ದಾದ್ರಿ, ಅ.9: ದಾದ್ರಿಯಲ್ಲಿ ಗುಂಪಿನಿಂದ ಥಳಿತಕ್ಕೊಳಗಾಗಿ ಕಳೆದ ವಾರ ಹತ್ಯೆಯಾಗಿದ್ದ ಮುಹಮ್ಮದ್ ಇಖ್ಲಾಕ್‌ನ ಮನೆಯ ಫ್ರಿಜ್‌ನಲ್ಲಿದ್ದುದು ಆಡಿನ ಮಾಂಸ, ದನದ ಮಾಂಸವಲ್ಲವೆಂದು ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಸಾಬೀತಾಗಿದೆ. ಇಖ್ಲಾಕ್ ಕರುವನ್ನು ಕಡಿದು ಮಾಂಸವನ್ನು ಮನೆಯಲ್ಲಿರಿಸಿದ್ದರು ಹಾಗೂ ಮನೆಯವರೆಲ್ಲ ಅದನ್ನು ತಿಂದಿದ್ದರು. ಅದಕ್ಕಾಗಿ ಅವರ ಮೇಲೆ ದಾಳಿ ನಡೆಸಲಾಗಿತ್ತೆಂದು ದುಷ್ಕರ್ಮಿಗಳು ಮಾಂಸದ ಸಾಕ್ಷ ಒದಗಿಸಿದ್ದರು.
ದಾಳಿಯಲ್ಲಿ ಇಖ್ಲಾಕ್ ಹತರಾಗಿದ್ದು, ಅವರ ಮಗ ದಾನಿಶ್ ಗಂಭೀರವಾಗಿ ಗಾಯಗೊಂಡಿದ್ದರು.
ಸೆ.28ರ ರಾತ್ರಿ ಪೊಲೀಸರು ಬಿಸಾಡಾದ ಇಖ್ಲಾಕ್‌ರ ಮನೆಯಿಂದ ಮಾಂಸದ ಮಾದರಿಯನ್ನು ಸಂಗ್ರಹಿಸಿ, ಪರೀ ಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪರೀಕ್ಷೆಯಲ್ಲಿ ಅದು ಆಡಿನ ಮಾಂಸವೆಂದು ತಿಳಿದು ಬಂದಿತು. ಆದರೆ, ಪೊಲೀಸರು ನಿರ್ಣಾಯಕ ಪರೀಕ್ಷೆಗಾಗಿ ಅದೇ ಮಾಂಸದ ಮಾದರಿಯನ್ನು ಮಥುರಾದ ಪ್ರಯೋಗಾಲಯವೊಂದಕ್ಕೂ ಕಳುಹಿಸಿದ್ದರು. ಅದರ ವರದಿಯೂ ಅದು ಆಡಿನ ಮಾಂಸವೆಂಬುದನ್ನು ಖಚಿತಪಡಿಸಿದೆಯೆಂದು ಉನ್ನತ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವಾರ ಮೃತ ಇಖ್ಲಾಕ್‌ರ ಮನೆಗೆ ಭೇಟಿ ನೀಡಿದ್ದ ಎಂಐಎಂ ನಾಯಕ ಹಾಗೂ ಹೈದರಾಬಾದ್‌ನ ಸಂಸದ ಅಸಾದುದ್ದೀನ್ ಉವೈಸಿ, ದಾಳಿಕಾರರನ್ನು ಬಂಧಿಸುವ ಬದಲು ಪೊಲೀಸರು ವಿಧಿವಿಜ್ಞಾನ ಪರೀಕ್ಷೆಯತ್ತ ಗಮನ ಹರಿಸಿದ್ದಾರೆಂದು ಉತ್ತರಪ್ರದೇಶ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಆದರೆ, ಹಿರಿಯಧಿಕಾರಿಯೊಬ್ಬರು ಈ ಕ್ರಮವನ್ನು ಸಮರ್ಥಿಸಿದ್ದು, ತಾವು ಮಾಂಸವನ್ನು ಪರೀಕ್ಷೆಗೆ ಕಳುಹಿಸದಿರುತ್ತಿದ್ದರೆ, ಉತ್ತರಪ್ರದೇಶ ಸರಕಾರವು ಸತ್ಯವನ್ನು ಮರೆಮಾಚುತ್ತಿದೆಯೆಂದು ವಿಪಕ್ಷ ಆರೋಪಿಸುವ ಸಾಧ್ಯತೆಯಿತ್ತು. ಎಫ್‌ಐಆರ್‌ನಲ್ಲಿ ದನದ ಮಾಂಸವೆಂಬ ಉಲ್ಲೇಖವಿಲ್ಲದಿದ್ದರೂ, ಸಂಶಯ ನಿವಾರಣೆಗಾಗಿ ತಾವು ಅದನ್ನು ಪರೀಕ್ಷೆಗಾಗಿ ಕಳುಹಿಸಿದ್ದೆವೆಂದು ಹೇಳಿದ್ದಾರೆ.
ಈದ್ ಮುನ್ನಾ ದಿನ ಕಂದು ಬಣ್ಣದ ಕರುವೊಂದು ಗ್ರಾಮದಲ್ಲಿ ಕಾಣೆಯಾಗಿತ್ತು. ಸೆ.28ರ ರಾತ್ರಿ ಇಖ್ಲಾಕ್ ಮಾಂಸದಂತೆ ಕಾಣಿಸುತ್ತಿದ್ದ ಯಾವುದೋ ವಸ್ತುವನ್ನು ತುಂಬಿಸಿದ್ದ ಪ್ಲಾಸ್ಟಿಕ್ ಚೀಲದೊಂದಿಗೆ ಮನೆಯಿಂದ ಹೊರಗೆ ಹೋಗಿದ್ದುದನ್ನು ಮಗುವೊಂದು ನೋಡಿತ್ತು. ಇಖ್ಲಾಕ್ ಆ ಚೀಲವನ್ನು ತನ್ನ ಮನೆಯ ಸಮೀಪದ ವಿದ್ಯುತ್ ಪರಿವರ್ತಕದ ಮುಂದೆ ಎಸೆದಿದ್ದರೆಂದು ಆತನ ಕುಟುಂಬಿಕರು ಹಾಗೂ ಪೊಲೀಸರು ನೀಡಿದ ಮಾಹಿತಿಯ ತುಣುಕುಗಳನ್ನು ಜೋಡಿಸಿದಾಗ ತಿಳಿದುಬಂದಿದೆ.