ಮಂಗಳೂರು, ಅ.13: ಇಂದಿನ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ನೈತಿಕತೆಯ ಕೊರತೆಯಿಂದಾಗಿ ಹೊಸ ಪೀಳಿಗೆ ಅಧಾರ್ಮಿಕ ಪರಿಸರದಲ್ಲಿ ಬೆಳೆಯುವಂತಾಗಿದೆ. ಇದನ್ನು ಹೋಗಲಾಡಿಸಲು ನಮ್ಮ ಆಧುನಿಕ ಶಿಕ್ಷಣ ಪಠ್ಯಗಳನ್ನು ನೈತಿಕತೆ ಹಾಗೂ ಧಾರ್ಮಿಕತೆಯನ್ನು ಕಲಿಸುವ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕೆಂದು ವಿಶ್ವ ವಿಖ್ಯಾತ ಶಿಕ್ಷಣ ಕೇಂದ್ರ ಕಲ್ಲಿಕೋಟೆ ಮರ್ಕಝ್ನ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಅವರು ನಗರದ ಸಹೋದಯ ಸಭಾಂಗಣದಲ್ಲಿ ನಡೆದ ಮರ್ಕಝ್ ಎಕ್ಸೆಲ್ಲೆನ್ಸಿ ಕ್ಲಬ್ನ ಚಾಲನಾ ಸಭೆಯಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡುತ್ತಿದ್ದರು. ಜಗತ್ತಿನ ಅತೀ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಹಿಂಸಾಚಾರಗಳಿಗೆ ಶಿಕ್ಷಣದಲ್ಲಿನ ನೈತಿಕತೆಯ ಕೊರತೆಯೇ ಕಾರಣವೆಂದು ಅವರು ಅಭಿಪ್ರಾಯಪಟ್ಟರು.
ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಧ್ಯಕ್ಷತೆ ವಹಿಸಿದರು. ಸಚಿವ ಯು.ಟಿ. ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಬೇಕಲ್ ಇಬ್ರಾಹೀಂ ಮುಸ್ಲಿಯಾರ್, ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಪಿ.ಡಂ. ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಶಾಸಕ ಮೊೈದಿನ್ ಬಾವಾ, ಉದ್ಯಮಿಗಳಾದ ಯೆನಪೋಯ ಮಹಮ್ಮದ್ ಕುಂಞ, ಅನಿವಾಸಿ ಉದ್ಯಮಿ ಝಕರಿಯ್ಯಾ: ಬಜಪೆ, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಅಝೀಝ್ ಹಸನ್ ಹಾಜಿ, ಮುಂತಾದವರು ಶುಭಾಶಯ ಸಲ್ಲಿಸಿದರು.
ಕಲ್ಲಿಕೋಟೆ ಮರ್ಕಝ್ ನಿರ್ದೇಶಕರು ಡಾ. ಅಬ್ದುಲ್ ಹಕೀಂ ಅಝ್ಹರಿ, ಮರ್ಕಝ್ ಎಚ್.ಆರ್. ಮೇನೇಜರ್ ಹಮೀದ್ ಹಸನ್, ಅಬ್ದುರ್ರಶೀದ್ ಝೈನಿ ಮುಂತಾದವರು ಭಾಷಣ ಮಾಡಿದರು.
ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ ಸ್ವಾಗತಿಸಿ, ಹೈದರ್ ಪರ್ತಿಪಾಡಿ ಧನ್ಯವಾದ ಸಲ್ಲಿಸಿದರು.

















