ಸ್ಯಾನ್ಜೋಸ್, ಸೆ.27: ಅಮೆರಿಕ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಕ್ಯಾಲಿಫೋರ್ನಿಯದಲ್ಲಿರುವ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಿದ್ದು, ವಿವಿಧ ಡಿಜಿಟಲ್ ಕಂಪೆನಿಗಳ ಸಿಇಒಗಳ ಜೊತೆ ಮಾತುಕತೆ ನಡೆಸಿದರು.
‘‘ಭಾರತದ ಅಭಿವೃದ್ಧಿಯಲ್ಲಿ ‘ಡಿಜಿಟಲ್ ಇಂಡಿಯಾ’ದ ಪಾತ್ರ ಮಹತ್ವದ್ದಾಗಿದೆ. ‘ಡಿಜಿಟಲ್ ಇಂಡಿಯಾ’ ಯೋಜನೆಯು ಜಾಗತಿಕವಾಗಿ ಭಾರತದ ಚಿತ್ರಣವನ್ನೇ ಬದಲಿಸಲಿದ್ದು, ಭಾರತಕ್ಕೊಂದು ವಿಶಿಷ್ಟ ಸ್ಥಾನಮಾನ ದೊರೆಯಲಿದೆ’’ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
‘‘ಭಾರತದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಹತ್ತರ ಬದಲಾವಣೆ ಹಾಗೂ ಪ್ರಗತಿಗೆ ಡಿಜಿಟಲ್ ಇಂಡಿಯಾ ಕಾರಣವಾಗಲಿದೆ. ಸರಕಾರವು ಕಾಗದ ರಹಿತ ಹಾಗೂ ಪಾರದರ್ಶಕ ಆಡಳಿತ ನೀಡಲು ಮುಂದಡಿ ಇಟ್ಟಿದೆ. ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗೂ ‘ಡಿಜಿಟಲ್ ಲಾಕರ್’ ಒದಗಿಸಲಾಗುವುದು. ರಾಷ್ಟ್ರದ 125 ಕೋಟಿ ಜನರನ್ನು ಡಿಜಿಟಲ್ ಆಡಳಿತಕ್ಕೆ ಒಳಪಡಿಸಲು ಯೋಜನೆ ರೂಪಿಸಲಾಗುತ್ತಿದೆ’’ ಎಂದವರು ವಿವರಿಸಿದರು.
ಡಿಜಿಟಲ್ ಕಂಪೆನಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ)ಗಳ ಜೊತೆ ಮಾತುಕತೆಯಲ್ಲಿ ಪಾಲ್ಗೊಂಡ ಅವರು, ‘‘ನಿಜಕ್ಕೂ ಇದೊಂದು ಅವಿಸ್ಮರಣೀಯ ದಿನ’’ ಎಂದು ಬಣ್ಣಿಸಿದರು.
‘‘ಭಾರತ ಸರಕಾರ ಜನಸಾಮಾನ್ಯರ ಜೀವನಮಟ್ಟವನ್ನು ಸುಧಾರಿಸಲು ಆಡಳಿತದಲ್ಲೂ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡಿದೆ.ತಂತ್ರಜ್ಞಾನ ಅಳವಡಿಕೆಯಿಂದ ಆಡಳಿತದ ಗುಣಮಟ್ಟವೂ ಹೆಚ್ಚಿದ್ದು, ಸಮಸ್ಯೆಗಳನ್ನು ಬಗೆಹರಿಸಲು ನೆರವಾಗಿದೆ. ತಂತ್ರಜ್ಞಾನದ ಮುಖ್ಯ ಕೊಡುಗೆಯಾಗಿರುವ ಸಾಮಾಜಿಕ ಜಾಲತಾಣಗಳು ಸಾಮಾಜಿಕ ಅಡೆತಡೆಗಳನ್ನು ನಿವಾರಿಸುತ್ತಿದೆ. ಟ್ವಿಟರ್ನಿಂದಾಗಿ ಈಗ ಪ್ರತಿಯೊಬ್ಬರೂ ವರದಿಗಾರರಾಗುತ್ತಿದ್ದಾರೆ. ಫೇಸ್ಬುಕ್ನಿಂದಲೇ ಪ್ರತಿಯೊಬ್ಬರ ದಿನ ಪ್ರಾರಂಭವಾಗುತ್ತಿದೆ. ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಪರಿಣಾಮಕಾರಿಯಾಗಿವೆ. ಭಾರತದಲ್ಲಿ ಉಚಿತ ಇಂಟರ್ನೆಟ್ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಲಾಗಿದ್ದು, 500 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ವ್ಯವಸ್ಥೆಯನ್ನು ಶೀಘ್ರದಲ್ಲೇ ಮಾಡಲಾಗುವುದು’’ ಎಂದು ಮೋದಿ ತಿಳಿಸಿದರು.
ಆ್ಯಪಲ್ ಸಿಇಒ ಟೆಮ್ ಕುಕ್, ಅಡೋಬ್ ಸಿಇಒ ಶಂತನು ನಾರಾಯಣ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ ಮತ್ತು ಕ್ವಾಲ್ಕಾಮ್ ಕಾರ್ಯ ನಿರ್ವಾಹಕ ಅಧ್ಯಕ್ಷ ಪಾಲ್ ಜಾಕೋಬ್, ಗೂಗಲ್ ಸಿಇಒ ಸುಂದರ್ ಪಿಚೈ, ಸಿಸ್ಕೋ ಕಂಪೆನಿ ಸಿಇಒ ಹಾಗೂ ಭಾರತ-ಅಮೆರಿಕ ವಾಣಿಜ್ಯ ಮಂಡಳಿಯ ಮುಂದಿನ ಅಧ್ಯಕ್ಷ ಜಾನ್ ಚಾಂಬರ್ಸ್ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.
ನರೇಂದ್ರ ಮೋದಿಯವರ ‘ಡಿಜಿಟಲ್ ಇಂಡಿಯಾ’ ಪರಿಕಲ್ಪನೆಗೆ ವಿವಿಧ ಡಿಜಿಟಲ್ ಕಂಪೆನಿಗಳ ಪ್ರಮುಖರು ಪ್ರಶಂಸೆ ಹಾಗೂ ಬೆಂಬಲ ವ್ಯಕ್ತಪಡಿಸಿದರು.
‘ಹಳ್ಳಿ, ಕಾಲೇಜುಗಳನ್ನು ಬ್ರಾಡ್ಬ್ಯಾಂಡ್ ಮೂಲಕ ಸಂಪರ್ಕಿಸುವ ಗುರಿ’
ಸ್ಯಾನ್ಜೋಸ್, ಸೆ.27: ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಿದ ಪ್ರಧಾನಿ ಮೋದಿಯವರು ಭಾರತದ ಆಡಳಿತದಲ್ಲಿ ಆಮೂಲಾಗ್ರ ಬದಲಾವಣೆಯ ಭರವಸೆ ನೀಡಿದರಲ್ಲದೆ, 100 ಕೋಟಿ ಸೆಲ್ ಫೋನ್ಗಳಿರುವ ದೇಶದಲ್ಲಿ ಮೊಬೈಲ್ ಆಡಳಿತಕ್ಕೆ ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ, ಅಭಿವೃದ್ಧಿಯ ಕನಸು ಸಾಕಾರಗೊಳಿಸುವ ಹಾಗೂ ಸಮಗ್ರ ಜನಾಂದೋಲನ ರೂಪಿಸುವ ಅದ್ಭುತ ಶಕ್ತಿಯಿದೆ ಎಂದು ಬಣ್ಣಿಸಿದರು.
ಭಾರತದಲ್ಲಿ 500 ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕ ವೈಫೈ ಹಾಟ್ಸ್ಪಾಟ್ ಒದಗಿಸುವುದು ಸೇರಿದಂತೆ ದೇಶಾದ್ಯಂತ ಡಿಜಿಟಲ್ಕ್ರಾಂತಿಯ ತಮ್ಮ ಯೋಜನೆಗಳನ್ನು ಸಭೆಯಲ್ಲಿ ನೆರೆದಿದ್ದ ಸಿಇಒಗಳ ಮುಂದೆ ವಿವರಿಸಿದರು. ಆರು ಲಕ್ಷ ಹಳ್ಳಿಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ, ಶಾಲೆ-ಕಾಲೇಜುಗಳನ್ನು ಬ್ರಾಡ್ಬ್ಯಾಂಡ್ ಮೂಲಕ ಸಂಪರ್ಕಿಸುವುದು, ಹೈವೇಗಳಂತೆಯೇ ‘ಐವೇ’ (ಅಂತರ್ಜಾಲ ಹೆದ್ದಾರಿ)ನಿರ್ಮಿಸುವುದು ತಮ್ಮ ಗುರಿ ಎಂದವರು ಹೇಳಿದರು.
ಬ್ಯಾಟರಿ ತಂತ್ರಜ್ಞಾನದಿಂದ ರೈತರಿಗೆ ನೆರವು
ಸ್ಯಾನ್ಜೋಸ್, ಸೆ.27: ಅಮೆರಿಕದಲ್ಲಿರುವ ಬೃಹತ್ ಆಟೊಮೊಬೈಲ್ ಕಂಪೆನಿ ‘ಟೆಸ್ಲಾ’ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ರವಿವಾರ ಭೇಟಿ ನೀಡಿದರು.
ಟೆಸ್ಲಾದ ಸಿಇಒ ಹಾಗೂ ಸಿಬ್ಬಂದಿ ಜೊತೆ ಮಾತನಾಡಿದ ಮೋದಿಯವರು ಕಂಪೆನಿಯ ಉತ್ಪನ್ನಗಳ ಕುರಿತು ಮಾಹಿತಿ ಪಡೆದರು. ಅಲ್ಲಿ ವಿವಿಧ ಉತ್ಪನ್ನಗಳು ಹಾಗೂ ಘಟಕದ ವೀಕ್ಷಣೆ ನಡೆಸಿದ ಅವರು, ಬ್ಯಾಟರಿ ತಂತ್ರಜ್ಞಾನವು ಭಾರತದ ರೈತರಿಗೆ ಹೇಗೆ ಸಹಾಯಕವಾಗಬಲ್ಲುದು ಎಂಬುದರ ಬಗ್ಗೆ ಚರ್ಚಿಸಿದರು ಎಂದು ವರದಿಗಳು ತಿಳಿಸಿವೆ.
‘ಭಾರತದ 5 ಲಕ್ಷ ಗ್ರಾಮಗಳಿಗೆ ಅಗ್ಗದ ಬ್ರಾಡ್ಬ್ಯಾಂಡ್’
ಸ್ಯಾನ್ಜೋಸ್,ಸೆ.27: ಮಹತ್ವಾಕಾಂಕ್ಷಿ ‘ಡಿಜಿಟಲ್ ಇಂಡಿಯಾ’ ಯೋಜನೆಯ ಪಾಲುದಾರನಾಗ ಬಯಸಿರುವ ಮೈಕ್ರೋಸಾಫ್ಟ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತ್ಯ ನಡೆಲ್ಲಾ ಅವರು, ತಮ್ಮ ಕಂಪೆನಿಯು ಭಾರತದಾದ್ಯಂತ ಸುಮಾರು 5 ಲಕ್ಷ ಗ್ರಾಮಗಳಿಗೆ ಕಡಿಮೆ ದರದಲ್ಲಿ ಬ್ರಾಡ್ಬ್ಯಾಂಡ್ ತಂತ್ರಜ್ಞಾನವನ್ನು ತಲುಪಿಸಲಿದೆ ಎಂದು ತಿಳಿಸಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರಿಗೆ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಪಾಲ್ಗೊಂಡ ನಡೆಲ್ಲಾ ಈ ಹೇಳಿಕೆ ನೀಡಿದ್ದಾರೆ.
ಭಾರತದ 5 ಲಕ್ಷ ಗ್ರಾಮಗಳಿಗೆ ಅಗ್ಗದ ದರದಲ್ಲಿ ಬ್ರಾಡ್ಬ್ಯಾಂಡ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಭಾರತ ಸರಕಾರದ ಜೊತೆ ಪಾಲುದಾರಿಕೆ ಹೊಂದುವ ಬಗ್ಗೆ ಮೈಕ್ರೋಸಾಫ್ಟ್ ಯೋಜನೆಯೊಂದನ್ನು ರೂಪಿಸಿದೆ. ಬ್ರಾಡ್ಬ್ಯಾಂಡ್ ಸಂಪರ್ಕ ಹಾಗೂ ಕ್ಲೌಡ್ ಕಂಪ್ಯೂಟಿಂಗ್ ಮೂಲಕ ಸಂಗ್ರಹಿಸಲಾಗುವ ಮಾಹಿತಿಯು ಸರಕಾರ ಹಾಗೂ ವ್ಯವಹಾರ ಕ್ಷೇತ್ರದಲ್ಲಿ ಸೃಜನಶೀಲತೆ, ದಕ್ಷತೆ ಮತ್ತು ಉತ್ಪಾದಕತೆ ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಎಂದು ನಡೆಲ್ಲಾ ವಿವರಿಸಿದರು.