ಕನ್ನಡ ವಾರ್ತೆಗಳು

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಕ್ಕೆ ವಕ್ಫ್ ಸಚಿವ ಖಮರುಲ್ ಇಸ್ಲಾಂ ಭೇಟಿ.

Pinterest LinkedIn Tumblr

Chilmbi_hostl_vistit_1

ಮಂಗಳೂರು, ಅ.13: ಅಲ್ಪಸಂಖ್ಯಾತ ಇಲಾಖೆಗೆ ಸೇರಿದ ವಿವಿಧ ವಿದ್ಯಾರ್ಥಿ ನಿಲಯಗಳ ಸಿಬ್ಬಂದಿಯ ಕೊರತೆ ನೀಗಿಸುವ ನಿಟ್ಟಿನಲ್ಲಿ ಆಯ್ಕೆ ಪ್ರಕ್ರಿಯೆ ಆರಂಭ ಗೊಂಡಿದ್ದು, ಪ್ರಥಮ ಹಂತದಲ್ಲಿ 1,000 ಸಿಬ್ಬಂದಿಯ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಸಚಿವ ಖಮರುಲ್ ಇಸ್ಲಾಂ ಹೇಳಿದ್ದಾರೆ.

ಅವರು  ನಗರದ ಚಿಲಿಂಬಿ ಬಳಿ ಇರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು. ಕಳೆದ 14 ವರ್ಷಗಳಿಂದ ವಿವಿಧ ವಿದ್ಯಾರ್ಥಿ ನಿಲಯಗಳಲ್ಲಿರುವ ಸಿಬ್ಬಂದಿಯ ಕೊರತೆ, ವಾರ್ಡನ್, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯ ನೇಮಕ ಪ್ರಥಮ ಹಂತದಲ್ಲಿ ನೆರವೇರಲಿದ್ದು, ದ್ವಿತೀಯ ಹಂತದಲ್ಲಿ ಡಿ ಗ್ರೂಪ್ ನೌಕರರನ್ನು ಜಿಲ್ಲಾ ವ್ಯಾಪ್ತಿಯಲ್ಲೇ ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದವರು ತಿಳಿಸಿದರು.

Chilmbi_hostl_vistit_2 Chilmbi_hostl_vistit_3 Chilmbi_hostl_vistit_4

ಅಲ್ಪಸಂಖ್ಯಾತ ಭವನ ಶೀಘ್ರದಲ್ಲೇ ನಿರ್ಮಾಣ: 
ಪಾಂಡೇಶ್ವರದ 17 ಸೆಂಟ್ಸ್ ಸರಕಾರಿ ಭೂಮಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವೌಲಾನಾ ಆಝಾದ್ ಹೆಸರಿನ ಅಲ್ಪಸಂಖ್ಯಾತ ಭವನದ ಕಾಮಗಾರಿ ಶೀಘ್ರ ದಲ್ಲೇ ಆರಂಭಗೊಳ್ಳಲಿದೆ. ಈ ಮೊದಲು ಹೈಕೋರ್ಟ್‌ನಲ್ಲಿ ಈ ಬಗ್ಗೆ ತಡೆಯಾಜ್ಞೆ ಇದ್ದು, ಪ್ರಕರಣವನ್ನು ಹೈಕೋರ್ಟ್ ಕೆಎಟಿಗೆ ವರ್ಗಾಯಿಸಿದೆ. ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಯಾವುದೇ ತೊಂದರೆ ಇಲ್ಲದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದವರು ವಿವರಿಸಿದರು.

6 ತಿಂಗಳ ಕಂಪ್ಯೂಟರ್ ತರಗತಿ:
ಅಲ್ಪಸಂಖ್ಯಾತ ಹಾಸ್ಟೆಲ್‌ಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರು ತಿಂಗಳ ಕಂಪ್ಯೂಟರ್ ಹಾಗೂ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಆರಂಭಿಸಲು ಚಿಂತಿಸಲಾಗಿದೆ. ಚಿಲಿಂಬಿಯ ಹಾಸ್ಟೆಲ್‌ನಲ್ಲಿ ಈಗಾಗಲೇ ವಿದ್ಯಾರ್ಥಿಗಳ ಉಪಯೋಗಕ್ಕೆ 4 ಕಂಪ್ಯೂಟರ್‌ಗಳಿವೆ. ಕಂಪ್ಯೂಟರ್ ತರಗತಿಗಾಗಿ ಇನ್ನಷ್ಟು ಕಂಪ್ಯೂಟರ್‌ಗಳನ್ನು ಒದಗಿಸಲಾಗುವುದು ಎಂದವರು ಹೇಳಿದರು.

chilmbi_hostel_vist_5 chilmbi_hostel_vist_6 chilmbi_hostel_vist_7 chilmbi_hostel_vist_8 chilmbi_hostel_vist_9

ದ.ಕ. ಜಿಲ್ಲೆಯಿಂದ 6 ಮಂದಿಗೆ ವಿದೇಶದಲ್ಲಿ ಶಿಕ್ಷಣಕ್ಕೆ ನೆರವು: 
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಶಿಕ್ಷಣ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಿದ್ದು, ಇಲಾಖೆಯಿಂದ ಈ ವರ್ಷ 200 ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಮುಂದುವರಿಸಲು ವಿದ್ಯಾರ್ಥಿ ವೇತನ ನೀಡಲಾಗಿದೆ. ವರ್ಷಕ್ಕೆ ತಲಾ 10 ಲಕ್ಷ ರೂ.ನಂತೆ 2 ವರ್ಷ ಗಳಿಗೆ ಒಬ್ಬ ವಿದ್ಯಾರ್ಥಿಗೆ ತಲಾ 20 ಲಕ್ಷ ರೂ.ಗಳ ವಿದ್ಯಾರ್ಥಿ ವೇತನವನ್ನು ಒದಗಿಸಲಾಗುತ್ತಿದೆ. ದ.ಕ. ಜಿಲ್ಲೆಯಿಂದ 6 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ.

ಈ ಸಂದರ್ಭ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಅಕ್ರಂ ಪಾಶಾ, ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ಅಧಿಕಾರಿ (ಪ್ರಭಾರ) ಉಸ್ಮಾನ್, ಚಿಲಿಂಬಿ ಹಾಸ್ಟೆಲ್‌ನ ವಾರ್ಡನ್ (ಪ್ರಭಾರ) ಮಹಾಲಕ್ಷ್ಮಿ ಉಪಸ್ಥಿತರಿದ್ದರು.

Write A Comment