ಉಡುಪಿ: ಸಂಪೂರ್ಣವಾಗಿ ಹದಗೆಟ್ಟ ತಾಲೂಕಿನ ತೆಕ್ಕಟ್ಟೆ-ದಬ್ಬೆಕಟ್ಟೆ ರಸ್ತೆಯ ಶೀಘ್ರ ದುರಸ್ಥಿಗೆ ಆಗ್ರಹಿಸಿ ವಿವಿಧ ಸಂಘಟನೆಗಳ ನೇತ್ರತ್ವದಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರೊಡಗೂಡಿ ಮಂಗಳವಾರ ತೆಕ್ಕಟ್ಟೆಯಲ್ಲಿ ಪ್ರತಿಭಟನೆ ನಡೆಸಿದರು.
ಉಡುಪಿ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬರುವ ಈ ತೆಕ್ಕಟ್ಟೆ-ದಬ್ಬೆಕಟ್ಟೇಯ ಸುಮಾರು 10 ಕೀ.ಮೀ. ರಸ್ತೆ ಹಲವಾರು ತಿಂಗಳುಗಳಿಂದ ಸಂಪೂರ್ಣ ಹದಗೆಟಿದ್ದರೂ ಕೂಡ ಸಂಬಂಧಪಟ್ಟ ಇಲಾಖೆ ಜಾಣಕುರುಡು ಪ್ರದರ್ಶಿಸುತ್ತಿದೆ. ಈ ಭಾಗದ ಗ್ರಾಮಗಳಾದ ಉಳ್ತೂರು, ಮಲ್ಯಾಡಿ, ಕೆದೂರು, ಚಾರುಕೊಟ್ಟಿಗೆ ಹಾಗೂ ಬೇಳೂರು ಸೇರಿದಂತೆ ಹಲವು ಗ್ರಾಮಗಳ ಜನರು ನಿತ್ಯ ಇದೇ ಹದಗೆಟ್ಟ ರಸ್ತೆಯನ್ನು ಅವಲಂಭಿಸಬೇಕಾದ ಅನಿವಾರ್ಯತೆಯಿದೆ. ನಿತ್ಯ ನೂರರು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಯಾತನಾಮಯ ಸಂಚಾರ ನಡೆಸುತ್ತಿದ್ದಾರೆ. ಅಪಯಕಾರಿ ಹೊಂಡಗಳಿರುವ ಕಾರಣ ನಿತ್ಯ ಏಳು-ಬೀಳು ಗ್ಯಾರೆಂಟಿ ಎಂದು ಇದೇ ಸಂದರ್ಭ ಪ್ರತಿಭಟನಾಕಾರರು ತಮ್ಮ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಈ ಭಾಗದ ಜನಪ್ರತಿನಿಧಿಗಳು ಏನು ಮಾಡ್ತಿದ್ದಾರೆ? ಜನರ ಸಮಸ್ಯೆಯ ಅರಿವು ಅವರಿಗಾಗುತ್ತಿಲ್ಲವೇ? ಸಂಬಂದಪಟ್ಟ ಇಲಾಖೆ ಯಾಕೆ ಕ್ರಮಕೈಗೊಳ್ಳುತ್ತಿಲ್ಲವೆಂದು ತಮ್ಮ ಆಕ್ರೋಷ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಮುಂದಿನ 15 ದಿನಗಳೊಳಗಾಗಿ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ಬ್ರಹತ್ ಹೋರಾಟ ನಡೆಸುವ ಬಗ್ಗೆಯೂ ಇದೇ ಸಂದರ್ಭ ಹೇಳೀದ್ದಾರೆ. ಮಂಗಳವಾರ ಪ್ರತಿಭಟನೆ ಸಂದರ್ಭ ಕೆಲಕಾಲ ತೆಕ್ಕಟ್ಟೆ-ದಬ್ಬೆಕಟ್ಟೆ ರಸ್ತೆ ತಡೆದು ಆಕ್ರೋಷ ವ್ಯಕ್ತಪಡಿಸಲಾಯಿತು. ಬಳಿಕ ಸಂಬಂದಪಟ್ಟ ಇಂಜಿನಿಯರ್ ಅವರಿಗೂ ಮನವಿಯನ್ನು ನೀಡಲಾಯ್ತು.
ಬಜರಂಗದಳ ತೆಕ್ಕಟ್ಟೆ, ಜಯಕರ್ನಾಟಕ ತೆಕ್ಕಟ್ಟೆ, ಯುವಕಮಂಡಲ (ರಿ.) ಉಳ್ತೂರು, ವಾಹನ ಚಾಲಕರ ಮತ್ತು ಮಾಲಕರ ಸಂಘ (ರಿ) ತೆಕ್ಕಟ್ಟೆ, ತೆಕ್ಕಟ್ಟೆ ಫ್ರೆಂಡ್ಸ್ (ರಿ.) ತೆಕ್ಕಟ್ಟೆ, ಯೂತ್ ರೋರ್ ತೆಕ್ಕಟ್ಟೆ ಹಾಗೂ ಕಾರ್ಮಿಕ ಸಂಘಟನೆ ತೆಕ್ಕಟ್ಟೆ ಮೊದಲಾದ ಸಂಘಟನೆಗಳೊಂದಿಗೆ ತೆಕ್ಕಟ್ಟೆ, ಕೆದೂರು, ಚಾರುಕೊಟ್ಟಿಗೆ, ಬೇಳೂರು ಗ್ರಾಮಸ್ಥರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜೀವ್ ಶೆಟ್ಟಿ ಮಲ್ಯಾಡಿ, ಸ್ಪೂರ್ತಿಧಾಮದ ಕಾರ್ಯನಿರ್ವಾಹಕ ಮುಖ್ಯಸ್ಥ ಡಾ. ಕೇಶವ ಕೋಟೇಶ್ವರ, ತೆಕ್ಕಟ್ಟೆ ಫ್ರೆಂಡ್ಸಿನ ಪ್ರಕಾಶ ಶೆಟ್ಟಿ ತೆಕ್ಕಟ್ಟೆ, ಪ್ರಶಾಂತ ಶೆಟ್ಟಿ, ಪ್ರತಾಪ್ ಶೆಟ್ಟಿ ಉಳ್ತೂರು, ಬಜರಂಗದಳದ ಶ್ರೀನಾಥ ಶೆಟ್ಟಿ, ವಿಶ್ವಹಿಂದೂ ಪರಿಷತ್ ನ ರಜತ್ ತೆಕ್ಕಟ್ಟೆ, ಸುಧೀರ್ ಶೆಟ್ಟಿ ಮಲ್ಯಾಡಿ, ಅವಿನಾಶ್ ಉಳ್ತೂರು ಮೊದಲಾದವರಿದ್ದರು.








