ತಿರುವನಂತಪುರ: ವಿಶ್ವದೆಲ್ಲೆಡೆ ಆಯಾ ಭಾಷೆಗೆ ಸಂಬಂಧಿಸಿದಂತೆ ಚಲನಚಿತ್ರ ಸಂಘಗಳಿರುವುದು ಹಳೆ ಸುದ್ದಿ. ಆದರೇ ಕೇರಳ ಚಿತ್ರೋದ್ಯಮದಲ್ಲೀಗ ಮಹಿಳಾ ಚಿತ್ರ ನಟಿಯರ ಸಂಘ ಅಸ್ತಿತ್ವಕ್ಕ್ಕೆ ಬರುತ್ತಿರುವುದು ಹೊಸ ಸುದ್ದಿ.
ಇಲ್ಲಿನ ‘ಸ್ತ್ರೀ ಪಾದಮ್ ಕೇಂದ್ರಮ್ ಎಂಬ ಸಂಸ್ಥೆ ಮಹಿಳಾ ಚಿತ್ರ ಸಂಘವನ್ನು ಸೆಪ್ಟೆಂಬರ್ 15 ರಂದು ಅಧಿಕೃತವಾಗಿ ಆರಂಭಿಸಲಿದೆ.
ಈಗಾಗಲೆ ಕಳೆದ ಕೆಲವು ವರ್ಷಗಳಿಂದ ವಾರ್ಷಿಕ ಚಲನ ಚಿತ್ರೋತ್ಸವ ಆಯೋಜಿಸುತ್ತಿರುವ ಸ್ತ್ರೀ ಪಾದಮ್ ಕೇಂದ್ರಮ್ ಮುಂದಿನ ವರ್ಷದಿಂದ ಮಹಿಳಾ ಚಿತ್ರ ಸಂಘದ ಮೂಲಕ ಮಹಿಳಾ ಪ್ರಧಾನ ಚಿತ್ರಗಳನ್ನು ಹಾಗೂ ಮಹಿಳೆಯರು ನಿರ್ದೇಶಿಸಿದ ಚಿತ್ರಗಳನ್ನು ಮುಖ್ಯವಾಗಿರಿಸಿಕೊಂಡು ಚಲನ ಚಿತ್ರೋತ್ಸವ ಸಂಘಟಿಸಲು ಚಿಂತನೆ ನಡೆಸಿದೆ.
ವಿಶ್ವದೆಲ್ಲೆಡೆ ಸಾಕಷ್ಟು ಚಿತ್ರ ಸಂಘಗಳಿದ್ದು, ಅವು ಚಲನ ಚಿತ್ರೋತ್ಸವಗಳನ್ನು ಆಯೋಜಿಸುತ್ತ ಬಂದಿವೆ. ಆದರೆ ಈ ಸಂದರ್ಭದಲ್ಲಿ ಮಹಿಳಾ ಪ್ರಧಾನ ಚಿತ್ರಗಳು, ಮಹಿಳಾ ನಿರ್ದೇಶಕರ ಚಿತ್ರಗಳಿಗೆ ಆದ್ಯತೆೆ ದೊರೆಯುತ್ತಿಲ್ಲ. ಹೀಗಾಗಿ ಚಿತ್ರೋದ್ಯಮದಲ್ಲಿ ಮಹಿಳೆಯರನ್ನು ಗುರುತಿಸುವುದಕ್ಕಾಗಿ ಮಹಿಳಾ ಚಿತ್ರ ಸಂಘವನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದು ಸ್ತ್ರೀ ಪಾದಮ್ ಕೇಂದ್ರಮ್ ನಿರ್ದೇಶಕಿ ಪಿ.ಎಸ್. ಶ್ರೀಕಲಾ ತಿಳಿಸಿದ್ದಾರೆ.
ಅಂದಹಾಗೆ, ಈ ಸಂಘದಲ್ಲಿ ಪುರುಷರಿಗೂ ಅವಕಾಶ ಇದೆಯಂತೆ.