ಕನ್ನಡ ವಾರ್ತೆಗಳು

ಉಡುಪಿ ಜಿಲ್ಲಾ ಪೊಲೀಸ್ ವೆಬ್‌ಸೈಟಿಗೆ ಆಧುನಿಕ ಸ್ಪರ್ಶ; ವೆಬ್‌ನಲ್ಲಿದೆ ಸಕಲ ಮಾಹಿತಿ

Pinterest LinkedIn Tumblr

ಉಡುಪಿ: ದಿನನಿತ್ಯದ ಕ್ರೈಂ ಎಫ್ಐಆರ್‌ ಅಪ್‌ಡೇಟ್‌, ಜಿಲ್ಲೆಯ ಪೊಲೀಸ್‌ ಠಾಣೆ ಮತ್ತು ಅಧಿಕಾರಿಗಳ ವಿವರ ಒಳಗೊಂಡಿದ್ದ ಉಡುಪಿ ಜಿಲ್ಲಾ ಪೊಲೀಸ್‌ ವೆಬ್‌ಸೈಟ್‌ www.udupipolice.blogspot.in ಅನ್ನು ಬದಲಾಯಿಸಲಾಗಿದೆ. ಸಕಲ ಮಾಹಿತಿ ಒಳಗೊಂಡಿರುವ ವೆಬ್‌ www.udupipolice.org ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ರೂಪುಗೊಂಡು ಚಾಲನೆಗೊಂಡಿದೆ.

ಉಡುಪಿ ಜಿಲ್ಲಾ ಎಸ್‌ಪಿ ಕೆ. ಅಣ್ಣಾಮಲೈ ಅವರು ಉಡುಪಿಯ ಪೊಲೀಸ್‌ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನೂತನ ಪೊಲೀಸ್‌ ವೆಬ್‌ಸೈಟಿಗೆ ಚಾಲನೆ ನೀಡಿ ವಿಷಯ ತಿಳಿಸಿದರು. ಹೆಚ್ಚುವರಿ ಎಸ್‌ಪಿ ಸಂತೋಷ್‌ ಕುಮಾರ್‌, ಕಾರ್ಕಳ ಎಎಸ್‌ಪಿ ಡಾ| ಸುಮನಾ ಡಿ.ಪಿ., ಉಡುಪಿ ಡಿವೈಎಸ್‌ಪಿ ಕೆ.ಎಂ. ಚಂದ್ರಶೇಖರ್‌ ಉಪಸ್ಥಿತರಿದ್ದರು. ವೆಬ್‌ಸೈಟ್‌ ಮತ್ತು ಆ್ಯಪ್‌ ಅನ್ನು ವಿನ್ಯಾಸಗೊಳಿಸಿದ ಉಡುಪಿಯ ಚಿಪ್ಸಿ ಸಂಸ್ಥೆಯ ತಂತ್ರಜ್ಞರನ್ನು ಎಸ್‌ಪಿ ಅವರು ಅಭಿನಂದಿಸಿದರು.

Udp_Police_Website (1) Udp_Police_Website (2) Udp_Police_Website (3)

ವೆಬ್‌ನ ವಿಶೇಷತೆ:
ಉಡುಪಿ ಜಿಲ್ಲೆಯ ಈಗಿನ ಮತ್ತು ಹಿಂದಿನ ಎಲ್ಲ ಎಸ್‌ಪಿಯವರ ಭಾವಚಿತ್ರ ವಿವರ, ಪದಕ ಪುರಸ್ಕೃತರ ಪಟ್ಟಿ, ಜಾಗೃತಿ ವೀಡಿಯೋ, ಗ್ಯಾಲರಿ, ಸರ್ಕ್ನೂಲರ್‌, ಕಾಣೆಯಾದ ವ್ಯಕ್ತಿಗಳ ಭಾವಚಿತ್ರ ಸಹಿತ ಸಂಪೂರ್ಣ ವಿವರ, ಪೊಲೀಸ್‌ ಅಧಿಕಾರಿಗಳ ವಿವರ, ಸಾಧನೆಗಳ ಪಟ್ಟಿ, ಠಾಣಾ ವ್ಯಾಪ್ತಿಯ ಗ್ರಾಮಗಳ ವಿವರ, ಕಾನೂನು ಸುವ್ಯವಸ್ಥೆ ಮಾಹಿತಿ, ಟ್ರಾಫಿಕ್‌ ರೂಲ್ಸ್‌, ಟ್ರಾಫಿಕ್‌ ದಂಡಗಳ ವಿವರ, ಪೊಲೀಸ್‌ ವಿಭಾಗಗಳ ಮಾಹಿತಿ ಇರುತ್ತದೆ. ಪತ್ರಕರ್ತರಿಗಾಗಿ ನಿತ್ಯದ ಕ್ರೈಂ ಸುದ್ದಿಗಳ ವಿವರ, ಪ್ರೆಸ್‌ ರಿಲೀಸ್‌, ಪೊಲೀಸರ ಕಾರ್ಯಕ್ರಮ, ಸರ್ಕ್ನೂಲರ್‌ ಅಪ್‌ಡೇಟ್‌ ಆಗುತ್ತಲಿರುತ್ತದೆ. ಎಮರ್ಜೆನ್ಸಿ ಸುದ್ದಿಗಳನ್ನು ಕೂಡ ಹಾಕಲಾಗುತ್ತದೆ ಎಂದು ಅಣ್ಣಾಮಲೈ ಹೇಳಿದರು. ಅಲ್ಲದೇ ಸಾರ್ವಜನಿಕರ ಫೀಡ್‌ಬ್ಯಾಕ್‌, ದೂರು ಸಲ್ಲಿಕೆಗೆ ಅವಕಾಶವಿದೆ. ಪಾಸ್‌ಪೋರ್ಟ್‌ ಸಂಬಂಧಿತ ಸೇವೆಗಳ ಎಲ್ಲ ವಿವರಗಳಿವೆ. ಆರ್‌ಟಿಐ ಕಾಯ್ದೆಯ ಅಂಶಗಳು ಮತ್ತು ಇಲಾಖೆಯ ಸಕಾಲ ಸೇವೆಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಪಾರದರ್ಶಕವಾಗಿ ನೂತನ ವೆಬ್‌ಸೈಟಿನಲ್ಲಿ ಅಳವಡಿಕೆ ಮಾಡಲಾಗಿದೆ ಎಂದರು.

ಇತ್ತೀಚೆಗೆ ಆರಂಭಿಸಿದ ಸುರಕ್ಷಾ ಪೊಲೀಸ್‌ ಆ್ಯಪ್‌ಗೆ ಈವರೆಗೆ 460ಕ್ಕೂ ಮಿಕ್ಕಿ ದೂರುಗಳು ಬಂದಿದೆ. ಇಲ್ಲಿಂದ ಹೊರದೇಶಕ್ಕೆ ಹೋದವರು ಕೂಡ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಕೆಲ ದೂ ಸಲ್ಲಿಸಿದ್ದಾರೆ. ಸುರಕ್ಷಾ ಆ್ಯಪ್‌ ಇನ್ನು ಮುಂದಕ್ಕೆ ಆ್ಯಪಲ್‌ ಐಒಎಸ್‌ ವರ್ಸನ್‌ನಲ್ಲಿಯೂ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಆ್ಯಪ್‌ ಅನ್ನು ಸುಧಾರಣೆ ಮಾಡಲಾಗಿದ್ದು, ಅಪಘಾತದ ಸಂದರ್ಭ ಯಾವ ಪೊಲೀಸ್‌ ಠಾಣೆಗೆ ಸಂಬಂಧಿಸಿದ ಸ್ಥಳ ಮತ್ತು ಆಯ ಪೊಲೀಸ್‌ ಠಾಣೆಯ ದೂರವಾಣಿ ಮತ್ತು ಅಧಿಕಾರಿಯ ಮೊಬೈಲ್‌ ಸಂಖ್ಯೆ ತಿಳಿಯಲಿದೆ. ಆ್ಯಪ್‌ನಿಂದಲೇ ಪೊಲೀಸರಿಗೆ ಕರೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ನೇವಿಗೇಶನ್‌ ಮೂಲಕ ಠಾಣೆಯ ಮಾರ್ಗವನ್ನೂ ಗುರುತಿಸಬಹುದಾಗಿದೆ. ಪ್ರವಾಸಿಗರಿಗೆ ಇದರಿಂದ ತುಂಬಾ ಅನುಕೂಲತೆ ಇದೆ ಎಂದರು ಎಸ್‌ಪಿ.

ದಿನಕ್ಕೆರಡು ಬಾರಿ ಕ್ರೈಮ್ ಅಪ್‌ಡೇಟ್‌
ಈ ಹಿಂದೆ ಚಾಲ್ತಿಯಲ್ಲಿದ್ದ ಪೊಲೀಸ್‌ ವೆಬ್‌ಸೈಟಿನಲ್ಲಿ ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ದಾಖಲಾದ ಪ್ರತಿದಿನದ ಎಫ್ಐಆರ್‌ ವಿವರಗಳನ್ನು ಬೆಳಗ್ಗೆ 7, ಸಂಜೆ 5 ಮತ್ತು ರಾತ್ರಿ 7.30ಕ್ಕೆ ಅಪ್‌ಡೇಟ್‌ ಮಾಡಲಾಗುತ್ತಿತ್ತು. ಹೊಸ ವೆಬ್‌ಸೈಟಿನಲ್ಲಿ ಇನ್ನು ಮುಂದಕ್ಕೆ ಬೆಳಗ್ಗೆ 8.30 ಮತ್ತು ರಾತ್ರಿ 7 ಗಂಟೆಗೆ ಮಾತ್ರ ಅಪ್‌ಡೇಟ್‌ ಮಾಡಲಾಗುವುದು. ಹಿಂದಿನ ವೆಬ್‌ಸೈಟ್‌ ಕೆಲವೇ ದಿನಗಳಲ್ಲಿ ಸ್ಥಗಿತಗೊಳ್ಳಲಿದೆ ಎಂದು ಎಸ್‌ಪಿಯವರು ಹೇಳಿದರು.

Write A Comment