ಮನೋರಂಜನೆ

ಬಾಲಿವುಡ್‌ನಲ್ಲಿ ಐದು ವರ್ಷ ಪೂರೈಸಿದ ಸೋನಾಕ್ಷಿ ಸಿನ್ಹಾ

Pinterest LinkedIn Tumblr

sonakshiಬಾಲಿವುಡ್‌ನಲ್ಲಿ ಯಶಸ್ವಿ ಐದು ವರ್ಷ ಪೂರೈಸಿರುವ ‘ದಬಂಗ್‌’ ಚೆಲುವೆ ಸೋನಾಕ್ಷಿ ಸಿನ್ಹಾ, ತಮ್ಮ ಈ ಸಿನಿ ಪಯಣವನ್ನು ತುಂಬ ಪ್ರೀತಿಸುವುದಾಗಿ ಹೇಳಿಕೊಂಡಿದ್ದಾರೆ. ಹಾಗೆಯೇ,  ಬಾಲಿವುಡ್‌ನಲ್ಲಿ ಮತ್ತಷ್ಟು ವರ್ಷಗಳ ಕಾಲ ತಾವು ಇದೇ ರೀತಿ ಮುಂದುವರಿಯಲು ಬಯಸುವುದಾಗಿಯೂ ತಿಳಿಸಿದ್ದಾರೆ.

‘ಈ ಸೆಪ್ಟೆಂಬರ್‌ಗೆ  ನಾನು ಬಾಲಿವುಡ್‌ಗೆ ಕಾಲಿಟ್ಟು ಐದು ವರ್ಷಗಳಾದವು.  ನನ್ನ ಚಿತ್ರಬದುಕಿನ ಅಷ್ಟೂ ದಿನಗಳು ತುಂಬ ಖುಷಿ ಕೊಟ್ಟಿವೆ. ಇಂಡಸ್ಟ್ರಿಯಲ್ಲಿದ್ದುಕೊಂಡು ನಾನು ಸಾಕಷ್ಟು ಕಲಿತಿದ್ದೇನೆ. ನನ್ನ ಈ ಪಯಣ ಸಾಕಷ್ಟು ಸುಂದರ ನೆನಪುಗಳಿಗೆ ಸಾಕ್ಷಿಯಾಗಿದೆ.

ಅದೇ ಸಂದರ್ಭದಲ್ಲಿ ನಾನು ಇಷ್ಟಪಡದ ಕೆಲವು ಸಂಗತಿಗಳೂ ಜೊತೆಯಾಗಿವೆ. ಸೆಲಬ್ರಿಟಿ ಆಗುವುದರಿಂದ ನಮ್ಮ ಖಾಸಗೀ ಬದುಕಿಗೆ ಸ್ವಲ್ಪ ಧಕ್ಕೆಯಾಗುತ್ತದೆ. ಸಾರ್ವಜನಿಕವಾಗಿ ಓಡಾಡುವುದೇ ಕಷ್ಟವಾಗುತ್ತದೆ. ಇದೊಂದನ್ನು ಬಿಟ್ಟರೆ ಮತ್ತಿನ್ಯಾವ ಕೊರಗೂ ನನ್ನನ್ನು ಕಾಡಿಲ್ಲ’ ಎಂದಿದ್ದಾರೆ 28ರ ಹರೆಯದ ಸುಂದರಿ ಸೋನಾಕ್ಷಿ.

ಸೋನಾಕ್ಷಿ ಈಗ ಅಭಿನಯ್‌ ಡಿಯೊ ನಿರ್ದೇಶನದ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅವರು ನಟ ಜಾನ್‌ ಅಬ್ರಹಾಂ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

‘ನಾನು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ ಎಂದು ಹೇಳಿಕೊಳ್ಳಲು ಬಯಸುವುದಿಲ್ಲ. ಅದು ನಮ್ಮ ವೃತ್ತಿಯ ಒಂದು ಭಾಗ. ನನ್ನ ವೃತ್ತಿಯನ್ನು ತುಂಬ ಪ್ರೀತಿಸುತ್ತೇನೆ. ಅದಕ್ಕಾಗಿ ನನ್ನ ಚಿಕ್ಕ ಚಿಕ್ಕ ಖುಷಿಗಳನ್ನು ತ್ಯಾಗ ಮಾಡಲು ಸಿದ್ಧಳಿದ್ದೇನೆ. ನಿರ್ದೇಶಕರು ಏನು ಹೇಳುತ್ತಾರೋ ಅದನ್ನು ನಾನು ಮಾಡುತ್ತೇನೆ’ ಎನ್ನುವ ಸೋನಾಕ್ಷಿ, ಎ.ಆರ್‌.ಮುರುಗದಾಸ್‌ ಅವರ ನಿರ್ದೇಶನದ ಚಿತ್ರದಲ್ಲಿ ಹೆವಿವೇಯ್ಟ್‌ ಆ್ಯಕ್ಷನ್‌ ಸನ್ನಿವೇಶಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಲಿದ್ದಾರಂತೆ.

Write A Comment