ಕರ್ನಾಟಕ

ಫ್ರೀಡಂ ಪಾರ್ಕ್‌ನಲ್ಲಿ ಹಳ್ಳಿಹಬ್ಬ ಗ್ರಾಮೀಣ ಸೊಗಡು ಅನಾವರಣ

Pinterest LinkedIn Tumblr

freeಬೆಂಗಳೂರು, ಅ.3-ಬೆಂಗಳೂರು ನಗರದ ಫ್ರೀಡಂಪಾರ್ಕ್‌ನಲ್ಲಿ ಇಂದು ಹಳ್ಳಿಸೊಗಡು ಮೇಳೈಸಿತ್ತು. ಹಳ್ಳಿ ಆಟ, ಹಳ್ಳಿ ಊಟ ಎಲ್ಲೆಲ್ಲೂ ಹಳ್ಳಿ ನೋಟವೇ ಕಾಣುತ್ತಿತ್ತು. ಮಂಡೂರಿನ ವಿದ್ಯಾರಣ್ಯ ಸಂಸ್ಥೆಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮೀಣ ಸೊಬಗನ್ನು ಮೇಳೈಸುವಂತಹ ಸುಮಾರು 25ಕ್ಕೂ ಹೆಚ್ಚು ಕ್ರೀಡೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಲಗೋರಿ ಆಡುವ ಮೂಲಕ ಚಾಲನೆ ನೀಡಿದರು. ಫ್ರೀಡಂಪಾರ್ಕ್ ತುಂಬಾ ಇಂದು ಗೊರವಯ್ಯ ಕುಣಿತ, ಜಾನಪದ ಕಾರ್ಯಕ್ರಮಗಳು ನಡೆದವು. ಇದರ ಜೊತೆಗೆ ಚಿನ್ನಿದಾಂಡು, ಗೋಲಿ, ಲಗೋರಿ, ಚೌಕಾಬಾರ, ಬುಗುರಿ ಆಟಗಳನ್ನು ನಗರದ ಜನತೆ ಆಡಿ ನಲಿದರು. ಕೆಲವರು ನೋಡಿ ಆನಂದಿಸಿದರು.

ಇದರ ಜೊತೆಗೆ ವಿದ್ಯಾರಣ್ಯ ಸಂಸ್ಥೆಯವರು ಅತಿ ಉದ್ದನೆಯ ಜಡೆ ಹೊಂದಿರುವ ಮಹಿಳೆ ಹಾಗೂ ಅತಿ ಉದ್ದನೆಯ ಮೀಸೆ ಹೊಂದಿರುವ ಪುರುಷರ ಸ್ಪರ್ಧೆಯನ್ನು ಏರ್ಪಡಿಸಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಮಹಿಳೆಯರು- ಪುರುಷರು ಇದರಲ್ಲಿ ಪಾಲ್ಗೊಂಡು ತಮ್ಮ ಉದ್ದನೆಯ ಜಡೆ ಹಾಗೂ ಮೀಸೆಯನ್ನು ಪ್ರದರ್ಶಿಸಿ ನೋಡುಗರ ಕಣ್ಮನ ಸೆಳೆದರು.
ಆಂಧ್ರಪ್ರದೇಶದ ಗುಂಟೂರಿನಿಂದ ಆಗಮಿಸಿದ್ದ 70 ವರ್ಷದ ಗೋವಾಳ ಕೋಟೇಶ್ವರ ರಾವ್ ಅವರ ಮುಖದ ಮೇಲಿನ ಹುರಿಮೀಸೆ ಎಲ್ಲರ ಗಮನ ಸೆಳೆದಿತ್ತು. ಅದೇ ರೀತಿ ಸಿರಸಂಗಿಯಿಂದ ಆಗಮಿಸಿದ್ದ ಪಕೀರಪ್ಪ ಕೂಡ ನೋಡುಗರ ಗಮನ ಸೆಳೆದರು.

ಇದಿಷ್ಟೇ ಅಲ್ಲದೆ ಗ್ರಾಮೀಣ ಊಟದ ವ್ಯವಸ್ಥೆ ಮಾಡಲಾಗಿತ್ತು. ರೊಟ್ಟಿ ತಟ್ಟುವುದು, ರಾಗಿ ಬೀಸುವುದು ಎಲ್ಲವನ್ನೂ ನಗರದ ಜನತೆಗೆ ಮಂಡೂರು ಜನ ಅರಿವು ಮೂಡಿಸಿದರು. ಗ್ರಾಮೀಣ ಕ್ರೀಡೆ, ಸಂಸ್ಕೃತಿಯನ್ನು ವೈಭವೀಕರಿಸಿದ ಈ ಹಳ್ಳಿ ಹಬ್ಬ ಕಾರ್ಯಕ್ರಮ ವೀಕ್ ಎಂಡ್‌ಗೆ ಮಜಾ ತಂದಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ನಗರ ಪ್ರದೇಶದ ಒತ್ತಡಮಯ ಜೀವನಶೈಲಿಯಿಂದ ಮನೋರಂಜನೆಗೆ ಅವಕಾಶವಿಲ್ಲದಂತಾಗಿದೆ. ಗ್ರಾಮೀಣ ಕ್ರೀಡೆ, ಕಲೆ, ಸಂಸ್ಕೃತಿಗಳು ನಶಿಸಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಮಂಡೂರಿನ ವಿದ್ಯಾರಣ್ಯ ಸಂಸ್ಥೆಯವರು ಹಳ್ಳಿ ಹಬ್ಬ ಕಾರ್ಯಕ್ರಮದ ಮೂಲಕ ಗ್ರಾಮೀಣ ಸೊಗಡನ್ನು ಅನಾವರಣಗೊಳಿಸಿರುವುದು ಪ್ರಶಂಸನೀಯ ಎಂದರು.

Write A Comment