ಕರ್ನಾಟಕ

ಅಂಗನವಾಡಿ, ಶಾಲಾ ಮಕ್ಕಳಿಗೆ ‘ಮೊಟ್ಟೆ ಭಾಗ್ಯ’ಕ್ಕೆ ಆಗ್ರಹಿಸಿ ಧರಣಿ

Pinterest LinkedIn Tumblr

Parents and Students of Government Schools stage a protest demanding boiled eggs with midday meals, at Town hall in Bengaluru on Friday, October 02, 2015. - KPN ### Students protest for Egg with midday meals

ಬೆಂಗಳೂರು, ಅ.2: ಬಡ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸುವ ದೃಷ್ಟಿಯಿಂದ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ‘ಮೊಟ್ಟೆ ಭಾಗ್ಯ’ ನೀಡಬೇಕೆಂದು ಆಗ್ರಹಿಸಿ ಆಹಾರ ಹಕ್ಕಿಗಾಗಿ ಆಂದೋಲನ ನೇತೃತ್ವದಲ್ಲಿ ಶಾಲಾ ಮಕ್ಕಳು ಹಾಗೂ ಪೋಷಕರು ಧರಣಿ ನಡೆಸಿದರು.

ಶುಕ್ರವಾರ ನಗರದ ಪುರಭವನದ ಮುಂಭಾಗದಲ್ಲಿ ನಡೆಸಿದ ನೂರಾರು ಶಾಲಾ ಮಕ್ಕಳು, ಪೋಷಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ರಾಜ್ಯ ಸರಕಾರ ‘ಮೊಟ್ಟೆ ಭಾಗ್ಯ’ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಈ ಹಿಂದೆ ರಾಜ್ಯದಲ್ಲಿನ ಅಂಗನವಾಡಿ- ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ಬೇಯಿಸಿದ ಮೊಟ್ಟೆ ನೀಡಲಾಗುತ್ತಿತ್ತು. ಆದರೆ, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ಆಡಳಿತದ ವೇಳೆ ಕೋಮುವಾದಿಗಳು ಒತ್ತಡ ತಂದು ಅದನ್ನು ಸ್ಥಗಿತಗೊಳಿಸಲಾಗಿದೆ. ಅದನ್ನು ಪುನರ್ ಆರಂಭಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

ಆಂದೋಲನದ ನೇತೃತ್ವದ ವಹಿಸಿದ್ದ ಮುಖಂಡ ವೈ.ಮರಿಸ್ವಾಮಿ ಮಾತನಾಡಿ, ಶಾಕಾಹಾರಿಗಳು ಶುದ್ಧ, ಮಾಂಸಾಹಾರಿಗಳು ಅಶುದ್ಧರೆಂಬ ಕುತರ್ಕವನ್ನು ಕೋಮುವಾದಿ ಸಂಘಟನೆಗಳು ಎಲ್ಲೆಡೆ ಹಬ್ಬಿಸುತ್ತಿದ್ದು, ಶೋಷಿತ ಸಮುದಾಯಗಳ ಆಹಾರದ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ದೂರಿದರು.

ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲಾ ಮಕ್ಕಳು ಬಡವರಾಗಿದ್ದು, ಅವರಲ್ಲಿನ ಅಪೌಷ್ಟಿಕತೆ ನಿವಾರಣೆ ಹಾಗೂ ಅವರ ದೈಹಿಕ-ಮಾನಸಿಕ ಬೆಳವಣಿಗೆಗೆ ಮೊಟ್ಟೆ ಅಗತ್ಯ. ಆದುದರಿಂದ ಸಿಎಂ ಸಿದ್ದರಾಮಯ್ಯ, ಸಚಿವೆ ಉಮಾಶ್ರೀ, ಸಚಿವ ಕಿಮ್ಮನೆ ರತ್ನಾಕರ ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ‘ಮೊಟ್ಟೆ ಭಾಗ್ಯ’ ನೀಡಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಧರಣಿಯಲ್ಲಿ ಸಮತಾ ಸೈನಿಕ ದಳ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಮುಖಂಡರಾದ ಬಿ.ಗೋಪಾಲ್, ಲಯನ್ ಕೆ.ವಿ. ಬಾಲಕೃಷ್ಣ, ಮಾನವ ಹಕ್ಕು ಹೋರಾಟಗಾರ ಮೂರ್ತಿ, ನೀಲಯ್ಯ, ಸುನಂದ ಸೇರಿ ಶಾಲಾ ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.

Write A Comment