ಮಂಗಳೂರು, ಅ.09: ಜನಸಾಮಾನ್ಯರಲ್ಲಿ ಆಯುರ್ವೇದ ಚಿಕಿತ್ಸೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಡಿ.25 ಮತ್ತು 26ರಂದು ಎರಡು ದಿನಗಳ ಆಯುಷ್ ಉತ್ಸವವನ್ನು ಆಯೋಜಿಸಲಾಗುವುದೆಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.
ಈ ಸಂಬಂಧ ತಮ್ಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು. ಆಯುಷ್ ಉತ್ಸವದಲ್ಲಿ ಆಯುರ್ವೇದ ಪದ್ಧ್ದತಿಯ ಆಹಾರೋತ್ಸವ, ವಿವಿಧ ಔಷಧಿ ಸಸ್ಯಗಳ ಪ್ರದರ್ಶನ ಮಾರಾಟ, ತಾಳೆಗರಿ ಗ್ರಂಥಗಳ ಪ್ರದರ್ಶನ, ಔಷಧಿ ಸಸ್ಯಗಳ ಬೆಳೆಗಾರರ ಮತ್ತು ಆಯುರ್ವೇದ ಔಷಧಿ ತಯಾರಕರ ಸಮಾವೇಶ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ಆಯುರ್ವೇದ ಫೌಂಡೇಶನ್ನ ಡಾ.ಆಶಾಜ್ಯೋತಿ ಹೇಳಿದರು.
ಆರೋಗ್ಯ ಸಚಿವರ ವಿಶೇಷಾಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್ ಮಾತನಾಡಿ ಕಳೆದ ವರ್ಷ ದ.ಕ.ಜಿಲ್ಲೆಯಲ್ಲಿ ಆಯುಷ್ ಉತ್ಸವ ಯಶಸ್ವಿಯಾಗಿ ನಡೆಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದರು. ದ.ಕ.ಜಿಲ್ಲೆ (ದ.ಕ. ಮತ್ತು ಉಡುಪಿ)ಯಲ್ಲಿ 50ಕ್ಕೂ ಹೆಚ್ಚು ಆಯುರ್ವೇದ ಔಷಧ ತಯಾರಕರು ಇದ್ದಾರೆ, ದ.ಕ.ಜಿಲ್ಲೆಯಲ್ಲಿ 9 ಆಯುಷ್ ಸರಕಾರಿ ಚಿಕಿತ್ಸಾಲಯಗಳು ಇವೆ, ಜಿಲ್ಲೆಯಲ್ಲಿ ಶೇ.25ಕ್ಕೂ ಹೆಚ್ಚಿನ ಜನರು ಆಯುರ್ವೇದ ಚಿಕಿತ್ಸೆಗಳನ್ನು ಅವಲಂಬಿಸಿದ್ದಾರೆ. 10 ಆಯುರ್ವೇದ ಕಾಲೇಜುಗಳು ಇದ್ದು, ಸುಮಾರು 4,000 ವಿದ್ಯಾರ್ಥಿಗಳು ಆಯುರ್ವೇದಶಾಸ್ತ್ರ ಅಭ್ಯಾಸ ಮಾಡುತ್ತಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಆಯುಷ್ ಉತ್ಸವದ ಅಂಗವಾಗಿ ಪಿಲಿಕುಳದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಹೇಳಿದರು. ಉತ್ಸವದ ನಿಮಿತ್ತ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವು ದೆಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ದೇವದಾಸ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ ಶರ್ಮಾ ಉಪಸ್ಥಿತರಿದ್ದರು.
