ರಾಷ್ಟ್ರೀಯ

ದೇಶಾದ್ಯಂತ ಪುರುಷರ ಮೇಲೆಯೂ ನಡೆಯುತ್ತಿದೆ ದೌರ್ಜನ್ಯ! ಹೆಲ್ಪ್ ಲೈನ್‍ಗೆ ಬರುತ್ತಿದೆ ಚಿತ್ರ ವಿಚಿತ್ರ ದೂರುಗಳು

Pinterest LinkedIn Tumblr

Man

ನವದೆಹಲಿ: ಸಾಮೂಹಿಕ ಅತ್ಯಾಚಾರ, ಬೆತ್ತಲೆ ವೀಡಿಯೋ, ಬೆಲ್ಟಿನಿಂದ ಹಲ್ಲೆ…! ಇದು ಯಾವುದೋ ಮಹಿಳೆ ಮೇಲೆ ನಡೆದ ಅಮಾನವೀಯ ಘಟನೆಯ ವಿವರಣೆಯಲ್ಲ. ಬದಲಾಗಿ 19 ವರ್ಷದ ಯುವಕನೊಬ್ಬನ ಮೇಲೆ ಮಹಿಳೆಯರು ನಡೆಸಿದ ಪೈಶಾಚಿಕ ಕೃತ್ಯದ ಕಥೆ.

ಇದೇನು ವಿದೇಶದ ಕಥೆಯೂ ಅಲ್ಲ. ನಮ್ಮದೇ ದೇಶದಲ್ಲಿ ಪ್ರತಿ ನಿತ್ಯ ಮಹಿಳೆಯರೂ ಪುರುಷರ ಮೇಲೆ ಯಾವ ರೀತಿ ದೌರ್ಜನ್ಯ ಎಸಗುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆಯಷ್ಟೆ. ದೇಶಾದ್ಯಂತ ಪುರುಷರ ಮೇಲೆ ಮಹಿಳೆಯರಿಂದ ನಡೆಯುವ ದೌರ್ಜನ್ಯಗಳ ದೂರಿಗಾಗಿ ಆರಂಭಿಸಲಾಗಿರುವ ಹೆಲ್ಪ್ ಲೈನ್‍ಗೆ ಪ್ರತಿ ದಿನ ಈ ರೀತಿಯ ಅನೇಕ ಚಿತ್ರ ವಿಚಿತ್ರ ದೂರುಗಳು ಬರುತ್ತವೆ. ಬಹುತೇಕ ಪ್ರಕರಣಗಳಲ್ಲಿ ಈ ರೀತಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರೂ ಪುರುಷರು ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗದ ಸ್ಥಿತಿಗೆ ಸಿಲುಕಿದ್ದಾರೆ.

ಮೇಲಿನ ಪ್ರಕರಣದಲ್ಲಿ ಆ ಯುವಕ ಪ್ರಭಾವಿ ಕುಟುಂಬಕ್ಕೆ ಸೇರಿದ್ದರೂ ಕಾನೂನು ಮೂಲಕ ಆತನ ಸಮಸ್ಯೆಗೆ ಪರಿಹಾರ ದೊರಕಿಸುವುದು ಕಷ್ಟ. ಯಾಕೆಂದರೆ ಭಾರತೀಯ ಅತ್ಯಾಚಾರ ಕಾನೂನು ಪುರುಷನ ಮೇಲೆ ನಡೆಯುವ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ವರ್ಷದ ಹಿಂದೆ ದೇಶಾದ್ಯಂತ ಆರಂಭವಾದ ಹೆಲ್ಪ್‍ಲೈನ್ 8882498498ಕ್ಕೆ ಈವರೆಗೆ 37 ಸಾವಿರ ಕರೆಗಳು ಬಂದಿವೆ. ಕೆಲವು ಕರೆಗಳನ್ನು ಬೋಗಸ್ ಎಂದು ಪರಿಗಣಿಸಿದರೂ ಪ್ರತಿ ದಿನ ಕನಿಷ್ಠವೆಂದರೂ 100ಕ್ಕೂ ಹೆಚ್ಚು ದೂರುಗಳು ಬರುತ್ತವೆ.

ದೇಶದಲ್ಲೇ ಅತಿ ಹೆಚ್ಚು ಕರೆಗಳು ಬರುವುದು ಮಧ್ಯಪ್ರದೇಶದಿಂದ. ನಂತರದ ಸ್ಥಾನ ಕ್ರಮವಾಗಿ ರಾಜಸ್ಥಾನ, ದೆಹಲಿ, ಹರ್ಯಾಣ ಮತ್ತು ಪಂಜಾಬ್‍ಗೆ ಸಲ್ಲುತ್ತದೆ. ಬಹುತೇಕ ಪ್ರಕರಣಗಳು ಸುಳ್ಳು ಅತ್ಯಾಚಾರ ಹಾಗೂ ವರದಕ್ಷಿಣೆ ಕಿರುಕುಳಗಳಿಗೆ ಸೀಮಿತವಾಗಿವೆ. ದೆಹಲಿಯಲ್ಲಿ ವರದಕ್ಷಿಣೆ ಪ್ರಕರಣಕ್ಕಿಂತ ಉಳಿದ ಆರೋಪಗಳೇ ಹೆಚ್ಚಂತೆ. ಅದರಲ್ಲೂ ಮುಖ್ಯವಾಗಿ ಸುಳ್ಳು ಲೈಂಗಿಕ ಕಿರುಕುಳ, ಗಂಡನ ಕುಟುಂಬದ ಮೇಲೆ ಅತ್ಯಾಚಾರ ಆರೋಪಗಳೂ ಇವುಗಳಲ್ಲಿ ಸೇರಿವೆ. ಕೆಲಸದ ಸ್ಥಳಗಳಲ್ಲೂ ಪುರುಷರ ಮೇಲೆ ಲೈಂಗಿಕ ಕಿರುಕುಳ ನಡೆಯುವ ಕುರಿತೂ ಸಾಕಷ್ಟು ಪ್ರಕರಣಗಳು ದಾಖಲಾಗುತ್ತವಂತೆ.

Write A Comment