ಮಂಗಳೂರು, ಅ.4: ಎತ್ತಿನಹೊಳೆ ಯೋಜನೆಯನ್ನು ಖಂಡಿಸಿ ಮಂಗಳೂರು ಬೈಸಿಕಲ್ ಕ್ಲಬ್ ಹಾಗೂ ಮಂಗಳೂರು ಸೈಕಲ್ ಕ್ಲಬ್ ವತಿಯಿಂದ ರವಿವಾರ ಮುಂಜಾನೆ ಮಂಗಳೂರು ಮಹಾನಗರ ಪಾಲಿಕೆಯಿಂದ ಉಳ್ಳಾಲದ ನೇತ್ರಾವತಿ ನದಿಯ ತನಕ ಬೃಹತ್ ಸೈಕಲ್ ರ್‍ಯಾಲಿ ನಡೆಯಿತು.
ಸಹ್ಯಾದ್ರಿ ಸಂಚಯದ ಸಂಚಾಲಕ ದಿನೇಶ್ ಹೊಳ್ಳ ಅವರು, ಈ ರ್‍ಯಾಲಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರ್‍ಯಾಲಿಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರು “ನೇತ್ರಾವತಿ ಉಳಿಸಿ”(‘Save Netravati’) ಎಂದು ಬರೆದಿರುವ ಟಿ.ಶರ್ಟ್ ಧರಿಸಿದ್ದರು.
ಪಾಲಿಕೆ ಮುಂಭಾಗದಿಂದ ಹೊರಟ ಸೈಕಲ್ ರ್‍ಯಾಲಿ ನಗರದ ಪಿವಿಎಸ್ ವೃತ್ತ, ಬೆಂದೂರ್‌ವೆಲ್, ಪಂಪ್‌ವೆಲ್, ನೇತ್ರಾವತಿ ಸೇತುವೆ, ಉಳ್ಳಾಲ ಸಮೀಪದ ನೇತ್ರಾವತಿ ನದಿ ಕಿನಾರೆಯಲ್ಲಿ ಸಮಾಪನಗೊಂಡಿತ್ತು. ರ್‍ಯಾಲಿಯಲ್ಲಿ ಭಾಗವಹಿಸಲು 15 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಮಹಿಳೆಯರು ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಸೈಕಲ್ ಸವಾರರು ಪಾಲ್ಗೊಂಡಿದ್ದರು. ಕ್ಲಬ್‌ನ ಸದಸ್ಯರ ಜೊತೆಗೆ ಸಾರ್ವಜನಿಕರಿಗೂ ಸೈಕಲ್ ಸವಾರಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು.
ಉಳ್ಳಾಲದ ನೇತ್ರಾವತಿ ನದಿ ಕಿನಾರೆಯಲ್ಲಿ ಸಭೆಯನ್ನುದ್ದೇಶಿಸಿ ನೇತ್ರಾವತಿ ನದಿ ತಿರುವು ಯೋಜನೆಯ ಲೋಪದೋಷಗಳ ಬಗ್ಗೆ ಮಾತನಾಡಿದ ನೇತ್ರಾವತಿ ನದಿ ತಿರುವು ಯೋಜನೆಯ ವಿರೋಧಿ ಘಟಕದ ಸಂಚಾಲಕ ಡಾ. ನಿರಂಜನ ರೈ ಅವರು, ಪಶ್ಚಿಮ ಘಟ್ಟ ಪ್ರದೇಶದ ಪಾವಿತ್ರ್ಯ ಕಾಪಾಡಿ ದ.ಕ. ಜಿಲ್ಲೆಯನ್ನು ಭರದ ಕಪ್ಪು ಛಾಯೆಯಿಂದ ರಕ್ಷಿಸುವ ಸಲುವಾಗಿ ಈ ರ್‍ಯಾಲಿ ಆಯೋಜಿಸಲಾಗಿದೆ. ದ.ಕ.ಜಿಲ್ಲೆಯ ಜನರು ಕುಡಿಯುವ ನೀರಿಗೆ ತೊಂದರೆ ಇರುವ ಯಾವೂದೇ ಜಿಲ್ಲೆಗೂ ನೀರು ಕೊಡಲು ಸಿದ್ದರಿದ್ದೇವೆ. ಆದರೆ ಇದರಿಂದ ನಮ್ಮ ಜಿಲ್ಲೆಯ ಜನರಿಗೆ ಕುಡಿಯಲು ನೀರಿಲ್ಲದಂತೆ ಮಾಡುವುದು ಯಾವ ನ್ಯಾಯ. ಮಾತ್ರವಲ್ಲದೇ ಈ ಯೋಜನೆಗಾಗಿ ನಮ್ಮ ಕಾಡು ಮರಗಳನ್ನು ನಾಶ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸರ್ಕಾರ ಸರಿಯಾದ ರೀತಿಯಲ್ಲಿ ಅಧ್ಯಾಯನ ಮಾಡದೇ ಇಷ್ಟು ದೊಡ್ಡ ಮೊತ್ತದ ಯೋಜನೆಯನ್ನು ಅನುಷ್ಠಾನಗೊಳಿಸಲು ಹೊರಟಿರುವುದು ಸರಿಯಲ್ಲ. ಈ ರೀತಿ ಅವೈಜ್ಞಾನಿಕ ಪದ್ಧತಿಯ ಮೂಲಕ ನದಿ ತಿರುವು ಮಾಡುವುದರಿಂದ ಸಾರ್ವಜನಿಕರ ಸಾವಿರಾರು ಕೋಟಿ ರೂ. ತೆರಿಗೆ ಹಣ ಪೋಲಾಗುವುದು ಹೊರತು ಯಾರಿಗೂ ನೀರು ಸಿಗುವುದಿಲ್ಲ. ಅದುದ್ದರಿಂದ ಸರಕಾರ ತಕ್ಷಣ ಈ ಯೋಜನೆಯನ್ನು ಕೈಬಿಟ್ಟು ಈಗಾಗಲೇ ಆರಂಭಗೊಂಡಿರುವ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಮಂಗಳೂರು ಬೈಸಿಕಲ್ ಕ್ಲಬ್‌ನ ಸ್ಥಾಪಕ ಸದಸ್ಯೆ ಡಾ.ಸ್ಮಿತಾ, ಮಂಗಳೂರು ಸೈಕ್ಲಿಂಗ್ ಕ್ಲಬ್‌ನ ಸ್ಥಾಪಕ ಸದಸ್ಯ ಅನಿಲ್ ಶೇಟ್, ಸದಸ್ಯರಾದ ಡಾ. ರಾಮರಾಜ್, ಶ್ಯಾಮ್ ಪ್ರಸಾದ್ ನಾಯಕ್, ಅನಿಲ್ ಶ್ರೇಷ್ಠ ಮತ್ತಿತ್ತರರು ಈ ಸಂದರ್ಭ ಉಪಸ್ಥಿತರಿದ್ದರು.












