ರಾಷ್ಟ್ರೀಯ

ಜಮ್ಮು– ಕಾಶ್ಮೀರದಲ್ಲಿ ಗೋಮಾಂಸ ನಿಷೇಧ ವಿವಾದ: ವಿಶೇಷ ಪೀಠ ರಚಿಸಲು ಸುಪ್ರೀಂ ನಿರ್ದೇಶನ

Pinterest LinkedIn Tumblr

supreme-courtನವದೆಹಲಿ (ಪಿಟಿಐ): ಜಮ್ಮು–ಕಾಶ್ಮೀರದಲ್ಲಿ ಗೋಮಾಂಸ ಮಾರಾಟ ನಿಷೇಧ ಸಂಬಂಧ ಹೈಕೋರ್ಟ್‌ನ ಜಮ್ಮು ಪೀಠ ನೀಡಿದ್ದ ಆದೇಶವನ್ನು ಎರಡು ತಿಂಗಳ ಕಾಲ ಅಮಾನತುಗೊಳಿಸಿರುವ ಸುಪ್ರೀಂಕೋರ್ಟ್‌, ಈ ವಿವಾದದ ಅಂತಿಮ ತೀರ್ಮಾನಕ್ಕಾಗಿ ಮೂರು ಮಂದಿ ನ್ಯಾಯಾಧೀಶರ ವಿಶೇಷ ಪೀಠ ರಚಿಸುವಂತೆ ನಿರ್ದೇಶನ ನೀಡಿದೆ.

ರಣವೀರ್ ದಂಡ ಸಂಹಿತೆ (ಆರ್‌ಪಿಸಿ) ಪ್ರಕಾರ ರಾಜ್ಯದಲ್ಲಿ ಗೋಮಾಂಸ ಮಾರಾಟ ನಿಷಿದ್ಧ ಎಂದು ಸೆ.8ರಂದು ಜಮ್ಮು ಪೀಠ ಆದೇಶ ನೀಡಿತ್ತು. ಈ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌. ದತ್ತು ಮತ್ತು ನ್ಯಾಯಮೂರ್ತಿ ಅಮಿತಾವ್‌ ರಾಯ್‌ ಅವರನ್ನೊಳಗೊಂಡ ನ್ಯಾಯಪೀಠ ಎರಡು ತಿಂಗಳ ಕಾಲ ತಡೆಹಿಡಿದಿದೆ.

ರಣವೀರ್ ದಂಡ ಸಂಹಿತೆಯಲ್ಲಿ ಅಗತ್ಯ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಹೈಕೋರ್ಟ್‌ನ ಶ್ರೀನಗರ ಪೀಠ ಅಭಿಪ್ರಾಯಪಟ್ಟಿದೆ.

ಗೋಮಾಂಸ ನಿಷೇಧ ಕುರಿತಂತೆ ಜಮ್ಮು– ಕಾಶ್ಮೀರ ಹೈಕೋರ್ಟ್‌ನ ಎರಡು ಪೀಠಗಳ ಅಭಿಪ್ರಾಯವನ್ನು ಗಮನಿಸಿರುವ ಸುಪ್ರೀಂಕೋರ್ಟ್‌ ವಿವಾದ ಇತ್ಯರ್ಥಪಡಿಸಲು ಮೂರು ಮಂದಿ ನ್ಯಾಯಾಧೀಶರ ವಿಶೇಷ ಪೀಠ ರಚಿಸುವಂತೆ ನಿರ್ದೇಶನ ನೀಡಿದೆ.

‘ಎರಡು ನ್ಯಾಯಪೀಠಗಳು ವ್ಯಕ್ತಪಡಿಸಿರುವ ಅಭಿಪ್ರಾಯದಲ್ಲಿ ದ್ವಂದ್ವವಿದೆ. ಈ ಬಗ್ಗೆ ಸೂಕ್ತ ತೀರ್ಮಾನಕ್ಕೆ ಬರಲು ಜಮ್ಮು– ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರು ಮೂವರು ಹಿರಿಯ ನ್ಯಾಯಮೂರ್ತಿಗಳ ಪೀಠ ರಚಿಸುವಂತೆ ನಾವು ಮನವಿ ಮಾಡುತ್ತೇವೆ’ ಎಂದು ನ್ಯಾಯಮೂರ್ತಿ ಅಮಿತಾವ್‌ ರಾಯ್‌ ತಿಳಿಸಿದ್ದಾರೆ.

ಗೋವುಗಳನ್ನು ಕೊಲ್ಲುವುದು ಮತ್ತು ಅದರ ಮಾಂಸವನ್ನು ಸಂಗ್ರಹಿಸಿಡುವುದು ಆರ್‌ಪಿಸಿ (ರಣವೀರ್ ದಂಡ ಸಂಹಿತೆ) 298–ಎ ಮತ್ತು 298–ಬಿ ಪ್ರಕಾರ ಶಿಕ್ಷಾರ್ಹ ಅಪರಾಧ. ಹೀಗಾಗಿ ಗೋಮಾಂಸ ಮಾರಾಟ ನಿಷೇಧಿಸಬೇಕು ಎಂದು ಪರಿಮೋಕ್ಷ್ ಸೇಠ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ರಣವೀರ್ ದಂಡ ಸಂಹಿತೆಯನ್ನು 1862ರಲ್ಲಿ ಅಂದಿನ ಡೊಗ್ರ ಮಹಾರಾಜರು ಜಾರಿಗೆ ತಂದಿದ್ದರು. ಜಮ್ಮು–ಕಾಶ್ಮೀರವು ವಿಶೇಷ ಸ್ಥಾನಮಾನದ ರಾಜ್ಯ ಆಗಿರುವುದರಿಂದ ಇಲ್ಲಿ ಆರ್‌ಪಿಸಿ ಮತ್ತು ಐಪಿಸಿ (ಭಾರತೀಯ ದಂಡ ಸಂಹಿತೆ) ಎರಡೂ ಜಾರಿಯಲ್ಲಿದೆ.

150 ವರ್ಷ ಹಳೆಯ ಆರ್‌ಪಿಸಿ ಆಧರಿಸಿ ಗೋಮಾಂಸ ಮಾರಾಟವನ್ನು ಹೈಕೋರ್ಟ್ ನಿಷೇಧಿಸಿರುವುದು ವಿವಾದಕ್ಕೆ ಕಾರಣವಾಗಿದೆ.

Write A Comment