ನವದೆಹಲಿ: ಕಲ್ಲಿದ್ದಲು ಹಗರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಮನ್ಸ್ ಜಾರಿ ಮಾಡುವಂತೆ ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಮಧುಕೋಡ ಸಲ್ಲಿಸಿದ್ದ ಅರ್ಜಿಗೆ ಸಿಬಿಐ ವಿರೋಧ ವ್ಯಕ್ತಪಡಿಸಿದೆ.
ಪ್ರಕರಣದಲ್ಲಿ ಮಾಜಿ ಪ್ರಧಾನಿ ವಿರುದ್ಧ ಸ್ಪಷ್ಟ ಸಾಕ್ಷ್ಯಾಧಾರಗಳಿಲ್ಲದ ಕಾರಣ ಸಮನ್ಸ್ ನೀಡುವಂತೆ ಕೋರಿರುವ ಅರ್ಜಿಯಲ್ಲಿ ಹುರುಳಿಲ್ಲ ಎಂದು ಸಿಬಿಐ ವಾದಿಸಿದೆ. ವಿಶೇಶ ನ್ಯಾಯಾಲಯದಲ್ಲಿ ವಾದ ಮಂಡಿಸಿರುವ ಸಿಬಿಐ ಪರ ವಕೀಲ ಆರ್.ಎಸ್ ಚೀಮ, ಜಿಂದಾಲ್ ಕಂಪನಿಗೆ ಅಕ್ರಮವಾಗಿ ಕಲ್ಲಿದ್ದಲು ಹಂಚಿಕೆ ಮಾಡಿರುವುದರಲ್ಲಿ ಮಾಜಿ ಪ್ರಧಾನಿ, ಅಂದಿನ ಕಲ್ಲಿದ್ದಲು ಸಚಿವ ಮನಮೋಹನ್ ಸಿಂಗ್ ಅವರು ಶಾಮೀಲಾಗಿದ್ದಾರೆಂಬುದು ಮೇಲ್ನೋಟಕ್ಕೆ ಕಂಡುಬಂದಿಲ್ಲ.
ತನಿಖೆ ವಿಳಂಬವಾಗುವುದಕ್ಕೆ ಹಾಗೂ ತನಿಖೆಯ ದಾರಿ ತಪ್ಪಿಸುವ ಉದ್ದೇಶದಿಂದ ಆರೋಪಿ ಮಧುಕೋಡ ಅರ್ಜಿ ಸಲ್ಲಿಸಿದ್ದಾರೆ ಎಂದು ಸಿಬಿಐ ಪರ ವಕೀಲರು ಆರೋಪಿಸಿದ್ದಾರೆ. ಜಿಂದಾಲ್ ಕಂಪನಿಗೆ ಅಕ್ರಮವಾಗಿ ಕಲ್ಲಿದ್ದಲು ಹಂಚಿಕೆ ಮಾಡಿರುವುದರ ಬಗ್ಗೆ ಸಮಗ್ರ ತನಿಖೆ ನಡೆಸಲಾಗಿದೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಮನ್ಸ್ ಜಾರಿ ಮಾಡುವಂತಹ ಅಂಶಗಳು ಪ್ರಕರಣದ ತನಿಖೆಯಲ್ಲಿ ಕಂಡುಬಂದಿಲ್ಲ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.