಬೆನ್ನೆಲುಬಾದ ರೈತ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕ ರೈತ ಸಮುದಾಯಕ್ಕೆ ಆದ್ಯತೆ ನೀಡಿದ್ದೇವೆ ಎಂದು ಅವರು ಹೇಳಿದರು.
ದಸರಾ ಉತ್ಸವಕ್ಕೆ ಚಾಲನೆ ನೀಡಿದ ಪ್ರಗತಿಪರ ರೈತ ಪುಟ್ಟಯ್ಯ ಅವರ ರೀತಿಯಲ್ಲಿ ಎಲ್ಲರೂ ಕೃಷಿಯನ್ನು ಅಳವಡಿಸಿಕೊಂಡರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ಅವರು ಎಲ್ಲರಿಗೂ ಆದರ್ಶವಾಗಿದ್ದಾರೆ ಎಂದು ಹೇಳಿದರು.
ರೈತರು ಅಗತ್ಯಕ್ಕಿಂತ ಹೆಚ್ಚು ಸಾಲ ಮಾಡಬೇಡಿ. ಮಾಡಿದ ಸಾಲವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕೆಂದು ಹೇಳಿದ ಅವರು, ಆತ್ಮಹತ್ಯೆಯಂತಹ ಘಟನೆಗಳಿಗೆ ಮುಂದಾಗಬೇಡಿ ಎಂದು ಸಲಹೆ ಮಾಡಿದರು.
ಮುಂಜಾನೆಯಿಂದಲೇ ಸಂಭ್ರಮ
ಮುಂಜಾನೆ 5 ಗಂಟೆಯಿಂದಲೇ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ದೇವಿಕೆರೆಯಿಂದ ಗಂಗಾಜಲ ತಂದು ಅಭಿಷೇಕ ಮಾಡಲಾಯಿತು ನಂತರ ಪಂಚಾಮೃತಾಭಿಷೇಕ, ಮಹಾಭಿಷೇಕ ನೆರವೇರಿಸಿ ದೇವಿಗೆ ಶ್ರೀಚಕ್ರ ಪೂಜೆ ಮಾಡಿ ವಿಶೇಷ ಅಲಂಕಾರದಿಂದ ಸಿಂಗರಿಸಲಾಗಿತ್ತು.
ಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆ ಬಳಿಯಿಂದ ಗಣ್ಯರನ್ನು ಪೂರ್ಣಕುಂಭದೊಂದಿಗೆ ಕರೆತರಲಾಯಿತು. ಮೊದಲಿಗೆ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಆನಂತರ ದೇವಾಲಯದ ಪಕ್ಕದಲ್ಲಿ ವಿಶೇಷವಾಗಿ ನಿರ್ಮಿಸಲಾಗಿರುವ ಬೃಹತ್ ವೇದಿಕೆಯಲ್ಲಿ ಬೆಳ್ಳಿ ರಥದಲ್ಲಿ ಆಸೀನಳಾಗಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಚಾಮುಂಡೇಶ್ವರಿ ದೇವಾಲಯವನ್ನು ತಳಿರು-ತೋರಣ, ಬಣ್ಣಬಣ್ಣದ ಹೂಗಳು, ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದ್ದು, ಎಲ್ಲೆಲ್ಲೂ ಸಡಗರ ಮನೆಮಾಡಿದೆ.
ಮಹಿಷಾಸುರನ ಪ್ರತಿಮೆ ಬಳಿಯಿಂದ ದೇವಾಲಯದ ಮುಂಭಾಗದವರೆಗೆ ಬಣ್ಣಬಣ್ಣದ ರಂಗೋಲಿ ಬಿಡಿಸಿದ್ದು ನೋಡುಗರ ಕಣ್ಮನ ಸೂರೆಗೊಳ್ಳುತ್ತಿದೆ. ವಿಶೇಷ ವೇದಿಕೆಯಲ್ಲಿ ರೈತರು, ಮಹಿಳೆಯರು, ವಿಐಪಿಗಳು, ಸಾರ್ವಜನಿಕರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 8 ಗಂಟೆ ನಂತರ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಆತ್ಮಹತ್ಯೆಗೆ ಮುನ್ನ ಯೋಚಿಸಿ: ಸಿಎಂ
ಮೈಸೂರು: ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಸರ್ಕಾರ ನಿಮ್ಮೊಂದಿಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರೈತ ಸಮುದಾಯಕ್ಕೆ ಮನವಿ ಮಾಡಿದರು. ವಿಶ್ವ ವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆತ್ಮಹತ್ಯೆಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ.ಆತ್ಮಹತ್ಯೆಗೂ ಮುನ್ನ ನಿಮ್ಮ ಕುಟುಂಬದ ಬಗ್ಗೆ ಐದು ನಿಮಿಷ ಯೋಚಿಸಿ ಎಂದರು.
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು , ಸುಮಾರು 136 ತಾಲ್ಲೂಕುಗಳಲ್ಲಿ ಬರಗಾಲ ಕಾಮಗಾರಿ ಆರಂಭಿಸಲು ಕೇಂದ್ರಕ್ಕೆ ನೆರವು ಕೇಳಿದರೂ ಇದುವರೆಗೂ ಕೇಂದ್ರ ಸ್ಪಂದಿಸಿಲ್ಲವೆಂದು ಅವರು ದೂರಿದರು. ತಮ್ಮ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಆತ್ಮಹತ್ಯೆ ಸಂಖ್ಯೆ ಕಡಿಮೆಯಾಗಿದೆ ಎಂದ ಅವರು, ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.
ಅರಮನೆಯಲ್ಲಿ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದರ್ಬಾರ್ ಶುರು
ಮೈಸೂರು: ಇದೇ ಪ್ರಥಮ ಬಾರಿಗೆ ಸಿಂಹಾಸನಾ ರೂಢರಾಗುತ್ತಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿಧಿವಿಧಾನದಂತೆ ಮೈಸೂರು ಅರಮನೆಯಲ್ಲಿ ದಸರಾ ಅಂಗವಾಗಿ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದರು. ಬರ, ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಈ ಬಾರಿಯ ಮೈಸೂರು ದಸರಾವನ್ನು ಸರ್ಕಾರ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದು, ಇತ್ತ ಅರಮನೆಯಲ್ಲಿ ಯದುವಂಶಸ್ಥರು ಸಂಪ್ರದಾಯದಂತೆ ದಸರಾ ವೇಳೆಯ ಪೂಜಾಕಾರ್ಯ ವಿಧಿ-ವಿಧಾನಗಳನ್ನು ನಡೆಸುತ್ತಿದ್ದಾರೆ. ಮುಂಜಾನೆ ಅಭ್ಯಂಜನ ನೆರವೇರಿಸಿದ ನಂತರ ಯದುವೀರರು ಅರಮನೆಯ ವಾದ್ಯಗಳೊಂದಿಗೆ ಆವರಣದಲ್ಲಿನ ಕೋಡಿ ಸೋಮನಾಥೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಗಂಗೆ ತಂದರು. ಇದೇ ವೇಳೆ ಅರಮನೆಯ ಪಟ್ಟದ ಆನೆ, ಪಟ್ಟದ ಕುದುರೆಗೂ ಪೂಜೆ ಸಲ್ಲಿಸಿದರು.
ಆನಂತರ ಕಳಸಪೂಜೆ, ಗಣಪತಿ ಪೂಜೆ, ನಾಡ ಅಧಿದೇವತೆ, ಕುಲದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದರ್ಬಾರ್ ಪೋಷಾಕಿನಲ್ಲಿ ಅಂಬಾವಿಲಾಸ ಅರಮನೆಯ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿ ದರ್ಬಾರ್ ಹಾಲ್ ಪ್ರವೇಶಿಸಿದರು.
ದರ್ಬಾರ್ ಹಾಲ್‌ಗೆ ರಾಜರ ಆಗಮನವಾಗುತ್ತಿದ್ದಂತೆ ಅಲ್ಲಿದ್ದ ಜನರು ಬಹು ಪರಾಕ್ ಕೂಗಿದರು. ರಾಜಗಾಂಭೀರ್ಯದಲ್ಲಿ ನಡೆದು ಬಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಿಂಹಾಸನದ ಬಳಿ ಗಣಪತಿ ಪೂಜೆ ಸಲ್ಲಿಸಿ ಸಿಂಹಾಸನಕ್ಕೂ ಪೂಜೆ ಮಾಡಿ ಮಂತ್ರಘೋಷಗಳ ನಡುವೆ ಸಿಂಹಾಸನಾರೂಢರಾದರು. ರಾಜವಂಶಸ್ಥರು ಮಹಾರಾಜನಿಗೆ ಗೌರವ ವಂದನೆ ಸಲ್ಲಿಸಿದರು. ಆನಂತರ ಅರಮನೆ ಆವರಣದಲ್ಲಿನ ಎಲ್ಲ ದೇವಾಲಯಗಳು, ಚಾಮುಂಡಿಬೆಟ್ಟದ ದೇಗುಲ, ಶೃಂಗೇರಿಪೀಠ, ನಗರದ ಕಾಮಕಾಮೇಶ್ವರಿ ದೇವಸ್ಥಾನ, ತಿರುಪತಿ ದೇವಸ್ಥಾನ, ತಮಿಳುನಾಡಿನ ಶ್ರೀರಂಗಂ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ತಂದ ತೀರ್ಥ ಪ್ರಸಾದಗಳನ್ನು ಯದುವೀರರಿಗೆ ದೇವಾಲಯದವರು ನೀಡಿದರು.
ತೀರ್ಥ ಪ್ರಸಾದ ಸ್ವೀಕರಿಸಿದ ಯದುವೀರರು ಅವರಿಗೆಲ್ಲ ನಮಸ್ಕರಿಸಿ ಆಶೀರ್ವಾದ ಪಡೆದು ಗೌರವಧನ ನೀಡಿ ಗೌರವಿಸಿದರು. ದೇಶ, ಜನತೆಯ ಯೋಗಕ್ಷೇಮ ವಿಚಾರಿಸುತ್ತಾ ಮಹಾರಾಜರು ಖಾಸಗಿ ದರ್ಬಾರ್ ನಡೆಸಿದರು. ದರ್ಬಾರ್ ಮುಗಿದ ನಂತರ ಸಿಂಹಾಸನದಿಂದ ಇಳಿದು ಅದಕ್ಕೆ ವಂದಿಸಿ ಕುಲದೇವತೆಗೆ ಪೂಜೆ ಸಲ್ಲಿಸಿದರು. ನಂತರ ಯದುವೀರರಿಗೆ ಆರತಿ ಬೆಳಗಲಾಯಿತು. ಮಹಾರಾಜರು ಅವಿವಾಹಿತರಾದ್ದರಿಂದ ದಂಪತಿ ಪೂಜೆ ನಡೆಯಲಿಲ್ಲ.




