ನವದೆಹಲಿ,ಅ.11-ಲೈಂಗಿಕ ದೌರ್ಜನ್ಯ, ಅತಿಯಾದ ಅಪರಾಧೀಕರಣ ಹಾಗೂ ನಗರೀಕರಣಗಳಿಗೆ ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಿದಾಡುವ ಅಶ್ಲೀಲ ವಿಡಿಯೋ ಚಿತ್ರಗಳೇ ಪ್ರಮುಖ ಕಾರಣವಾಗಿದ್ದು, ಇದರಿಂದಾಗಿ ಯುವಜನತೆ ಸಾಮಾಜಿಕ ಮೌಲ್ಯಗಳಿಗೆ ತಿಲಾಂಜಲಿ ಕೊಡುತ್ತಿದ್ದಾರೆ. ಇದು ಹೀಗೇ ಮುಂದುವರೆದರೆ ಮುಂದೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಖಡಕ್ ಎಚ್ಚರಿಕೆ ನೀಡಿದೆ.
ಅಂತರ್ಜಾಲದಲ್ಲಿ ಪ್ರದರ್ಶನವಾಗುವ ಹಿಂಸಾತ್ಮಕ ಲೈಂಗಿಕ ದೌರ್ಜನ್ಯ ವಿಡಿಯೋಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ನೋಟಿಸ್‌ಗೆ ಪ್ರಮಾಣ ಪತ್ರ ಸಲ್ಲಿಸಿರುವ ಸಿಬಿಐ, ವಿಶೇಷವಾಗಿ ನಗರಗಳಲ್ಲಿ ದಿನದಿನವೂ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದಕ್ಕೆ ಮುಖ್ಯ ಕಾರಣ ಅಶ್ಲೀಲ ಚಿತ್ರಗಳ ವಿಡಿಯೋಗಳು ಮತ್ತು ನಗರೀಕರಣಕ್ಕೂ ಇದು ಮೂಲವಾಗಿದೆ.
ಇಂದು ಈ ವಿಷಯ ಸಮಾಜದಲ್ಲಿ ತೀವ್ರವಾದ ಬಿಕ್ಕಟ್ಟು ಸೃಷ್ಟಿಸಿದೆ ಎಂದು ಹೇಳಿದೆ. ಬರಬರುತ್ತಾ ಭಾರತೀಯರು ಹಿಂಸಾತ್ಮಕ ಲೈಂಗಿಕ ದೌರ್ಜನ್ಯದತ್ತ ವೇಗವಾಗಿ ಹೋಗುತ್ತಿದ್ದಾರೆ. ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿರುವುದಕ್ಕೆ ಅಂತರ್ಜಾಲದಲ್ಲಿನ ಅಶ್ಲೀಲ ವಿಡಿಯೋಗಳು ಕಾರಣ ಎನ್ನುವ ಸಿಬಿಐ, ಇನ್ನೊಂದೆಡೆ ವೆಬ್‌ಗಳಲ್ಲಿ ಅಶ್ಲೀಲ ಚಿತ್ರ ಅಪ್‌ಲೋಡ್ ಮಾಡುವ ದುಷ್ಕರ್ಮಿಗಳನ್ನು ಶಿಕ್ಷಿಸಲು ರಾಜ್ಯಗಳ ಪೊಲೀಸರಿಗೆ ಕಾರ್ಯ ಕ್ಷೇತ್ರದ ಸಮಸ್ಯೆ ಹಾಗೂ ಇಂತಹ ಸೈಬರ್ ಅಪರಾಧಗಳಿಗೆ ಶಿಕ್ಷೆಯ ಕುರಿತಾದ ನಿರ್ದಿಷ್ಟ ಮಾಹಿತಿಗಳಿಲ್ಲ ಎಂದಿದೆ. ಕಾನೂನಿನ ದೌರ್ಬಲ್ಯಗಳ ಉಪಯೋಗ ಪಡೆಯುವ ಅಪರಾಧಿಗಳು ರಾಜಾರೋಷವಾಗಿಯೇ ಅಂತರ್ಜಾಲದಲ್ಲಿ ಅಶ್ಲೀಲ ಚಿತ್ರಗಳನ್ನು ಹರಿಬಿಡುತ್ತಾರೆ. ತನ್ಮೂಲಕ ಅಪರಾಧಗಳೂ ಹೆಚ್ಚುತ್ತಿವೆ. ಭಾರತೀಯ ಮಹಿಳೆಯರು, ಮಕ್ಕಳು ಭಾರೀ ಸಂಖ್ಯೆಯಲ್ಲಿ ದೌರ್ಜನ್ಯಗಳಿಗೆ ಗುರಿಯಾಗುತ್ತಿದ್ದಾರೆ. ಇದನ್ನು ತಡೆಯಬೇಕಾದರೆ ಬಿಗಿ ಕಾನೂನಿನ ಅಗತ್ಯವಿದೆ. ಪ್ರಸಕ್ತ ನಮ್ಮಲ್ಲಿರುವ ಕಾನೂನುಗಳು ದುರ್ಬಲವಾಗಿವೆ. ಇಂತಹ ಘೋರ ಅಪರಾಧಗಳ ಮೂಲದ ಬಗ್ಗೆ ಗಮಹರಿಸುವುದಕ್ಕೆ ಇದು ಸಕಾಲವಾಗಿದೆ. ಅಂತರ್ಜಾಲದ ದುರ್ಬಳಕೆಯನ್ನು ತೊಡೆಯಲು ಸೂಕ್ತ ಕಾಯ್ದೆಗಳನ್ನು ಅನುಷ್ಠಾನಕ್ಕೆ ತರಬೇಕಾಗಿದೆ. ಇಲ್ಲವಾದರೆ ಸಮಾಜದಲ್ಲಿ ಅಶಾಂತಿ ಮನೆ ಮಾಡಲಿದೆ ಎಂದು ಸಿಬಿಐ ಎಚ್ಚರಿಸಿದೆ. ಮಹಿಳೆ, ಮಕ್ಕಳ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದು ಅದು ಹೇಳಿದೆ.