ರಾಷ್ಟ್ರೀಯ

ರಾಜೀವ್ ಸರಕಾರವನ್ನು ಉರುಳಿಸಲು 1987ರಲ್ಲಿ ಸೇನೆ ಸಂಚು ಹೂಡಿತ್ತು!: ನೂತನ ಪುಸ್ತಕದಲ್ಲಿ ನಿವೃತ್ತ ಲೆ.ಜ. ಪಿ.ಎನ್. ಹೂನ್

Pinterest LinkedIn Tumblr

Hoon2ಚಂಡೀಗಡ, ಅ. 4: 1987ರಲ್ಲಿ ರಾಜೀವ್ ಗಾಂಧಿ ಸರಕಾರವನ್ನು ಉರುಳಿಸಲು ಪಿತೂರಿ ನಡೆಸಲಾಗಿತ್ತು ಎಂದು ಪ್ರತಿಷ್ಠಿತ ಪಶ್ಚಿಮ ಕಮಾಂಡ್‌ನ ಮಾಜಿ ಸೇನಾ ಕಮಾಂಡರ್ ಲೆ.ಜ. ಪಿ.ಎನ್. ಹೂನ್ ಹೇಳಿಕೊಂಡಿದ್ದಾರೆ. ಕಾರ್ಯಾಚರಣೆಗಾಗಿ ದಿಲ್ಲಿಗೆ ತೆರಳುವಂತೆ ಮೂರು ಕ್ರಾಕ್ ಪ್ಯಾರಾ-ಕಮಾಂಡೊ ಬೆಟಾಲಿಯನ್‌ಗಳಿಗೆ ಸೂಚನೆ ನೀಡಲಾಗಿತ್ತು ಹಾಗೂ ಆ ಪೈಕಿ ಒಂದು ಬೆಟಾಲಿಯನ್ ಪಶ್ಚಿಮ ಕಮಾಂಡ್‌ಗೆ ಸೇರಿದ್ದಾಗಿತ್ತು ಎಂದೂ ಅವರು ತಿಳಿಸಿದ್ದಾರೆ.

ಆಗಿನ ಸೇನಾ ಮುಖ್ಯಸ್ಥ ಜನರಲ್ ಕೃಷ್ಣಸ್ವಾಮಿ ಸುಂದರ್‌ಜಿ ಮತ್ತು ಉಪ ಮುಖ್ಯಸ್ಥ ಹಾಗೂ ಬಳಿಕ ಸೇನಾ ಮುಖ್ಯಸ್ಥರಾದ ಲೆ.ಜ. ಎಸ್.ಎಫ್. ರೊಡ್ರಿಗಸ್ ಈ ಒಳಸಂಚಿನಲ್ಲಿ ಭಾಗಿಯಾಗಿದ್ದರು ಎಂದು 86 ವರ್ಷದ ಹೂನ್ ಆರೋಪಿಸಿದ್ದಾರೆ.

ರಾಜೀವ್ ಜೊತೆಗೆ ಉತ್ತಮ ಸಂಬಂಧ ಹೊಂದಿರದ ಅತ್ಯಂತ ಹಿರಿಯ ಕೆಲವು ರಾಜಕಾ ರಣಿಗಳ ಆಣತಿಯಂತೆ ಕ್ಷಿಪ್ರ ಕ್ರಾಂತಿಯನ್ನು ಯೋಜಿಸ ಲಾಗಿತ್ತು ಎಂದು ಈಗಷ್ಟೇ ಬಿಡುಗಡೆಯಾದ ತನ್ನ ಪುಸ್ತಕ ‘ದಿ ಅನ್‌ಟೋಲ್ಡ್ ಟ್ರುತ್’’ನಲ್ಲಿ ಹೂನ್ ಹೇಳಿದ್ದಾರೆ. 1987ರಲ್ಲಿ ಅಂದಿನ ಪಂಜಾಬ್ ರಾಜ್ಯಪಾಲ ಸಿದ್ಧಾರ್ಥ ಶಂಕರ್ ರೇ ಚಂಡೀಗಡದಲ್ಲಿ ಏರ್ಪಡಿಸಿದ್ದ ತನ್ನ ಬೀಳ್ಕೊಡುಗೆ ಸಮಾರಂಭದಲ್ಲಿ, ರಾಜೀವ್ ಗಾಂಧಿ ಭ್ರಷ್ಟರಾಗಿದ್ದಾರೆ ಹಾಗೂ ನಿರ್ಲಕ್ಷ ಪ್ರವೃತ್ತಿ ಹೊಂದಿದ್ದಾರೆ ಎಂಬುದಾಗಿ ಗ್ಯಾನಿ ಜೈಲ್ ಸಿಂಗ್ ಆರೋಪಿಸಿದ್ದರು ಎಂದು ಲೆ.ಜ. ಹೂನ್ ಹೇಳಿದ್ದಾರೆ.

1984ರ ಸಿಖ್ ಹತ್ಯಾಕಾಂಡದ ಬಗ್ಗೆ ರಾಜೀವ್ ಯೋಚನೆಯನ್ನೇ ಹೊಂದಿಲ್ಲ ಎಂಬುದಾಗಿಯೂ ಸಿಂಗ್ ಹೇಳಿದರು ಎಂದಿದ್ದಾರೆ.

1987 ಮೇ-ಜೂನ್‌ನಲ್ಲಿ ಪಶ್ಚಿಮ ಕಮಾಂಡ್‌ನ ಮುಖ್ಯಸ್ಥನಾಗಿ ಅಧಿಕೃತ ಕೆಲಸದ ಮೇಲೆ ತಾನು ದಿಲ್ಲಿಯಲ್ಲಿದ್ದಾಗ ತನಗೆ ತನ್ನ ಕಮಾಂಡ್‌ನ ಪ್ರಧಾನ ಕಚೇರಿಯಿಂದ ಸಂದೇಶವೊಂದು ಬಂತು ಎಂದು ಹೂನ್ ತನ್ನ ಪುಸ್ತಕದಲ್ಲಿ ಹೇಳಿದ್ದಾರೆ. ಮೂರು ಪಾರಾ-ಕಮಾಂಡೊ ಬೆಟಾಲಿಯನ್‌ಗಳನ್ನು ಕಳುಹಿಸುವಂತೆ ಕೋರಿ ಸೇನಾ ಪ್ರಧಾನ ಕಚೇರಿಯಿಂದ ಪತ್ರ ಬಂದಿದೆ ಎಂಬುದಾಗಿ ಆ ಸಂದೇಶ ತಿಳಿಸಿತು ಎಂದರು. ಕೋರಲಾದ ಬೆಟಾಲಿಯನ್‌ಗಳ ಪೈಕಿ ಒಂದು ಫಸ್ಟ್-ಪಾರಾ ಕಮಾಂಡೊ ಪಶ್ಚಿಮ ಕಮಾಂಡ್‌ನ ಅಡಿಯಲ್ಲಿ ಬರುತ್ತಿತ್ತು. ಉಳಿದ ಎರಡು ಬೆಟಾಲಿಯನ್‌ಗಳಾದ 9ನೆ ಮತ್ತು 10ನೆ ಪಾರಾ ಕಮಾಂಡೊ ಕ್ರಮವಾಗಿ ಉತ್ತರ ಮತ್ತು ದಕ್ಷಿಣ ಕಮಾಂಡೊಗಳ ಅಡಿಯಲ್ಲಿ ಬರುತ್ತಿತ್ತು.

ಈ ಮೂರು ಬೆಟಾಲಿಯನ್‌ಗಳನ್ನು ರೊಡ್ರಿಗಸ್ ನಿಯಂತ್ರಣದಲ್ಲಿ ಇಡಬೇಕೆಂದು ಆದೇಶಿಸಲಾಗಿತ್ತು. ತಾನು ಕೂಡಲೇ ಈ ವಿಷಯವನ್ನು ರಾಜೀವ್ ಗಾಂಧಿ ಮತ್ತು ಅವರ ಪ್ರಧಾನ ಕಾರ್ಯದರ್ಶಿ ಗೋಪಿ ಅರೋರ ಅವರ ಗಮನಕ್ಕೆ ತಂದೆ ಹಾಗೂ ವಿಶೇಷ ಪಡೆಗಳನ್ನು ಕೋರಿ ಕಳುಹಿಸಲಾದ ಪತ್ರವನ್ನು ಅವರಿಗೆ ತೋರಿಸಿದೆ ಎಂದು ಹೂನ್ ಹೇಳಿದ್ದಾರೆ.

‘‘ಈ ಕ್ರಮ ದೇಶಕ್ಕೆ ಮಾತ್ರವಲ್ಲ, ಇಡೀ ರಾಜಕೀಯ ವ್ಯವಸ್ಥೆಗೆ ಎಷ್ಟು ಅಪಾಯಕಾರಿಯಾಗಬಹುದು ಎಂಬುದನ್ನು ನಾನು ಅವರಿಗೆ ವಿವರಿಸಿದೆ’’ ಎಂದರು. ತನ್ನ ಅನುಮತಿಯಿಲ್ಲದೆ ಯಾವುದೇ ತುಕಡಿಯನ್ನು ಕಳುಹಿಸದಂತೆ ಪಶ್ಚಿಮ ಕಮಾಂಡ್‌ನ ಅಡಿಯಲ್ಲಿ ಬರುವ ದಿಲ್ಲಿ ಪ್ರದೇಶ ಕಮಾಂಡರ್‌ಗೆ ಆದೇಶಿಸಿದೆ ಎಂದು ಹೇಳಿಕೊಳ್ಳುತ್ತಾರೆ.

ರಾಜೀವ್ ಸಂಪುಟದ ಓರ್ವ ಸಚಿವ ವಿ.ಸಿ. ಶುಕ್ಲಾರಿಗೆ ಸೇನಾ ಕಾರ್ಯಾಚರಣೆ ಸಾಧ್ಯತೆ ಬಗ್ಗೆ ಮಾಹಿತಿಯಿತ್ತು ಎಂದು 1987 ಅಕ್ಟೋಬರ್‌ನಲ್ಲಿ ನಿವೃತ್ತರಾದ ಹೂನ್ ಹೇಳಿದ್ದಾರೆ.

ಗ್ಯಾನಿ ಜೈಲ್ ಸಿಂಗ್‌ರನ್ನು ಭೇಟಿಯಾಗುವ ಉದ್ದೇಶಕ್ಕಾಗಿಯೇ ಶುಕ್ಲಾ ಚಂಡಿಮಂದಿರ್‌ಗೆ ಬಂದಿದ್ದರು ಎಂಬುದಾಗಿ ‘ಗ್ಯಾನಿ ಜೈಲ್ ಸಿಂಗ್ ವರ್ಸಸ್ ರಾಜೀವ್ ಗಾಂಧಿ’ ಎಂಬ 10ನೆ ಅಧ್ಯಾಯದಲ್ಲಿ ಹೂನ್ ಹೇಳಿದ್ದಾರೆ.

Write A Comment