ಮಂಗಳೂರು,ಆ.07 : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲ್ಕೂರ ಪ್ರತಿಷ್ಠಾನ (ರಿ) ಇವುಗಳ ಸಹಯೋಗದಲ್ಲಿ ಜರಗಲಿರುವ ಕೋಟ ಶಿವರಾಮ ಕಾರಂತರ 114ನೇ ಹುಟ್ಟುಹಬ್ಬಆಚರಣೆಯ ಸಮಾರಂಭದಲ್ಲಿ ಖ್ಯಾತ ಹಿರಿಯ ಸಾಹಿತಿ, ಜಾನಪದ ತಜ್ಞ, ಸಮರ್ಥ ಸಹಕಾರಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ರಂಗದ ನೇತಾರ 90ರ ಹರೆಯದ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವರಿಗೆ ಕಾರಂತ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಅಕ್ಟೋಬರ್ 10ನೆಯ ಶನಿವಾರದಂದು ಸಂಜೆ ಗಂಟೆ 4.30ಕ್ಕೆ ಎಸ್.ಡಿ.ಎಂ. ಕಾಲೇಜು ಮಂಗಳೂರು ಸಭಾಭವನದಲ್ಲಿ ಜರಗುವ ಕಾರಂತ ಹುಟ್ಟುಹಬ್ಬಕಾರ್ಯಕ್ರಮದಲ್ಲಿ ಕಾರಂತ ಪುರಸ್ಕಾರ ಗೌರವ ಪ್ರದಾನ ಮಾಡಲಾಗುವುದು.
ತೊಂಬತ್ತರ ಹರೆಯದ ಶ್ರೀ ಲಕ್ಷ್ಮೀನಾರಾಯಣ ಆಳ್ವರು ಅಮ್ಟಾಡಿ ಗ್ರಾಮೀಣ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗುವಲ್ಲಿಂದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗುವವರೆಗೆ ಸಮರ್ಥ ಪ್ರಾಮಾಣಿಕ ಸಹಕಾರಿಯಾಗಿ ಸಹಕಾರರಂಗಕ್ಕೆ ಒಂದು ಆಯಾಮವನ್ನೇ ಹಾಕಿದ ಧೀಮಂತ ವ್ಯಕ್ತಿ. ರಾಮಾಶ್ವಮೇಧದ ರಸತರಂಗವೇ ಮೊದಲಾದ ಹಲವಾರು ಕೃತಿಗಳನ್ನು ರಚಿಸಿದ ಪ್ರಸಿದ್ಧ ಸಾಹಿತಿ.
ಊರಿನ ಪ್ರೌಢ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗುವಲ್ಲಿಂದ ಅಖಿಲ ಕರ್ನಾಟಕ ವ್ಯಾಪ್ತಿಯಲ್ಲಿ ಪ್ರತಿವರ್ಷ ಸಹಸ್ರಾರು ವಿದ್ಯಾರ್ಥಿಗಳಿಗೆ ರಾಮಾಯಣ ಮತ್ತು ಮಹಾಭಾರತಗಳ ಅಧ್ಯಯನ ಮಾಡಿಸಿ ಪರೀಕ್ಷೆ ನಡೆಸುವ ಭಾರತ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಇದರ ಕುಲಪತಿ ಸ್ಥಾನವನ್ನು ಅಲಂಕರಿಸಿದ ಶಿಕ್ಷಣ ತಜ್ಞ ಬಂಟರಯಾನೆ ನಾಡವರ ಸಂಘ, ಹರಿಜನ ಸೇವಾ ಸಂಘಕುತ್ತಾರು ಪದವು ಅನಾಥಾಶ್ರಮ, ದಕ್ಷಿಣ ಕನ್ನಡ ಜಿಲ್ಲಾ ಸೌಹಾರ್ದ ಸಮಿತಿಯೇ ಮೊದಲಾದ ಸಾಮಾಜಿಕ ರಂಗದಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು ಸಮಾಜ ಸೇವೆ,ದಾನ ದತ್ತಿನಿಧಿ,ಜಾನಪದ ಕ್ಷೇತ್ರ, ಧಾರ್ಮಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಜನಜನಿತರಾದ ಜನನಾಯಕ, ಖ್ಯಾತ ಸಂಘಟಕ, ಪ್ರಬುದ್ಧ ಭಾಷಣಕಾರ, ವಿರ್ಮಶಕರಾಗಿ ಬಹುಮುಖ ಪ್ರತಿಭೆಯ ಮುತ್ಸದ್ದಿಯಾಗಿ ಏರ್ಯ ಆಳ್ವರೆಂದೇ ಪ್ರಖ್ಯಾತಿ ಪಡೆದಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನಲಂಕರಿಸುವುದರೊಂದಿಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿ ಸಂಮಾನಗಳು ಇವರನ್ನು ಅರಸಿಕೊಂಡು ಬಂದಿವೆ. ಈ ಇಳಿ ವಯಸ್ಸಿನಲ್ಲೂ ಪಾದರಸದಂತಹ ಲವಲವಿಕೆಯುಳ್ಳ ಇವರು ವಿವಿಧ ವಲಯಗಳಲ್ಲಿ ಕಾರ್‍ಯೋನ್ಮುಖರಾಗಿದ್ದಾರೆ.ನಾಟಕ, ಸಿನೇಮಾ, ಆಕಾಶವಾಣಿ, ಹಲವಾರು ಸಾಹಿತ್ಯಕ ಸಮಿತಿಗಳ ಅಧ್ಯಕ್ಷರಾಗಿ ಬಹುಮಾನ್ಯರಾಗಿರುತ್ತಾರೆ.
ಸಂಜೆ ಗಂಟೆ 6ರಿಂದ 7 ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘ ಕಾಸರಗೋಡು ಇವರಿಂದ ನರಕಾಸರವಧೆ- ಗರುಡ ಗರ್ವ ಭಂಗ ಯಕ್ಷಗಾನ ಗೊಂಬೆಯಾಟ ನಡೆಯಲಿದೆ.
