ವಾಷಿಂಗ್ಟನ್: ಪಾಕಿಸ್ತಾನದಿಂದ ನಮಗೆ ಸ್ವಾತಂತ್ರ್ಯ ಬೇಕು.. ಇದು ಭಾರತದ ಗಡಿಯಲ್ಲಿರುವ ಪ್ರಜೆ ಮನವಿಯಲ್ಲ. ಬದಲಿಗೆ ಪಾಕಿಸ್ತಾನದಲ್ಲೇ ಇರುವ ಪಾಕ್ ಪ್ರಜೆಗಳ ಆಗ್ರಹವಾಗಿದೆ.
ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆಯ ಒಳಗೆ ಮತ್ತು ಹೊರಗೆ ಸದಾಕಾಲ ಭಾರತದೊಂದಿಗೆ ಕಾಲುಕೆರೆದು ಬರುವ ಪಾಕಿಸ್ತಾನಕ್ಕೆ ಇದೀಗ ಮೊಹಜೀರ್, ಬಲೋಚ್ ಸಮುದಾಯಗಳ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಸ್ವತಃ ಪಾಕಿಸ್ತಾನದ ಪ್ರಜೆಗಳಾಗಿರುವ ಈ ಎರಡೂ ಸಮುದಾಯದ ಪ್ರಜೆಗಳು ತಮಗೆ ಪಾಕಿಸ್ತಾನದಿಂದ ಸ್ವಾತಂತ್ರ್ಯಬೇಕು ಮತ್ತು ತಮ್ಮನ್ನು ಭಾರತಕ್ಕೆ ಸೇರಿಸಬೇಕು ಎಂದು ವಿಶ್ವಸಂಸ್ಥೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ ವಿಶ್ವಸಂಸ್ಥೆಯ ಒಳಗೆ ಪಾಕ್ ಪ್ರಧಾನಿ ನವಾಜ್ ಷರೀಫ್ ಭಾರತದ ವಿರೋಧವಾಗಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುತ್ತಿದ್ದ ಸಂದರ್ಭದಲ್ಲಿಯೇ ವಿಶ್ವಸಂಸ್ಥೆಯ ಹೊರಗೆ ಪಾಕಿಸ್ತಾನದ ಮೊಹಜೀರ್ ಮತ್ತು ಬಲೋಚ್ ಸಮುದಾಯದವರು ಪಾಕ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದರು. ಪಾಕಿಸ್ತಾನದಲ್ಲಿ ಈ ಎರಡು ಸಮುದಾಯಗಳ ವಿರುದ್ಧ ತೀವ್ರ ಕಿರುಕುಳ ನೀಡಲಾಗುತ್ತಿದ್ದು, ಜನ ಪಾಕಿಸ್ತಾನದ ವಿರುದ್ಧ ದಂಗೆದಿದ್ದಾರೆ. ಭಾರತ ಪರ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಲ್ಲದೇ, ನಮ್ಮ ಈ ಭಾಗವನ್ನು ಭಾರತಕ್ಕೆ ಸೇರಿಸಿ ಎಂದು ಆಗ್ರಹಿಸಿದ್ದಾರೆ.
ಭಾರತದ ವಿರುದ್ಧ ಕಾಶ್ಮೀರ ವಿಷಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೊಬ್ಬೆ ಹಾಕುತ್ತಿರುವ ಪಾಕಿಸ್ತಾನ ಸರ್ಕಾರಕ್ಕೆ ತಮ್ಮದೇ ಪ್ರಜೆಗಳ ಈ ವಿರೋಧಿ ಧ್ವನಿಗಳು ಭಾರಿ ಮುಜುಗರ ತಂದಿರುವುದಷ್ಟೆ ಅಲ್ಲ ಅವರ ಕಾಶ್ಮೀರ ಅಜೆಂಡಾಗೂ ಹಿನ್ನಡೆಯಾಗಿದೆ. ಕೇವಲ ಪಾಕಿಸ್ತಾನ ಮತ್ತು ವಿಶ್ವಸಂಸ್ಥೆಯಷ್ಟೇ ಅಲ್ಲದೇ ಇದೇ ಸಮುದಾಯ ಪಾಕ್ ವಿರುದ್ಧ `ಸ್ವಾತಂತ್ರ್ಯ` ಕೂಗು ಎಬ್ಬಿಸಿದೆ. ಅಮೆರಿಕಾ ಬ್ರಿಟನ್‌ನಲ್ಲಿಯೂ ಈ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಾಕಿಸ್ತಾನದಲ್ಲಿ ತಮ್ಮ ಸಮುದಾಯದ ಮೇಲೆ ಪಾಕ್ ರೇಂಜರ್ಸ್ ಮತ್ತು ಅರೆಸೇನೆ ನಡೆಸುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಇಂತಹ ಪ್ರತಿಭಟನೆಗಳು ನಡೆಯುತ್ತಿವೆ. ಇದೇ ವೇಳೆ ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯಿಂದಲೂ ನಮಗೆ ನ್ಯಾಯ ಸಿಗುತ್ತಿಲ್ಲ ಎಂಬ ಅಸಮಾಧಾನವನ್ನು ಸಮುದಾಯದ ಪ್ರಜೆಗಳು ಹೊರಹಾಕಿದ್ದಾರೆ.
ಯಾರು ಈ ಮೊಹಜೀರ್ ಗಳು..?
ಭಾರತ-ಪಾಕಿಸ್ತಾನ ವಿಭಜನೆಯ ವೇಳೆ ಭಾರತದಿಂದ ಪಾಕ್‌ಗೆ ನಿರಾಶ್ರಿತ ವಲಸಿಗರಾಗಿ ಹೋದವರೇ ಈ ಮೊಹಜೀರ್ ಗಳು. ಒಂದು ರೀತಿಯಲ್ಲಿ ಭಾರತ ವಿಭಜನೆ ಮತ್ತು ಪಾಕಿಸ್ತಾನ ನಿರ್ಮಾಣದ ಪರ ಇವರೆಲ್ಲ ಧ್ವನಿ ಎತ್ತಿದ್ದರು. ಪಾಕಿಸ್ತಾನ ನಿರ್ಮಾಣವಾಗುತ್ತಿದ್ದಂತೆ ಅಲ್ಲಿಗೆ ಹೋದವರು. ಆದರೆ ಪಾಕಿಸ್ತಾನ ಮಾತ್ರ ಈ ಮೊಹಜೀರ್ ಸಮುದಾಯದ ವಿರುದ್ಧ ಹಿಂದಿನಿಂದಲೂ ಗುಮಾನಿಯಿಂದಲೇ ನೋಡುತ್ತ ಬಂದಿದೆ. `ಇವರು ಭಾರತದವರು ಮತ್ತು `ರಾ` ಏಜೆಂಟರು` ಎಂದೂ ಈ ಸಮುದಾಯದ ವಿರುದ್ಧ ಕೆಂಡ ಕಾರುತ್ತಾ ಬಂದಿದೆ. ಅಲ್ಲದೆ ಸಮುದಾಯ ನಡೆಸುತ್ತಿರುವ ಪ್ರತಿಭಟನೆಗಳ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ಪಂಜಾಬ್‌ನ ಖಲಿಸ್ತಾನ್ ಪ್ರತ್ಯೇಕತಾವಾದಿಗಳು ಮತ್ತು ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿದೆ ಎಂದು ಭಾರತ ಕೂಡ ವಿಶ್ವಸಂಸ್ಥೆಯಲ್ಲಿ ಪ್ರತಿ ದೂರು ನೀಡಿದೆ.