ರಾಷ್ಟ್ರೀಯ

ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಾಪಸ್‌ಗೆ ಅಶೋಕ್ ವಾಜಪೇಯಿ ನಿರ್ಧಾರ

Pinterest LinkedIn Tumblr

Vajpeyiಹೊಸದಿಲ್ಲಿ, ಅ.7: ಖ್ಯಾತ ಸಾಹಿತಿ ಅಶೋಕ್ ವಾಜಪೇಯಿಯವರು ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ವಾಪಸ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಕೇಂದ್ರ ಲಲಿತ ಕಲಾ ಅಕಾಡಮಿಯ ಮಾಜಿ ಅಧ್ಯಕ್ಷರಾದ ವಾಜಪೇಯಿ, ದೇಶದ ಮೂವರು ಖ್ಯಾತ ವಿಚಾರವಾದಿಗಳ ಹತ್ಯೆ, ದಾದ್ರಿ ಹತ್ಯೆ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವೌನವನ್ನು ಪ್ರಶ್ನಿಸಿದ್ದಾರೆ.
ಖ್ಯಾತ ಸಾಹಿತಿ ಹಾಗೂ ಜವಾಹರಲಾಲ್ ನೆಹರೂ ಸೊಸೆ ನಯನತಾರಾ ಸೆಹಗಲ್ ಮಂಗಳವಾರವಷ್ಟೇ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ವಾಪಸ್ ಮಾಡುವ ನಿರ್ಧಾರವನ್ನು ಪ್ರಕಟಿಸಿದ್ದರು.
‘ಸೆಹಗಲ್ ನಿರ್ಧಾರ ಸರಿಯಾಗಿಯೇ ಇದೆ. ಅವರು (ಮೋದಿ) ಬಹಳ ವಾಚಾಳಿ ಪ್ರಧಾನಿ. ದೇಶದ ಬಹುತ್ವವನ್ನು ಕಾಪಾಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅವರು ಯಾಕೆ ದೇಶಕ್ಕೆ ಹೇಳುತ್ತಿಲ್ಲ’ ಎಂದು ವಾಜಪೇಯಿ ಬುಧವಾರ ಇಲ್ಲಿ ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಮಹೇಶ್ ಶರ್ಮಾ ಸೇರಿದಂತೆ ಹಿರಿಯ ರಾಜಕೀಯ ಧುರೀಣರ ಹೇಳಿಕೆಯನ್ನು ವಾಜಪೇಯಿ ಖಂಡಿಸಿದ್ದಾರೆ. ಈ ಧುರೀಣರ ಹೇಳಿಕೆಗಳು ದೇಶದ ಬಹುಸಂಸ್ಕೃತಿಯ ಮತ್ತು ಬಹುಧಾರ್ಮಿಕ ವಾತಾವರಣವನ್ನು ಕ್ಷುಲ್ಲಕಗೊಳಿಸಿವೆ ಎಂದು ಅವರು ಟೀಕಿಸಿದ್ದಾರೆ.
ಔರಂಗಝೇಬ್ ರಸ್ತೆಗೆ ಎಪಿಜೆ ಅಬ್ದುಲ್ ಕಲಾಂ ಹೆಸರನ್ನು ಮರುನಾಮಕರಣ ಮಾಡುವಾಗ ಸಂಸ್ಕೃತಿ ಸಚಿವರು (ಶರ್ಮಾ) ಕೆಲವೊಂದು ಮಾತುಗಳನ್ನು ಆಡಿದ್ದರು. ಕಲಾಂ ಮುಸ್ಲಿಮರಾಗಿದ್ದರೂ, ಬಹುದೊಡ್ಡ ರಾಷ್ಟ್ರೀಯವಾದಿಯಾಗಿದ್ದರು ಎಂದು ಸಚಿವರು ಹೇಳಿದ್ದರು. ಈ ಬಗೆಯ ಹೇಳಿಕೆಗಳು ದೇಶದ ಬಹುಸಂಸ್ಕೃತಿಯ ಮತ್ತು ಬಹುಧಾರ್ಮಿಕ ವಾತಾವರಣವನ್ನು ಕ್ಷುಲ್ಲಕಗೊಳಿಸುತ್ತವೆ. ಪ್ರತಿಭಟನೆ ವ್ಯಕ್ತಪಡಿಸದೇ ಸಾಹಿತಿಗಳು ಏನು ಮಾಡಲು ಸಾಧ್ಯವಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಹಾಡಹಗಲೇ ಹತ್ಯೆಯಾಗಿರುವ ಸಾಹಿತಿಗಳು ಮತ್ತು ವಿಚಾರವಾದಿಗಳೊಂದಿಗೆ ಒಗ್ಗಟ್ಟು ತೋರ್ಪಡಿಸುವ ಕ್ರಮವಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ವಾಜಪೇಯಿ ಹೇಳಿದ್ದಾರೆ.
ಈಗಿನ ಸಂದರ್ಭಕ್ಕೆ ತಕ್ಕಂತೆ ನಿಲುವು ತಾಳಲು ಕೇಂದ್ರ ಸಾಹಿತ್ಯ ಅಕಾಡಮಿ ವಿಫಲವಾಗಿದೆ. ಸಾಹಿತಿ-ಲೇಖಕರ ಸ್ವಾಯತ್ತೆಯ ವಿಚಾರದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ವಿರುದ್ಧ ಅದು (ಅಕಾಡಮಿ) ಪ್ರತಿಭಟನೆ ನಡೆಸಿಲ್ಲ. ಲೇಖಕರ ಸಮುದಾಯವು ಪ್ರತಿಭಟನೆಗೆ ಮುಂದಾಗಬೇಕು ಎಂದು ಅವರು ಹೇಳಿದ್ದಾರೆ.

Write A Comment