ಮೈಸೂರು, ಅ.2: ಈ ಬಾರಿ ವಿಶ್ವವಿಖ್ಯಾತ ದಸರಾ ಉತ್ಸವ ಸರಳವಾಗಿ ನಡೆಯುವುದು ಮಾತ್ರವಲ್ಲ, ಸಾಂಪ್ರದಾಯಿಕ ಆಚರಣೆಯಲ್ಲೂ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ. ಪ್ರತಿ ವರ್ಷ ಆಯುಧಪೂಜೆಯ ಮಾರನೆ ದಿನ ನಡೆಯುತ್ತಿದ್ದ ವಿಜಯದಶಮಿ ಮೆರವಣಿಗೆಯನ್ನು ಈ ಬಾರಿ ಆಯುಧ ಪೂಜೆಯ ದಿನವೇ ನೆರವೇರಿಸಲು ಸರಕಾರ ನಿರ್ಧರಿಸಿದೆ. ಇದಕ್ಕೆ ಕಾರಣವೂ ಸ್ಪಷ್ಟ. ಈ ಬಾರಿ ಅ.23ರ ಮುಂಜಾನೆ 5:01ಕ್ಕೆ ದಶಮಿ ಮುಗಿಯುವ ಹಿನ್ನೆಲೆಯಲ್ಲಿ ಅ.22ರ ಆಯುಧ ಪೂಜೆಯ ದಿನವೇ ವಿಜಯದಶಮಿ ಮೆರವಣಿಗೆ ನಡೆಸಲಾಗುವುದು.
ಅ.22ರಂದು ಮಧ್ಯಾಹ್ನ 1:10ರಿಂದ 1:25ರೊಳಗಿನ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, 3:12ರಿಂದ 4:10ರೊಳಗೆ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪನೆಗೊಳ್ಳುವ ನಾಡದೇವಿ ಶ್ರೀಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಬೆ ನಡೆಸಲಾಯಿತು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಧಾರ್ಮಿಕ ಕಟ್ಟುಪಾಡುಗಳಿಗೆ ಅನುಗುಣವಾಗಿ ಅ.23ರ ಮುಂಜಾನೆ ದಶಮಿ ಮುಕ್ತಾಯ ಗೊಳ್ಳುವುದರಿಂದ ಅ.22ರ ಆಯುಧ ಪೂಜೆ ದಿನದಂದೇ ವಿಜಯದಶಮಿ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು. ಅ.13ರಂದು ನಾಡದೇವಿ ಶ್ರೀ ಚಾಮುಂಡೇಶ್ವರಿ ಸನ್ನಧಿಯ ಚಾಮುಂಡಿಬೆಟ್ಟದಲ್ಲಿ ನಾಡಹಬ್ಬವನ್ನು ಬೆಳಗ್ಗೆ 11:05ರಿಂದ 11:55ರೊಳಗಿನ ಧನುರ್ ಲಗ್ನದಲ್ಲಿ ಉದ್ಘಾಟಿಸಲಾಗುವುದು. ಅಷ್ಟೇ ಅಲ್ಲ, ಈ ಬಾರಿ ದಸರಾ ಉದ್ಘಾಟಿಸುವವರು ಯಾರು ಎಂಬ ಕುತೂಹಲಕ್ಕೆ ಸರಕಾರ ತೆರೆ ಎಳೆದಿದೆ. ಎಚ್.ಡಿ.ಕೋಟೆ ತಾಲೂಕಿನ ಮಲಾರ ಕಾಲನಿಯ ಪ್ರಗತಿಪರ ರೈತ ಪುಟ್ಟಯ್ಯ ನಾಡಹಬ್ಬ ದಸರಾವನ್ನು ಉದ್ಘಾಟಿಸಲಿದ್ದಾರೆ.