ಬೆಂಗಳೂರು: ರಾಘವೇಶ್ವರ ಶ್ರೀಗಳ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಗಳನ್ನು ಹೋಲುವ ಚಿತ್ರವನ್ನು ನಿರ್ಮಿಸಲು ಸ್ಯಾಂಡಲ್ವುಡ್ನ ಚಿತ್ರರಂಗದ ನಿರ್ಮಾಪಕ ಟೇಶಿ ವೆಂಕಟೇಶ್ ಅವರು ಸಿದ್ಧತೆ ನಡೆಸಿದ್ದು, ಗೋಮುಖ ಎಂಬ ಹೆಸರಿನಲ್ಲಿ ಚಿತ್ರ ಮಾಡುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಸ್ವತಃ ಟೇಶಿ ವೆಂಕಟೇಶ್ ಅವರೇ ಖುದ್ದು ಪ್ರತಿಕ್ರಿಯಿಸಿದ್ದು, ರಾಘವೇಶ್ವರ ಶ್ರೀಗಳ ವಿರುದ್ಧ ಇರುವ ಅತ್ಯಾಚಾರ ಪ್ರಕರಣದ ಬಗ್ಗೆ ಸಿನಿಮಾ ಮಾಡಲು ನಿರ್ಧರಿಸಿದ್ದೇನೆ. ಚಿತ್ರವನ್ನು ನಾನೇ ನಿರ್ದೇಶಿಸುತ್ತಿದ್ದು, ನಿರ್ಮಾಣವನ್ನೂ ನಾನೇ ಮಾಡುತ್ತಿದ್ದಾನೆ. ಚಿತ್ರಕ್ಕೆ ಗೋಮುಖ ಅಥವಾ ಕಾಮದ ಇನ್ನೊಂದು ಮುಖ ಎಂಬ ಎರಡು ಹೆಸರುಗಳಲ್ಲಿ ಒಂದನ್ನು ಇಡಲಿದ್ದು, ಈಗಾಗಲೇ ಗೋಮುಖ ಎಂಬ ಹೆಸರನ್ನು ನೋಂದಣಿ ಮಾಡಿಸಿದ್ದೇವೆ ಎಂದರು.
ಇದೇ ವೇಳೆ, ಚೇತನ್ ದಾಸ್ ಅಥವಾ ರಂಗಾಯಣ ರಘು ಅವರು ನಾಯಕ ನಟರಾಗಿ ನಟಿಸಲಿದ್ದು, ಸಂತ್ರಸ್ತ ಮಹಿಳೆಯಾಗಿ ನಟಿ ರೂಪರ್ಶಿ ಅವರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣಕ್ಕಾಗಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಚಿತ್ರೀಕರಣವು ಮುಂದಿನ ತಿಂಗಳು ಆರಂಭವಾಗಲಿದೆ ಎಂದರು.
ಇನ್ನು ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ರಾಘವೇಶ್ವರ ಶ್ರೀಗಳ ವಿರುದ್ಧ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಪ್ರಸ್ತುತ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಮೊದಲ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಾಗಲೇ ಚಾರ್ಜ್ ಶೀಟ್ನ್ನೂ ಸಲ್ಲಿಸಿದ್ದಾರೆ.
ಒಟ್ಟಾರೆ ಸಮಾಜ ಸೇವಕರಾಗಿ ಸುಧಾರಣೆ ಮಾಡಬೇಕಾದ ಶ್ರೇಷ್ಠ ಸ್ಥಾನದಲ್ಲಿ ಕುಳಿತ ಕೆಲ ವ್ಯಕ್ತಿಗಳು ತಮ್ಮ ಕಷ್ಟ ಪರಿಹರಿಸಿ ಎಂದು ನಂಬಿ ಬರುವ ಭಕ್ತರನ್ನು ದುರುಪಯೋಗಪಡಿಸಿಕೊಂಡು ಅವರ ಇಡೀ ಜೀವನ ಸರ್ವನಾಶವಾಗಲು ಹೇಗೆ ಕಾರಣರಾಗುತ್ತಾರೆ ಎಂಬುದನ್ನು ಚಿತ್ರದಲ್ಲಿ ಟೇಶಿ ವೆಂಕಟೇಶ್ ಅವರು ತೋರಿಸಲಿದ್ದಾರಂತೆ.