ಮೊದಲ ಚಿತ್ರವೇ ಸೂಪರ್ ಹಿಟ್ ಆಗಲಿ, ಒಳ್ಳೆಯ ಕಥೆ ಸಿಗಲಿ ಎಂಬ ಆಶಯ ಪ್ರತಿಯೊಬ್ಬ ಕಲಾವಿದರಿಗೂ ಇರುತ್ತದೆ. ತೆಲುಗಿನ ‘ಮೆಗಾ ಫ್ಯಾಮಿಲಿ’ ಕುಡಿ ನಿಹಾರಿಕಾ ಅವರಿಗೂ ಇಂಥದ್ದೇ ಆಶಯ ಇದೆ ಮತ್ತು ಅದೀಗ ಈಡೇರಿದೆ.
ಚಿರಂಜೀವಿ ಕುಟುಂಬದ ಬಹುತೇಕ ಎಲ್ಲರೂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಚಿರು ಸಹೋದರ ನಾಗೇಂದ್ರಬಾಬು ಪುತ್ರಿ ನಿಹಾರಿಕಾ ‘ಟೈಮ್ ಬರಲಿ, ನೋಡೋಣ’ ಎನ್ನುತ್ತ ಬಂದ ಅವಕಾಶಗಳನ್ನು ಮುಂದೂಡುತ್ತಲೇ ಇದ್ದರು. ಹಾಗಂತ, ಅವರೇನು ಸುಮ್ಮನೇ ಕುಳಿತಿರಲಿಲ್ಲ. ಕಿರುತೆರೆ ನಿರೂಪಕಿಯಾಗಿ ಫೇಮಸ್ ಆಗಿದ್ದಾರೆ. ಸದ್ಯ ಬೆಳ್ಳಿತೆರೆ ಪ್ರವೇಶಕ್ಕೆ ವೇದಿಕೆ ಅಣಿಗೊಳಿಸಿದ್ದಾರೆ.
ಅಮಿತಾಭ್ ಬಚ್ಚನ್- ದೀಪಿಕಾ ಪಡುಕೋಣೆ ನಟನೆಯ ‘ಪಿಕು’ ಚಿತ್ರ ಈಗ ತೆಲುಗಿಗೆ ರಿಮೇಕ್ ಆಗುತ್ತಿದೆ. ‘ರಿಮೇಕ್ ಕಿಂಗ್’ ಎನಿಸಿಕೊಂಡಿರುವ ನಟ ‘ವಿಕ್ಟರಿ’ ವೆಂಕಟೇಶ್ ಇಲ್ಲಿ ಅಮಿತಾಭ್ ಪಾತ್ರದಲ್ಲಿ ನಟಿಸಿದರೆ, ಪಿಕು ಪಾತ್ರದಲ್ಲಿ ಬಣ್ಣ ಹಚ್ಚೋಕೆ ನಿಹಾರಿಕಾ ರೆಡಿಯಾಗಿದ್ದಾರಂತೆ. ಅಸಲಿಗೆ, ನಿಹಾರಿಕಾಗೂ ಮೊದಲು ಆ ಪಾತ್ರವನ್ನು ಸಮಂತಾ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಚಾಲ್ತಿಯಲ್ಲಿತ್ತಾದರೂ ಇದೀಗ ಆ ಜಾಗಕ್ಕೆ ನಾಗೇಂದ್ರ ಬಾಬು ಪುತ್ರಿ ಅಗಮನವಾಗಿದೆ. ಮೊದಲ ಚಿತ್ರದಲ್ಲೇ ಮಹಿಳಾಪ್ರಧಾನ ಪಾತ್ರ ಸಿಕ್ಕಿರುವುದು ನಿಹಾರಿಕಾ ಖುಷಿಯನ್ನು ದ್ವಿಗುಣಗೊಳಿಸಿದೆ. ಸದ್ಯ ಚಿತ್ರತಂಡ ನಿಹಾರಿಕಾ ಅಪ್ಪನ ಅಪ್ಪಣೆಗೆ ಕಾದಿದೆ. ಅವರು ಗ್ರೀನ್ ಸಿಗ್ನಲ್ ನೀಡುತ್ತಿ್ತ್ದಂತೆ ಶೂಟಿಂಗ್ ಶುರು.