ಪಾಟ್ನಾ,ಸೆ.29: ‘ಮೀಸಲಾತಿಯನ್ನು ಕೊನೆಗೊಳಿಸಬೇಕೆಂದು ಹೇಳುವ ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್‌ಗೆ, ಮೋದಿ ಭಾರತರತ್ನವನ್ನೇ ಬೇಕಾದರೆ ನೀಡಲಿ… ಒಂದು ವೇಳೆ ಹಿಂದುಳಿದವರು, ದಲಿತರು ಹಾಗೂ ಬಡವರ ಪರವಾಗಿ ಸಮರ ಸಾರಿದ್ದಕ್ಕಾಗಿ ಅವರು ನನ್ನನ್ನು ಗಲ್ಲಿಗೇರಿಸಲು ನಿರ್ಧರಿಸಿದರೂ ಕೂಡಾ ನಾನು ಸುಮ್ಮನಿರಲಾರೆ ಎಂದು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಆರೆಸ್ಸೆಸ್ ವರಿಷ್ಠರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, ಹಿಂದುಳಿದವರು, ದಲಿತರು ಹಾಗೂ ಬಡವರ ಪರ ಹೋರಾಡಿದ್ದಕ್ಕಾಗಿ ತನ್ನನ್ನು ಗಲ್ಲಿಗೇರಿಸಲು ನಿರ್ಧರಿಸಿದರೂ ಸಹ ತಾನು ಹಿಂಜರಿಯಲಾರೆ ಎಂದು ಗುಡುಗಿದ್ದಾರೆ.
ಒಂದು ವೇಳೆ ಪ್ರಧಾನಿ ತನ್ನ ವಿರುದ್ಧ ವಿಶ್ವಸಂಸ್ಥೆಯಲ್ಲಿ ದಾವೆ ಹೂಡಿದರೂ ಸಹ ಮೀಸಲಾತಿ ಕೋಟಾ ಹೆಚ್ಚಿಸುವವರೆಗೆ ಹಾಗೂ ಜಾತಿ ಗಣತಿಯ ವರದಿ ಪ್ರಕಟವಾಗುವವರೆಗೆ ತಾನು ವಿಶ್ರಮಿಸುವುದಿಲ್ಲವೆಂದವರು ಖಾರವಾಗಿ ಹೇಳಿದ್ದಾರೆ. ಲಾಲು ಪ್ರಸಾದ್ ಅವರು ರಾಘೋಪುರ್‌ನಲ್ಲಿ ತನ್ನ ಪುತ್ರ ತೇಜಸ್ವಿ ಯಾದವ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಸಂದರ್ಭದಲ್ಲಿ ಜಾತಿದ್ವೇಷವನ್ನು ಪ್ರಚೋದಿಸುವ ಹೇಳಿಕೆಗಳನ್ನು ನೀಡಿರುವುದನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿದೆ.
ಲಾಲುಪ್ರಸಾದ್ ಅವರ ಜಾತಿವಾದಿ ಹೇಳಿಕೆಗಳು, ಚುನಾವಣಾ ಆಯೋಗದ ನೀತಿ ಸಂಹಿತೆಗೆ ವಿರುದ್ಧವಾದುದಾಗಿವೆೆ ಹಾಗೂ ಈ ವಿಷಯವನ್ನು ಆಯೋಗವು ತನ್ನ ಕಾನೂನು ಚೌಕಟ್ಟಿನಡಿಯಲ್ಲಿ ನಿಭಾಯಿಸಲಿದೆಯೆಂದು ಮುಖ್ಯ ಚುನಾವಣಾ ಆಯುಕ್ತ ನಸೀಂ ಝೈದಿ ಸೋಮವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಲಾಲುಪ್ರಸಾದ್, ಇತ್ತೀಚೆಗೆ ರಾಘೋಪುರ್‌ನಲ್ಲಿ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡುತ್ತಾ, ಬಿಹಾರದ ಚುನಾವಣೆಯು ‘ಹಿಂದುಳಿದ ಜಾತಿಗಳು ಹಾಗೂ ಮುಂದುವರಿದ ಜಾತಿಗಳ’ ನಡುವಿನ ನೇರ ಸಂಘರ್ಷವೆಂದು ಬಣ್ಣಿಸಿದ್ದರು. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಪರಾಭವಗೊಳಿಸಲು ಯಾದವರು ಹಾಗೂ ಇದರ ಹಿಂದುಳಿದ ಸಮುದಾಯಗಳು, ಒಟ್ಟಾಗಿ ಜಾತ್ಯತೀತ ಮೈತ್ರಿಕೂಟವನ್ನು ಬೆಂಬಲಿಸಬೇಕೆಂದು ಕರೆ ನೀಡಿದ್ದರು.