ಪುಣೆ, ಅ.3: ಇಲ್ಲಿಯ ಭಾರತೀಯ ಸಿನೆಮಾ ಮತ್ತು ದೂರದರ್ಶನ ಸಂಸ್ಥೆಯಲ್ಲಿನ ಸ್ಥಿತಿಯ ಅಧ್ಯಯನಕ್ಕಾಗಿ ಸರಕಾರವು ರಚಿಸಿದ್ದ ಸಮಿತಿಯು, ಯೋಜನೆಗಳಲ್ಲಿ ವಿಳಂಬಕ್ಕೆ ವಿದ್ಯಾರ್ಥಿಗಳು ಮತ್ತು ಬೋಧಕ ವೃಂದವೇ ಸಂಪೂರ್ಣ ಹೊಣೆಯಾಗಿದ್ದು, ಇದು ಸಂಸ್ಥೆಯಲ್ಲಿನ ಪರಿಸ್ಥಿತಿ ಇನ್ನಷ್ಟು ಹದಗೆಡಲು ಕಾರಣವಾಗಿದೆ ಎಂದು ಹೇಳಿದೆ.
‘ವಿದ್ಯಾರ್ಥಿ ಪರ’ ಎನಿಸಿಕೊಳ್ಳಲು ಅವರನ್ನು ಪ್ರಚೋದಿಸುವ ಮೂಲಕ ಎಫ್‌ಟಿಐಐನಲ್ಲಿ ಅಹಿತಕರ ವಾತಾವರಣ ಸೃಷ್ಟಿಸುವಲ್ಲಿ ಬೋಧಕ ವೃಂದವು ಭಾಗಿಯಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ನೇಮಕಗೊಂಡ,ಭಾರತೀಯ ವೃತ್ತಪತ್ರಿಕೆಗಳ ರಿಜಿಸ್ಟ್ರಾರ್ ಎಸ್.ಎಂ.ಖಾನ್ ನೇತೃತ್ವದ ಸಮಿತಿಯು ತನ್ನ ವರದಿಯಲ್ಲಿ ಬೆಟ್ಟು ಮಾಡಿದೆ.ಎಫ್‌ಟಿಐಐ ನಿರ್ದೇಶಕ ಪ್ರಶಾಂತ್ ಪತ್ರಬೆ ಅವರಿಗೆ ೇರಾವ್ ಹಾಕಿದ್ದ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮದ ನಂತರ ಅವರೊಂದಿಗೆ ಮಾತುಕತೆ ನಡೆಸಲು ಈ ಸಮಿತಿಯನ್ನು ರಚಿಸಲಾಗಿತ್ತು.
ಆ.21ರಂದು ಸಂಸ್ಥೆಗೆ ಭೇಟಿ ನೀಡಿದ್ದ ಸಮಿತಿಯು ವಿದ್ಯಾರ್ಥಿಗಳು,ಆಡಳಿತ,ಬೋಧಕ ವೃಂದ ಮತ್ತು ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಸಂಬಂಧಿಸಿದವರೊಂದಿಗೆ ವ್ಯಾಪಕ ಚರ್ಚೆಗಳನ್ನು ನಡೆಸಿತ್ತು.ಸಂಸ್ಥೆಯ ಅಧ್ಯಕ್ಷರಾಗಿ ಟಿವಿ ನಟ ಹಾಗೂ ಬಿಜೆಪಿ ಸದಸ್ಯ ಗಜೇಂದ್ರ ಚೌಹಾಣ್ ಅವರ ನೇಮಕವನ್ನು ವಿರೋಧಿಸಿ ಎಫ್‌ಟಿಐಐ ವಿದ್ಯಾರ್ಥಿಗಳು ಜೂನ್ 12ರಿಂದ ಮುಷ್ಕರದಲ್ಲಿ ತೊಡಗಿದ್ದಾರೆ.
ಸೌಲಭ್ಯಗಳಿಗೆ ಯಾವುದೇ ಕೊರತೆಯಿಲ್ಲದಿದ್ದರೂ ಮತ್ತು ಶೂಟಿಂಗ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿದ್ದರೂ ವಿದ್ಯಾರ್ಥಿಗಳು ನಿಗದಿತ ಸಮಯದಲ್ಲಿ ತಮ್ಮ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಿಲ್ಲ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ. ಅಪೂರ್ಣ ಪ್ರಾಜೆಕ್ಟ್‌ಗಳನ್ನು ಅವು ಇರುವ ಸ್ಥಿತಿಯಲ್ಲಿಯೇ ವೌಲ್ಯಮಾಪನಗೊಳಿಸುವ ನಿರ್ದೇಶಕರ ನಿರ್ಧಾರವನ್ನು ಅದು ಸಮರ್ಥಿಸಿದೆ.