ಕರ್ನಾಟಕ

ಬೇಹುಗಾರಿಕೆಗೆ ಫೇಸ್‌ಬುಕ್, ಗೂಗಲ್ ಮಾಹಿತಿ ದುರ್ಬಳಕೆ

Pinterest LinkedIn Tumblr

Studentಬ್ರುಸೆಲ್ಸ್, ಅ.8: ಫೇಸ್‌ಬುಕ್ ಮತ್ತು ಗೂಗಲ್‌ಗಳಿಂದ ಅಮೆರಿಕದ ‘ಬೇಹುಗಾರಿಕೆ’ ಸರ್ವರ್‌ಗಳಿಗೆ ಅಕ್ರಮ ಮಾಹಿತಿ ವರ್ಗಾವಣೆಯ ವಿರುದ್ಧ ಕಾನೂನು ಹೋರಾಟ ನಡೆಸಿದ್ದ ಆಸ್ಟ್ರಿಯಾದ ಕಾನೂನು ವಿದ್ಯಾರ್ಥಿ ಮ್ಯಾಕ್ಸ್ ಸ್ಕ್ರೇಮ್ಸ್‌ಗೆ ಐತಿಹಾಸಿಕ ಗೆಲುವು ಲಭಿಸಿದೆ.
ವಿಯೆನ್ನಾದ ಕೆಫೆಗಳಿಂದ ಶುರುವಾದ ಈ ಕಾನೂನು ಹೋರಾಟವು ಐರೋಪ್ಯ ಒಕ್ಕೂಟದ ಅತ್ಯುನ್ನತ ನ್ಯಾಯಾಲಯದ ತನಕ ಹೋಗಿ ಎರಡು ವರ್ಷಗಳಲ್ಲಿ ತಾರ್ಕಿಕ ಅಂತ್ಯವನ್ನು ಕಂಡಿದೆ.
ಮ್ಯಾಕ್ಸ್ ಸ್ಕ್ರೇಮ್ಸ್ (28), ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್‌ಡಿ ಮಾಡುತ್ತಿದ್ದಾರೆ.
ಜೊತೆಗೆ ಫೇಸ್‌ಬುಕ್‌ನ ಬಳಕೆದಾರ. ಕ್ಯಾಲಿಫೋರ್ನಿಯದ ಸಾಂತಾ ಕ್ಲಾರಾದಲ್ಲಿ ಸೆಮಿಸ್ಟರ್‌ವೊಂದಕ್ಕೆ ಅಧ್ಯಯನ ಮಾಡುತ್ತಿದ್ದಾಗ ಅವರಲ್ಲಿ ಗೌಪ್ಯತೆಯ ವಿಷಯದಲ್ಲಿ ಆಸಕ್ತಿ ಮೂಡಿತು. ಅಮೆರಿಕದ ಸಾಮೂಹಿಕ ಬೇಹುಗಾರಿಕೆಯ ವಿರುದ್ಧ ಮ್ಯಾಕ್ಸ್ ನಡೆಸಿದ ಕಾನೂನು ಹೋರಾಟ ಹಾಗೂ ತದನಂತರದ ಫಲಿತಾಂಶವನ್ನು ‘ಬಾಂಬ್‌ಸ್ಫೋಟ’ವೆಂದು ವಕೀಲರು ಬಣ್ಣಿಸಿದ್ದಾರೆ. ಈ ತೀರ್ಪಿನಿಂದಾಗಿ ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ನಡುವಣ ಮಾಹಿತಿ ವರ್ಗಾವಣೆಯ ವ್ಯವಸ್ಥೆಗೆ ದೊಡ್ಡ ಹೊಡೆತ ಬಿದ್ದಿದೆ. ಗೂಗಲ್, ಫೇಸ್‌ಬುಕ್ ಮತ್ತು ಐಬಿಎಂ ಸೇರಿದಂತೆ 4,000ಕ್ಕೂ ಮಿಕ್ಕಿ ಕಂಪೆನಿಗಳು ಈ ಮಾಹಿತಿಯನ್ನು ಬಳಸಿಕೊಳ್ಳುತ್ತಿದ್ದವು ಎನ್ನಲಾಗಿದೆ.
‘ಮ್ಯಾಕ್ಸ್ ಸ್ಕ್ರೇಮ್ಸ್ ಮತ್ತು ಎಡ್ವರ್ಡ್ ಸ್ನೋಡೆನ್. ಎಂತಹ ಅಪ್ರತಿಮ ಜೋಡಿ! ಈ ಇಬ್ಬರು ಯುವಕರು ಮಾಹಿತಿ ಸಂರಕ್ಷಣೆಯ ಜಗತ್ತಿನಲ್ಲಿ ಅಳಿಸಿಹಾಕಲಾರದ ಫಲಿತಾಂಶವನ್ನು ತಂದುಕೊಟ್ಟಿದ್ದಾರೆ’ ಎಂದು ಪ್ರೈಸ್‌ವಾಟರ್‌ಕೂಪರ್ ಸಂಸ್ಥೆಯ ಪಾಲುದಾರ ಸ್ಟೆವರ್ಟ್ ರೂಮ್ ಪ್ರತಿಕ್ರಿಯೆ ನೀಡಿದ್ದಾರೆ.
ವಿಯೆನ್ನಾದ ಎಲ್ಲ ನಿವಾಸಿಗಳಂತೆ ಮ್ಯಾಕ್ಸ್ ಸ್ಕ್ರೇಮ್ಸ್, ಆಸ್ಟ್ರೀಯದ ರಾಜಧಾನಿಯಲ್ಲಿರುವ ಕೆಫೆ ರಿಟ್ಟರ್‌ನ ಖಾಯಂ ಗಿರಾಕಿ. ಇದು ಅವರ ಪಾಲಿಗೆ ಎರಡನೆ ಮನೆ ಇದ್ದಂತೆ. ಗೆಳೆಯರನ್ನು ಭೇಟಿ ಮಾಡುತ್ತ ತಮ್ಮ ಬಹುತೇಕ ಸಮಯವನ್ನು ಇಲ್ಲಿ ಕಳೆಯುವುದು ಅವರ ದಿನನಿತ್ಯದ ಹವ್ಯಾಸ.
2013ರಲ್ಲಿ ಅಮೆರಿಕದ ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿಯ ಗುತ್ತಿಗೆ ನೌಕರ ಎಡ್ವರ್ಡ್ ಸ್ನೋಡೆನ್, ಅಮೆರಿಕ ಸರಕಾರವು ಫೇಸ್‌ಬುಕ್‌ನಂತಹ ಬೃಹತ್ ತಂತ್ರಜ್ಞಾನ ಕಂಪೆನಿಗಳಿಂದ ಖಾಸಗಿ ಮಾಹಿತಿಯನ್ನು ನೇರವಾಗಿ ಎತ್ತಿಕೊಳ್ಳುವುದನ್ನು ಬಹಿರಂಗಪಡಿಸಿದ್ದರು. ಅಮೆರಿಕದ ಗುಪ್ತಚರರಿಗೆ ತಾನು ‘ಹಿಂಬಾಗಿಲು’ ಆಗಿರುವುದನ್ನು ಫೇಸ್‌ಬುಕ್ ಪದೇಪದೇ ನಿರಾಕರಿಸಿತ್ತು.
♦♦♦

‘ಆನ್‌ಲೈನ್ ಖಾಸಗಿತನದ ವಿಚಾರದಲ್ಲಿ ಮೈಲುಗಲ್ಲು ಆಗಿರುವ ನ್ಯಾಯಾಲಯದ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಈ ತೀರ್ಪು ಸ್ಪಷ್ಟವಾದ ರೇಖೆ ಎಳೆದಿದೆ. ಸಾಮೂಹಿಕ ಬೇಹುಗಾರಿಕೆಯು ನಮ್ಮ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅದು ಸ್ಪಷ್ಟವಾಗಿ ಹೇಳಿದೆ. ಸರಕಾರಗಳು ಮತ್ತು ಉದ್ಯಮಸಂಸ್ಥೆಗಳು ನಮ್ಮ ಖಾಸಗಿತನದ ಮೂಲಭೂತ ಹಕ್ಕುಗಳನ್ನು ಉಪೇಕ್ಷಿಸುವಂತಿಲ್ಲ. ನೆಲದ ಕಾನೂನನ್ನು ಇವು ಪಾಲಿಸಬೇಕು ಎಂಬುದನ್ನು ನ್ಯಾಯಾಲಯದ ತೀರ್ಪು ಒತ್ತಿ ಹೇಳಿದೆ. ಖಾಸಗಿ ಪಾಲುದಾರರ ಮೇಲೆ ಅವಲಂಬಿಸಿರುವ ಅಮೆರಿಕದ ಜಾಗತಿಕ ಬೇಹುಗಾರಿಕೆಗೆ ಈ ತೀರ್ಪು ದೊಡ್ಡ ಹೊಡೆತವಾಗಿದೆ. ಯುರೋಪಿಯನ್ನರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿ ಅಮೆರಿಕದ ಬೇಹುಗಾರಿಕೆಯ ಪ್ರಯತ್ನಗಳಿಗೆ ಅಮೆರಿಕದ ಕಂಪೆನಿಗಳು ನೆರವಾಗಬಾರದು ಎಂದು ತೀರ್ಪು ಸ್ಪಷ್ಟಪಡಿಸಿದೆ. ಐರೋಪ್ಯ ಒಕ್ಕೂಟದ ಇತರ ಸದಸ್ಯ ರಾಷ್ಟ್ರಗಳು ನಡೆಸುತ್ತಿರುವ ಇಂತಹದೇ ಬೇಹುಗಾರಿಕೆಯ ವಿರುದ್ಧ ಇದೊಂದು ಮಹತ್ವದ ತೀರ್ಪು ಆಗಿದೆ.
-ಮ್ಯಾಕ್ಸ್ ಸ್ಕ್ರೇಮ್ಸ್, ಆಸ್ಟ್ರೀಯದ ಕಾನೂನು ವಿದ್ಯಾರ್ಥಿ.

Write A Comment