ಕುಂದಾಪುರ: ಸಂಬಂಧಿ ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ನಡೆಸಿ ಬಳಿಕ ಮದುವೆಗೆ ಒಲ್ಲೆ ಎಂದ ಆರೋಪಿ ಸದ್ಯ ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾಗಿದ್ದಾನೆ.
ಕುಂದಾಪುರ ತಾಲೂಕಿನ ಹಿಲಿಯಾಣ ಎಂಬಲ್ಲಿ ಈ ಘಟನೆ ನಡೆದಿದ್ದು ಉಮೇಶ್ (26) ಬಂಧಿತ ಆರೋಪಿಯಾಗಿದ್ದಾನೆ.
ಘಟನೆ ವಿವರ: 23 ವರ್ಷ ಪ್ರಾಯದ ತನ್ನದೇ ಸಂಬಂಧಿ ಯುವತಿಯೋರ್ವಳನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿಯ ನಾಟಕವಡಿದ್ದ ಈತ ಆಕೆಯನ್ನು ಮದುವೆಯಾಗುವುದಾಗಿಯೂ ನಂಬಿಸಿದ್ದ. ಬಳಿಕ ಆಕೆಯೊಂದಿಗೆ ಬಲವಂತದ ಲೈಂಗಿಕ ಸಂಪರ್ಕವನ್ನು ಬೆಳೆಸಿದ್ದು ಈ ವಿಚಾರವನ್ನು ಮನೆಯವರಲ್ಲಿ ತಿಳಿಸದಂತೆ ಒತ್ತಡವನ್ನು ಹೇರಿದ್ದನೆನ್ನಲಾಗಿದೆ. ಇತ್ತೀಚೆಗೆ ಯುವತಿ ಆತನ ಬಳಿ ಮದುವೆಯಾಗುವಂತೆ ಕೋರಿಕೊಂಡಾಗ ಆತ ತಾನೂ ಮದುವೆಯಾಗುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದನೆನ್ನಲಾಗಿದೆ. ಬೇರೆ ದಾರಿ ಕಾಣದೇ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.
ಸದ್ಯ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. 14 ದಿನಗಳ ನ್ಯಾಯಾಂಗ ಬಂಧನವನ್ನು ಆರೋಪಿಗೆ ವಿಧಿಸಲಾಗಿದೆ.




