ಮಂಗಳೂರು, ಅ.08: ದೀಪಾವಳಿ ಹಬ್ಬ ಸಡಗರ ಸಂಬ್ರಮದಿಂದ ಆಚರಿಸುವಾಗ ಆಸುಪಾಸಿನಲ್ಲಿ ವಾಸಿಸುವ ಹಾಲುಗಲ್ಲ ಮಕ್ಕಳು ವಯೋವೃದ್ದರು ಅನರೋಗ್ಯ ಪೀಡಿತರನ್ನು ಗಣನೆಗೆ ತೆಗೆದುಕೊಂಡು ಹಾಗೂ ಪಟಾಕಿಗಳ ಮೇಲೆ ಯಾವುದೇ ದೇವರ ಚಿತ್ರಗಳನ್ನಾಗಲೀ ಅಥವಾ ರಾಜಕೀಯ ವ್ಯಕ್ತಿಗಳ ಚಿತ್ರಗಳಿರುವ ಪಟಾಕಿಗಳನ್ನು ಮಾರಾಟ ಮಾಡುವುದು ಮತ್ತು ಸುಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಮ ಅವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಅವರು ತಮ್ಮ ಕಚೇರಿಯಲ್ಲಿ ಈ ಸಂಬಂದ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಡುಮದ್ದು ಮಾರಾಟಗಾರರು ಸುಡುಮದ್ದು ಮಾರಾಟಕ್ಕೆ ತಾತ್ಕಾಲಿಕ ಪರವಾನಗಿಯನ್ನು ಪಡೆಯಲು ದಿ.31 ರೊಳಗೆ ಅರ್ಜಿಗಳನ್ನು ಸಂಬಂದಿಸಿದ ತಹಶೀಲ್ದಾರರಿಗೆ ಸಲ್ಲಿಸಬೇಕಿದ್ದು , ಅರ್ಜಿಯೊಂದಿಗೆ ಪೋಲೀಸ್ ಇಲಾಖೆ/ಪೋಲೀಸ್ ಕಮೀಷನರ್ ಅಥವಾ ಪೊಲೀಸ್ ಅಧೀಕ್ಷಕರು, ಅಗ್ನಿಶಾಮಕ ಇಲಾಖೆ ಅಥವಾ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು ಅರ್ಜಿಗಳನ್ನು ಸಲ್ಲಿಸಬಹುದೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಅವರು ತಿಳಿಸಿದ್ದಾರೆ.
ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆ ನೀಡಲಾಗುವ ಪ್ರದೇಶಗಳೆಂದರೆ,ಕದ್ರಿ ಪಾರ್ಕಿನ ಎದುರುಗಡೆ ಇರುವ ತೆರೆದ ಮೈದಾನ,ಉರ್ವಸ್ಟೋರ್ ಮೈದಾನ, ಬೈಕಂಪಾಡಿ ಎ.ಪಿ.ಎಂ.ಸಿ. ಬಳಿ ಇರುವ ಮೈದಾನ,ಪಂಪುವೆಲ್ ಬಳಿಯ ಪ್ರಸ್ತಾವಿತ ಬಸ್ ಸ್ಟ್ಯಾಂಡ್ಗಾಗಿ ಮೀಸಲಿರುವ ಪ್ರದೇಶ,ಕಾವೂರು ಜಂಕ್ಷನ್ ನಲ್ಲಿ ಕುಂಟಿಕಾನ-ಬೊಂದೇಲ್ ರಸ್ತೆಯ ಬದಿ ಇರುವ ಮೈದಾನ, ಬಂಗ್ರ ಕೂಳೂರಿನಲ್ಲಿ ಸ್ಟಾಕ್‌ಎಕ್ಸಚೇಂಜ್ ಗೆ ನೀಡಲಾಗಿದ್ದ ಖಾಲಿ ಸ್ಥಳ, ಸುರತ್ಕಲ್ ರಂಗಮಂದಿರದ ಬಳಿ ಇರುವ ತೆರೆದ ಮೈದಾನ, ಮುಲ್ಕಿ ಪಟ್ಟಣ ಪಂಚಾಯತ್ ಕಚೇರಿ ಎದುರುಗಡೆ ಇರುವ ಮೈದಾನ, ಉಳ್ಳಾಲ ಅಬ್ಬಕ್ಕ ಸರ್ಕಲ್ ಬಳಿ ಇರುವ ತೆರೆದ ಪ್ರದೇಶ ಮತ್ತು ಮೂಡಬಿದ್‌ರೆ ಸ್ವರಾಜ್ಯಮೈದಾನಗಳಲ್ಲಿ ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಿಗೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ.
ಪರಿಸರ ಅಧಿಕಾರಿ ಜಯಪ್ರಕಾಶ್ ಅವರು ಮಾತನಾಡಿ 125 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಹೊರಹೊಮ್ಮುವಂತಹ ಪಟಕಿಗಳನ್ನು ಕಡ್ಡಾಯವಾಗಿ ಮಾರಾಟ ಮಾಡುವುದನ್ನು ಹಾಗೂ ಸುಡುವುದನ್ನು ನಿಷೇಧಿಸಲಾಗಿದೆ ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತರಾದ ಗೋಕುಲ್‌ದಾಸ್ ನಾಯಕ್, ಇನ್ನಿತರರು ಉಪಸ್ಥಿತರಿದ್ದರು.
