ರಾಷ್ಟ್ರೀಯ

‘ಪೊಲೀಸರನ್ನು ಕೊಲ್ಲಿ’; ಪಟೇಲರಿಗೆ ಹಾರ್ದಿಕ್ ಪಟೇಲ್ ಕರೆ

Pinterest LinkedIn Tumblr

3hardikಸೂರತ್, ಅ. 4: ಪತಿದಾರ್‌ಗಳು (ಪಟೇಲರು) ಮತ್ತು ಪೊಲೀಸರ ನಡುವೆ ಹೊಗೆಯಾಡುತ್ತಿರುವ ಉದ್ವಿಗ್ನತೆ ಶನಿವಾರ ವಿವಾದಾಸ್ಪದ ತಿರುವೊಂದನ್ನು ಪಡೆದುಕೊಂಡಿದೆ. ಎರಡರಿಂದ ಐವರು ಪೊಲೀಸರನ್ನು ಕೊಲ್ಲಿ, ಆದರೆ ಯಾವುದೇ ಪಟೇಲರು ಸಾಯಬಾರದು ಎಂಬುದಾಗಿ ಪತಿದಾರ್ ಅನಾಮತ್ ಆಂದೋಲನ್ ಸಮಿತಿ (ಪಿಎಎಎಸ್)ಯ ಮುಖ್ಯಸ್ಥ ಹಾರ್ದಿಕ್ ಪಟೇಲ್ ಹೇಳಿದ್ದಾರೆನ್ನಲಾಗಿದೆ.

ಹಾರ್ದಿಕ್ ಇದನ್ನು ಇಲ್ಲಿ ಪಟೇಲ್ ಯುವಕ ವಿಪುಲ್ ದೇಸಾಯಿಗೆ ಹೇಳಿದರು. ತನ್ನ ಬೇಡಿಕೆಗಳು ಈಡೇರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರಿಗೆ ಬರೆದ ಪತ್ರವೊಂದರಲ್ಲಿ ವಿಪುಲ್ ಬೆದರಿಕೆಯೊಡ್ಡಿದ್ದನು. ಮೋಟ ವರಾಛ ಎಂಬಲ್ಲಿರುವ ಮನೆಯಲ್ಲಿ ವಿಪುಲ್‌ನನ್ನು ಭೇಟಿಯಾದ ಹಾರ್ದಿಕ್ ಪಟೇಲ್, ‘‘ನಿಮ್ಮಲ್ಲಿ ಅಷ್ಟೊಂದು ಅಸಮಾಧಾನ ಹೊಗೆಯಾಡುತ್ತಿದ್ದರೆ, 2-5 ಪೊಲೀಸರನ್ನು ಕೊಲ್ಲಿ, ಆದರೆ ಈಗ ಯಾವುದೇ ಪಟೇಲನೂ ಸಾಯುವಂತಿಲ್ಲ’’ ಎಂದು ಹೇಳಿದರು.

ಹಾರ್ದಿಕ್‌ರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಅವರ ವಿರುದ್ಧ ಎಲ್ಲ ಕಡೆಯಿಂದಲೂ ಟೀಕೆಗಳು ವ್ಯಕ್ತವಾಗುತ್ತಿವೆ.

ಹಾರ್ದಿಕ್‌ರ ಹೇಳಿಕೆಯನ್ನು ಖಂಡಿಸಿದ ಪೊಲೀಸ್ ಮಹಾ ನಿರ್ದೇಶಕ ಪಿ.ಸಿ. ಠಾಕೂರ್, ‘‘ಸೂರತ್ ಪೊಲೀಸರಿಂದ ಈ ಬಗ್ಗೆ ನಾನು ಪೊಲೀಸ್ ವರದಿಯನ್ನು ತರಿಸಿಕೊಳ್ಳುತ್ತೇನೆ. ಹಾರ್ದಿಕ್ ಹೇಳಿಕೆಗಳು ಕಾನೂನು ಉಲ್ಲಂಘನೆಯಾದರೆ, ಅವರ ವಿರುದ್ಧ ಪ್ರಕರಣವೊಂದನ್ನು ದಾಖಲಿಸಲಾಗುವುದು’’ ಎಂದರು.

ಬಳಿಕ, ಸ್ಪಷ್ಟೀಕರಣ ನೀಡಿದ ಹಾರ್ದಿಕ್ ಪಟೇಲ್, ‘‘ಪೊಲೀಸರನ್ನು ಕೊಲ್ಲಿ ಎಂದು ಹೇಳುವುದು ನನ್ನ ಉದ್ದೇಶವಾಗಿರಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ ಪಟೇಲ್ ಯುವಕನಿಗೆ ಧೈರ್ಯ ತುಂಬಲು ನಾನು ಅಲ್ಲಿಗೆ ಹೋಗಿದ್ದೆ. ನನ್ನಲ್ಲಿ ಕೆಟ್ಟ ಉದ್ದೇಶವಿರಲಿಲ್ಲ’’ ಎಂದು ತಿಪ್ಪೆ ಸಾರಿಸಿದ್ದಾರೆ.

Write A Comment