* ಇಂದು ಇಡೀ ಸಮಾಜವನ್ನು ಆಳುತ್ತಿರುವುದು ಯಾವುದು ಎಂಬ ಪ್ರಶ್ನೆಯನ್ನು ಹಾಕಿಕೊಂಡರೆ ಮೊದಲ ಉತ್ತರವೇ ಸೌಂದರ್ಯ. ಚೆಂದ ಕಾಣಿಸಬೇಕೆಂಬುದು ಇಂದು ಪ್ರತಿಯೊಬ್ಬರ ಆಶಯ. ಅದಕ್ಕಾಗಿ ಸಾಕಷ್ಟು ಕಸರತ್ತು ನಡೆಯುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಬ್ಯೂಟಿ ಪಾರ್ಲರ್ಗಳು, ಬ್ಯೂಟಿ ಕ್ಲಿನಿಕ್ಗಳು ಇಂದು ಬೃಹದಾಕಾರವಾಗಿ ತಲೆಯೆತ್ತಿ ನಿಂತಿವೆ. ಇವುಗಳಲ್ಲದೆ ಬ್ಯೂಟಿ ಚಿಕಿತ್ಸೆಗಳು, ಸರ್ಜರಿಗಳು ಕೂಡ ಜನಪ್ರಿಯವಾಗುತ್ತಿವೆ. ಸೌಂದರ್ಯ ಕಾಪಾಡುವುದಷ್ಟೇ ಅಲ್ಲ, ಎಲ್ಲರೂ ಚಿರಯೌವ್ವನಿಗರಾಗಿಯೇ ಇರಬೇಕೆಂಬ ಹಂಬಲ ಕೂಡ ಇಂದು ಎಲ್ಲರನ್ನೂ ಕಾಡುತ್ತಿದೆ. ಸೌಂದರ್ಯ ಮತ್ತು ಯೌವ್ವನದ ಬೆನ್ನಬಿದ್ದಿದೆ ಇಂದಿನ ಸಮಾಜ. ವಯಸ್ಸಿಗೆ ತಕ್ಕಂತೆ ಚರ್ಮ ಸುಕ್ಕಾಗದಂತೆ, ಕಪ್ಪು ಕಲೆ ಇಲ್ಲದಂತೆ, ಬೊಜ್ಜು ಬಾರದಂತೆ ನೋಡಿಕೊಳ್ಳುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಅಪಾಯಕಾರಿಯಾದ ಚಿಕಿತ್ಸೆಗಳೂ ಇವೆ. ಅತ್ಯಂತ ಅಪಾಯಕಾರಿ ಹಾಗೂ ದುಬಾರಿ ವೆಚ್ಚದ್ದಾದರೂ ಇಂಥ ಚಿಕಿತ್ಸೆ ಮಾಡಿಸಿಕೊಳ್ಳುವ ಜನರಿಗೇನೂ ಕಡಿಮೆಯಿಲ್ಲ. ಹೀಗೆ ಸೌಂದರ್ಯದ ಚಿಕಿತ್ಸೆಗಳ ಬೆನ್ನು ಬಿದ್ದಿರುವವರ ಹಕೀಕತ್ತೇನು, ಅವುಗಳ ಕುರಿತು ಒಂದು ಸುತ್ತು.
***
– ಅಕ್ಷತಾ ಮುಂಡಾಜೆ
ಅವಳಿಗೆ ವಯಸ್ಸು 60. ಹೀಗಿದ್ದೂ 30ರ ಹರೆಯದಂತೆ ಕಾಣಿಸುತ್ತಾಳೆ. ಚರ್ಮ ಸುಕ್ಕುಗಟ್ಟಿಲ್ಲ, ಬೊಜ್ಜು ಬಂದಿಲ್ಲ. ಅದೇ ಉತ್ಸಾಹ, ಅದೇ ಯೌವ್ವನ ಕಾಪಾಡಿಕೊಂಡಿದ್ದಾಳೆ. ಹಾಗಿದ್ದರೆ ಅವಳ ಸೌಂದರ್ಯದ ಗುಟ್ಟೇನು?
ಖಂಡಿತ ಸೋಪಲ್ಲ, ಯಾವುದೇ ಕ್ರೀಮಲ್ಲ. ಅವಳು ಮಾಡಿಸಿಕೊಂಡ ಸೌಂದರ್ಯದ ಚಿಕಿತ್ಸೆಯೇ ಇದರ ಹಿಂದಿನ ರಹಸ್ಯ. ನಿಜ, ಸೌಂದರ್ಯ ಅನ್ನುವುದು ಯಾರ ಬಯಕೆಯಲ್ಲ ಹೇಳಿ? ಸೌಂದರ್ಯದ ಪ್ರಶ್ನೆಯೇನೂ ನಿನ್ನೆ ಮೊನ್ನೆಯಿಂದ ಶುರುವಾಗಿದ್ದಲ್ಲ. ದೇವತೆಗಳು ಅಸುರರು ಕೂಡ ಸೌಂದರ್ಯದ ಹಿಂದೆ ಬಿದ್ದವರೇ. ಅಮೃತ ಮಥನದ ಸಮಯದಲ್ಲಿ ಮೋಹಿನಿಯ ಸೌಂದರ್ಯಕ್ಕೆ ಮಾರುಹೋಗಿಯೇ ಅಲ್ಲವೇ ಅಸುರರು ಅಮರರಾಗದೆ ಉಳಿದಿದ್ದು. ಹೀಗೆ ಸೌಂದರ್ಯ ಎಂಬ ವ್ಯಾಖ್ಯಾನ ಕಾಲದಿಂದ ಕಾಲಕ್ಕೆ ಬದಲಾಗುತ್ತಲೆ ಬಂದಿದೆ. ಜಗತ್ತಿನ ಅತಿ ಸುಂದರಿಯೆಂದೇ ಪರಿಗಣಿಸಲಾಗುವ ಕ್ಲಿಯೋಪಾತ್ರ ಕೂಡ ಸೌಂದರ್ಯ ಕಾಪಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿರಲಿಲ್ಲ. ತನ್ನ ಅಂದವನ್ನು ಜತನದಿಂದ ಕಾಯ್ದುಕೊಳ್ಳುವ ಸಲುವಾಗಿಯೇ ಆಕೆ ಪ್ರತಿನಿತ್ಯ ಹಾಲಿನಿಂದಲೇ ಸ್ನಾನ ಮಾಡುತ್ತಿದ್ದಳಂತೆ. ಹೀಗೆ ಸೌಂದರ್ಯ ವರ್ಧನೆಗೆ ಕಂಡುಕೊಂಡ ದಾರಿಗಳೆಷ್ಟೋ ಇದೆ. ಇನ್ನು ಕೆಲವರ ಕುಂಚದಲ್ಲಿ ಮೂಡಿಬಂದ ಸೌಂದರ್ಯವತಿಯರ ಹಿಂದೆ ಬಿದ್ದವರೂ ಇದ್ದಾರೆ. ಲಿಯಾನಾಡೋ ದ ವಿಂಚಿಯ ಮೊನಾಲಿಸಾ ಕಲಾಕೃತಿ ಜಗತ್ತಿನ ಅತ್ಯದ್ಬುತ ಪೇಟಿಂಗ್ಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ಆದರೆ ಆತನ ಕುಂಚದಲ್ಲಿ ಮೂಡಿದ ಸೌಂದರ್ಯವತಿ ಯಾರು? ಆಕೆ ನಿಜವಾಗಲೂ ಇದ್ದಳೆ ಅಥವಾ ಅದು ಕಲಾವಿದನ ಕಲ್ಪನೆಯೇ ಇದಕ್ಕೆ ಇನ್ನೂ ಉತ್ತರ ದೊರಕಿಲ್ಲ. ಇದಕ್ಕಾಗಿ ಹುಡುಕಾಟ ಮಾತ್ರ ಇನ್ನೂ ನಿಂತಿಲ್ಲ.
***
ಝಿರೋ ಜಮಾನ
ಕಾಲ ಬದಲಾದಂತೆ ಅಂದದ ವ್ಯಾಖ್ಯಾನ ಬದಲಾಗುತ್ತ ಬಂದಿದೆ. ಹಿಂದೆ ಗುಂಡಗಿರುವ ಹೆಣ್ಣುಮಕ್ಕಳನ್ನು ಸೌಂದರ್ಯವತಿ ಎನ್ನುತ್ತಿದ್ದರೆ, ಈಗೇನಿದ್ದರೂ ಝಿರೋ ಫಿಗರ್ಗಳದ್ದೇ ಜಮಾನ. ತೆಳ್ಳಗೆ ಬಳುಕುವ ಬಳ್ಳಿಯಂತಿರುವ ದೇಹವೇ ಎಲ್ಲಾ ಹೆಣ್ಣುಮಕ್ಕಳ ಕನಸಾಗಿರುತ್ತದೆ. ಹೀಗೆ ಚಿರಯೌವ್ವನೆಯಾಗಿ ಉಳಿದುಕೊಳ್ಳಲು ಮಾಡುವ ಕಸರತ್ತುಗಳಿಗೇನೂ ಕಡಿಮೆಯಿಲ್ಲ. ಲಕ್ಷಾಂತರ ರೂಪಾಯಿ ಸುರಿದು ಏನೇನೋ ಚಿಕಿತ್ಸೆಗಳನ್ನು ಪಡೆದುಕೊಂಡು ವಯಸ್ಸು ಎಪ್ಪತ್ತಾದರೂ ಇನ್ನೂ 30 ವರ್ಷದವರಂತೆ ಕಾಣುವ ಆಸೆ ಯಾರಿಗಿರುವುದಿಲ್ಲ ಹೇಳಿ? ಇಂಥ ಆಸೆಯ ಬೆನ್ನೇರಿ ಹೋಗುವ ಜನರಿಂದಾಗಿಯೇ ಇಂದು ಭಾರತದಲ್ಲಿ ಸೌಂದರ್ಯ ಚಿಕಿತ್ಸೆ ಅನ್ನುವುದು ದೊಡ್ಡ ಉದ್ಯಮವಾಗಿ ಬೆಳೆದುನಿಂತಿದೆ. ಮಹಾನಗರಗಳು ಮಾತ್ರವಲ್ಲ ಇನ್ನೂ ಬೆಳವಣಿಗೆ ಹಂತದಲ್ಲಿರುವ ನಗರಗಳಲ್ಲೂ ಸೌಂದರ್ಯ ಚಿಕಿತ್ಸೆ ಕೊಡುವವರ ದಂಡೇ ನಿಂತಿದೆ.
ಮುಖದ ಸುಕ್ಕು, ಕಣ್ಣಿನ ಸುತ್ತ ಇರುವ ಕಪ್ಪು ವರ್ತಲ, ಜೋತು ಬಿದ್ದ ಮಾಂಸ ಖಂಡಗಳು, ಸೊಂಟದ ಸುತ್ತ ಇರುವ ಬೊಜ್ಜು ಇವೆಲ್ಲವುಗಳಿಗೆ ಚಿಕಿತ್ಸೆಯ ಮೂಲಕವೇ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಅಲ್ಪಾವಧಿಗೆ ಉಳಿಯುವ ಸೌಂದರ್ಯ ಚಿಕಿತ್ಸೆಗಳಿಂದ ಹಿಡಿದು ದೀರ್ಘಾವಧಿ ಅಥವಾ ಶಾಶ್ವತವಾಗಿ ಇರಬಲ್ಲ ಸೌಂದರ್ಯ ಚಿಕಿತ್ಸೆಗಳಿವೆ.
***
ಚೀನಾದ ಚಿಕಿತ್ಸೆ ಫೇಮಸ್
ಚೀನಿಯರ ತೆಳ್ಳಗಿನ ದೇಹ, ಸುಂದರವಾದ ಮೈಕಟ್ಟು ಜನಪ್ರಿಯವಾದದ್ದು. ಇದರ ರಹಸ್ಯ ಏನು ಅನ್ನುವುದು ಇಂದಿಗೂ ಹಲವರನ್ನು ಕಾಡುತ್ತಿರುವ ಪ್ರಶ್ನೆ. ಹೀಗಾಗಿಯೇ ಸೌಂದರ್ಯ ಚಿಕಿತ್ಸೆ ಕ್ಷೇತ್ರದಲ್ಲಿ ಇದೀಗ ಚೀನಾದ ಥೆರಪಿಗೆ ಹೆಚ್ಚಿನ ಬೇಡಿಕೆಯಿದೆ. ದೇಹದ ಬೊಜ್ಜನ್ನು ಕರಗಿಸಲು ಹೆಚ್ಚಿನವರು ಇದರ ಮೊರೆ ಹೋಗುತ್ತಿದ್ದಾರೆ. ಹೀಗೆ ಚಿಕಿತ್ಸೆ ಮೊರೆ ಹೋದ ಅರ್ಪಿತಾ ಎಂಬ ಹುಡುಗಿ ಸದ್ಯ ಸುಂದರಿಯಾಗಿ ಕಾಣುತ್ತಿದ್ದಾರೆ. ಬೊಜ್ಜಿಲ್ಲದ ಸುಂದರ ಮೈಕಟ್ಟು ಪಡೆದುಕೊಂಡಿದ್ದಾರೆ. ಆದರೆ ಅವರ ಮುಖದಲ್ಲಿ ಸಂತಸವಿಲ್ಲ. ಯಾಕೆ ಹೀಗೆ ಎಂದರೆ, ‘ಹೌದು ಸುಂದರ ಮೈಮಾಟ ಪಡೆಯುವ ಉದ್ದೇಶದಿಂದಲೇ ಚಿಕಿತ್ಸೆ ಪಡೆದುಕೊಂಡೆ. ಇದರಿಂದ ಸುಂದರವಾಗಿಯೂ ಕಾಣುತ್ತಿದ್ದೇನೆ. ಆದರೆ ಮನಸ್ಸಿಗೆ ನೆಮ್ಮದಿಯಿಲ್ಲ, ದೇಹದ ಚರ್ಮ ಎಷ್ಟು ಬಿಗಿಯಾಗಿರುತ್ತದೆಂದರೆ ದಿನದ 24 ಗಂಟೆಯೂ ಟೈಟ್ ಜೀನ್ಸ್, ಟೀಶರ್ಟ್ ಹಾಕಿರುವ ಅನುಭವವಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.ಸಂಜನಾಳದ್ದು ಕೂಡಾ ಇದೇ ಅನುಭವ. ವ್ಯಾಂಪೈರ್ ಫೇಸ್ ಲಿಫ್ಟಿಂಗ್ ಚಿಕಿತ್ಸೆ ಬಗ್ಗೆ ಇಂಟರ್ನೆಟ್ ಮೂಲಕ ತಿಳಿದುಕೊಂಡು ಚಿಕಿತ್ಸೆ ಪಡೆದುಕೊಂಡಳು. ಮುಖವೇನೋ ಸುಂದರವಾಗಿದೆ. ಸುಕ್ಕಿಲ್ಲ, ಹೊಳೆಯುವ ಚರ್ಮ ಎಲ್ಲಾ ಸಿಕ್ಕಿದೆ ಆದರೆ ಇದರ ಜತೆಗೆ ನೋವು ಕೂಡ ಪಡೆದುಕೊಂಡಿದ್ದಾಳೆ. ವ್ಯಾಂಪೈರ್ ಫೇಸ್ ಲಿಫ್ಟ್ ಚಿಕಿತ್ಸೆಯನ್ನು ಸಾಮಾನ್ಯವಾಗಿ ಮುಖದ ಚರ್ಮ ಜೋತು ಬೀಳುವುದನ್ನು ತಪ್ಪಿಸಲು ಪಡೆಯುವ ಚಿಕಿತ್ಸೆ. ಇದರಲ್ಲಿ ಮುಖದಲ್ಲಿ ಸರ್ಜಿಕಲ್ ಥ್ರೆಡ್ಗಳನ್ನು ಬಳಸಿ ಮುಖದ ಚರ್ಮವನ್ನು ಜೋತು ಬೀಳದಂತೆ ಕಾಯಲಾಗುತ್ತದೆ. ನಂತರ ಮುಖ ಗುಂಡಕ್ಕೆ ಕಾಣುವ ಸಲುವಾಗಿ ಅವರದ್ದೇ ದೇಹದ ರಕ್ತವನ್ನು ಮುಖಕ್ಕೆ ಇಂಜೆಕ್ಟ್ ಮಾಡಿ ಮುಖದ ಹೊಳಪು ಹೆಚ್ಚಾಗುವಂತೆ ಮಾಡಲಾಗುತ್ತದೆ. ಆದರೆ ಅತಿ ನೋವುದಾಯಕ ಎಂಬುದು ಮಾತ್ರ ಸುಳ್ಳಲ್ಲ.
ಒಟ್ಟಿನಲ್ಲಿ ಹೇಳುವುದಾದರೆ ಸೌಂದರ್ಯದ ಹಿಂದೆ ಬೀಳದವರಿಲ್ಲ. ಎಷ್ಟೇ ಸುಂದರಿಯಾಗಿದ್ದರೂ, ಇನ್ನಷ್ಟು ಚೆಲುವು ಬೇಕೆಂದೋ ಅಥವಾ ಯೌವ್ವನವನ್ನು ಹಾಗೆ ಉಳಿಸಿಕೊಳ್ಳಬೇಕೆಂದೋ ಹಲವರು ಚಿಕಿತ್ಸೆಗಳ ಬೆನ್ನೇರಿ ಸಾಗುತ್ತಲೆ ಇರುತ್ತಾರೆ. ಒಂದು ಬಗೆಯ ಚಿಕಿತ್ಸೆಯಿಂದ ಸಂತೃಪ್ತಿ ಪಡೆಯದೆ ಲಕ್ಷಾಂತರ ರೂಪಾಯಿ ಸುರಿಸಿ ಮೂರು ನಾಲ್ಕು ಬಗೆಯ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಹೀಗಾಗಿ ಇನ್ನೇನೋ ಸಮಸ್ಯೆಗಳನ್ನು ಮೈಗಂಟಿಸಿಕೊಳ್ಳುತ್ತಾರೆ. ಸೌಂದರ್ಯ ಅನ್ನುವುದು ನೋಡುಗರ ಕಣ್ಣಲ್ಲಿಲ್ಲ, ನಮ್ಮ ಮನಸಲ್ಲಿದೆ, ನಮ್ಮ ವ್ಯಕ್ತಿತ್ವದಲ್ಲಿದೆ ಎಂಬುದು ಇವರಿಗೆ ಅರ್ಥವಾಗುವುದ್ಯಾವಾಗಲೋ? ಇರುವುದನ್ನು ಇರುವ ಹಾಗೆ ಒಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳುವವರೆಗೂ ಈ ಚಿಕಿತ್ಸೆಗಳು, ಈ ಉದ್ಯಮ ನಮ್ಮನ್ನು ಆಳುತ್ತಲೇ ಇರುತ್ತದೆ.
***
ಬಲು ದುಬಾರಿ ಸೌಂದರ್ಯ
ಸೌಂದರ್ಯ ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು ಅಗ್ಗದ್ದೇನಲ್ಲ. ಇವುಗಳು ಸಾವಿರಾರು ರೂಪಾಯಿಗಳನ್ನು ಸುರಿದು ಪಡೆದುಕೊಳ್ಳುವ ಚಿಕಿತ್ಸೆಗಳು ಐಪಿಎಲ್ ಥೆರಪಿಗೆ ಕನಿಷ್ಠವೆಂದರೂ 30 ಸಾವಿರ ರೂಪಾಯಿಗಳು ಬೇಕಾದರೆ. ಸ್ಕಿನ್ ನೀಡಲಿಂಗ್ಗೆ 50000, ವ್ಯಾಂಪೈರ್ ಫೇಸ್ಲಿಫ್ಟ್ಗೆ 45000 – 60000 ರೂ., ಕೂಲ್ ಸ್ಕಲ್ಪ್ಟ್ ಚಿಕಿತ್ಸೆಗೆ 60000-70000 ರೂ., ಫರ್ಮನೆಂಟ್ ಮೇಕಪ್ಗೆ 12000-20000 ರೂ., ಕೇವಲ 24 ಗಂಟೆಗಳ ಕಾಲ ಉಳಿಯುವ ವಿಟಮಿನ್ ಡ್ರಿಪ್ಗೆ 5500-6000ರೂ.,ಲೇಸರ್ ಜೆನೆಸಸ್ಗೆ 8500-9000ರೂ. , ಮೆಸೋಥೆರಪಿಗೆ 35000-40000ರೂ. ಅಲ್ಟ್ರಾಸೋನಿಕ್ ಪಂಪಿಂಗ್ಗೆ 15000-20000 ರೂ. ತೆರಬೇಕಾಗುತ್ತದೆ. ಇನ್ನೂ ಕೆಲವು ಚಿಕಿತ್ಸೆಗಳು ಲಕ್ಷಾಂತರ ರೂಪಾಯಿ ಮೌಲ್ಯದ್ದು. ಯುಎಲ್ ಥೆರಪಿಗೆ 132000 ಲಕ್ಷ ರೂ. ತೆರಬೇಕಾದರೆ, ಬಾರ್ಬ್ಡ್ ಥ್ರೆಡ್ಗೆ 1 ಲಕ್ಷ, ಥಮೇಜ್ಗೆ 1 ಲಕ್ಷ, ಸ್ಟೆಮ್ ಸೆಲ್ ಫೇಸ್ಲಿಫ್ಟ್ಗೆ 2 ಲಕ್ಷದವರೆಗೂ ಖರ್ಚಾಗುತ್ತದೆ.
***
ಸೌಂದರ್ಯ ಚಿಕಿತ್ಸೆಗಳೆಷ್ಟು ಸೇಫ್?
ಚಿರಯೌವ್ವನವನ್ನು ಪಡೆದುಕೊಳ್ಳಲು ಇದೀಗ ಹಲವು ಬಗೆಯ ಚಿಕಿತ್ಸೆಗಳಿವೆ. ಲೇಸರ್ನಿಂದ ಸ್ಟೆಮ್ೆಲ್ಸ್ ಇಂಜೆಕ್ಟ್ ಮಾಡಿಕೊಳ್ಳುವವರೆಗೂ ತರಹೇವಾರಿ ಚಿಕಿತ್ಸೆಗಳು ಲಭ್ಯವಿವೆ. ಇವುಗಳನ್ನು ಪಡೆದುಕೊಂಡು ಅದೆಷ್ಟೋ ಜನರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಆದರೆ ಈ ಚಿಕಿತ್ಸೆಗಳು ಎಷ್ಟು ಸೇಫ್? ಇವುಗಳಿಂದ ಯಾವುದೇ ಸೈಡ್ ಇಫೆಕ್ಟ್ ಇರುವುದಿಲ್ಲವೇ ಎಂಬುದಕ್ಕೆ ಉತ್ತರವಿಲ್ಲ. ಸೌಂದರ್ಯ ವೃದ್ಧಿಗೆ ನೀಡುವ ಚಿಕಿತ್ಸೆಯಲ್ಲಿ ಕ್ಯಾನ್ಸರ್ಗೆ ಕಾರಣವಾಗುವ ಅಂಶಗಳು ಕಂಡುಬಂದಿವೆ. ಅಲ್ಲದೆ ಕೆಲವು ಇಂಜೆಕ್ಷನ್ಗಳು ಕಿಡ್ನಿ, ಹೃದಯ ಮುಂತಾದವುಗಳ ಕಾರ್ಯ ನಿರ್ವಹಣೆ ಮೇಲೂ ಪ್ರಭಾವ ಬೀರುತ್ತಿರುವುದು ಕಂಡುಬಂದಿದೆ. ಅಷ್ಟೇ ಏಕೆ ಅಂದ ಹೆಚ್ಚಿಸಿಕೊಳ್ಳುವ ಸಲುವಾಗಿ ಸ್ಕಿನ್ ಟೈಟನಿಂಗ್ ಮಾಡಿಸಿಕೊಂಡವರು ಜೀವಮಾನ ಪೂರ್ತಿ ನರಳುತ್ತಿರುವುದೂ ಕಂಡುಬಂದಿದೆ. ಅಲ್ಲದೆ ಕೆಲವೊಮ್ಮೆ ಔಷಧಗಳ ಅಡ್ಡಪರಿಣಾಮದಿಂದಾಗಿ ಅಲರ್ಜಿಗಳಾಗುವುದು, ಅಥವಾ ಮುಖ ಊದಿಕೊಳ್ಳುವುದು ಬಾವು ಕಾಣಿಸಿಕೊಳ್ಳುವುದು ಮುಂತಾದವುಗಳು ಕೂಡ ಕಂಡುಬಂದಿವೆ.
***
ಮಧ್ಯಮವರ್ಗದ ಗ್ರಾಹಕರೇ ಹೆಚ್ಚು
ದುಬಾರಿ ಚಿಕಿತ್ಸೆಗಳು ಎಂದಾಕ್ಷಣ ಇವು ಶ್ರೀಮಂತ ವರ್ಗಕ್ಕೆ ಮಾತ್ರ ಸೀಮಿತ ಎಂದೆನಿಸಿಬಿಡಬಹುದು. ಆದರೆ ಸದ್ಯ ಭಾರತದ ಅಂಕಿ ಅಂಶಗಳನ್ನು ಗಮನಿಸಿದರೆ ಈ ಸೌಂದರ್ಯ ಚಿಕಿತ್ಸೆಗಳು ಶ್ರೀಮಂತ ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಮಧ್ಯಮವರ್ಗದಲ್ಲಿರುವವರು ಕೂಡ ಇತ್ತ ಆಕರ್ಷಿತರಾಗುತ್ತಿದ್ದಾರೆ. ಸೌಂದರ್ಯ ಪಡೆದುಕೊಳ್ಳುವ ಸಲುವಾಗಿ ಸಾವಿರಾರು ರೂಪಾಯಿಗಳನ್ನು ಸುರಿಯುತ್ತಿದ್ದಾರೆ. ಅದರಲ್ಲೂ ಮಧ್ಯಮವರ್ಗದ ಮಹಿಳೆಯರು ತಮ್ಮ ಸಂಸಾರ ಉಳಿಸುವ ಸಲುವಾಗಿಯೇ ಹಲವು ಬಾರಿ ಸೌಂದರ್ಯ ಚಿಕಿತ್ಸೆ ಮೊರೆ ಹೋಗುತ್ತಾರಂತೆ. ಸಮೀಕ್ಷೆಯೊಂದರ ಪ್ರಕಾರ 40-45ರ ಹರೆಯದಲ್ಲಿರುವ ಮಹಿಳೆಯರು ಪತಿಯನ್ನು ಆಕರ್ಷಿಸುವ ಸಲುವಾಗಿಯೋ ಅಥವಾ ಬೇರೆ ಹೆಣ್ಣಿನ ಸಂಗ ಮಾಡದಂತೆ ತಡೆಯುವ ಸಲುವಾಗಿಯೇ ಹೆಚ್ಚಾಗಿ ಸೌಂದರ್ಯ ಚಿಕಿತ್ಸೆಗಳ ಮೊರೆ ಹೋಗುತ್ತಾರಂತೆ. ಇಂಥವರಿಗೆ ಆಪ್ತ ಸಮಾಲೋಚಕರ ಅಗತ್ಯವಿದೆಯೇ ಅಥವಾ ಸೌಂದರ್ಯ ಚಿಕಿತ್ಸೆಯದ್ದೇ ಎಂಬುದು ಮಾತ್ರ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಯಾಕೆಂದರೆ ಪತಿಯನ್ನು ಸದಾ ಆಕರ್ಷಿಸುತ್ತಲೇ ಇರಬೇಕೆಂಬುದು ಪತ್ನಿಯರ ಕಸರತ್ತಾದರೂ ಅವರ ಮೂಲ ಆಶಯವನ್ನು ಅರ್ಥಮಾಡಿಕೊಳ್ಳುವ ಪತಿಯರೆಷ್ಟು? ಇದರಿಂದಲೇ ಅವರು ಖಿನ್ನತೆಗೆ ಹೋದರೆ ಆಗ ಮಾಡಿಸಿದ ದುಬಾರಿ ಚಿಕಿತ್ಸೆಗಳೂ ನೀರಿನಲ್ಲಿ ಹುಣಸೇಹಣ್ಣು ತೊಳೆದಂತಾಗುವುದಿಲ್ಲವೇ? ಹಾಗಾಗಿ ಆಪ್ತಸಮಾಲೋಚನೆ ಇಲ್ಲಿ ಯಾರಿಗೆ ಪತಿಗೋ, ಪತ್ನಿಗೋ ಎಂಬುದೂ ಅಷ್ಟೇ ದೊಡ್ಡ ಪ್ರಶ್ನೆ.
***
ಅಂದದ ಹಿಂದೆ ಪುರುಷರು
ಸೌಂದರ್ಯ ಚಿಕಿತ್ಸೆಗಳತ್ತ ಮಹಿಳೆಯರೇ ಹೆಚ್ಚು ಆಕರ್ಷಿತರಾಗುತ್ತಿರುವುದು ಎಂದರೆ ತಪ್ಪಾಗುತ್ತದೆ. ಇಂದು ಸೌಂದರ್ಯ ಚಿಕಿತ್ಸೆ ಪಡೆದು ಕೊಳ್ಳುತ್ತಿರುವವರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚಾಗಿದೆ. ಚಿರಯೌವ್ವನಿಗನಾಗಿ ಕಾಣಿಸಿಕೊಳ್ಳಲು ಹೆಚ್ಚಿನ ಪುರುಷರು ಸೌಂದರ್ಯ ಚಿಕಿತ್ಸೆಗಳ ಮೊರೆ ಹೋಗುತ್ತಾರೆ ಎನ್ನುತ್ತಾರೆ ವೈದ್ಯರು.