ಕರ್ನಾಟಕ

ಗಂಡ-ಹೆಂಡತಿಯ ಮಧ್ಯೆ ವಿಲನ್ ಆದ ನಾಯಿ ! ಏನಿದು ಕಥೆ ….ಮುಂದೆ ಓದಿ ನಿಮಗೆ ಆಶ್ಚರ್ಯ ಆಗುತ್ತೆ !

Pinterest LinkedIn Tumblr

dog love

ಬೆಂಗಳೂರು: ಪತ್ನಿಯ ಅತೀವ ಶ್ವಾನ ಪ್ರೀತಿ ದಾಂಪತ್ಯದಲ್ಲಿ ಬಿರುಕಿಗೆ ಕಾರಣವಾಗಿದ್ದು, ಸಮಸ್ಯೆ ಪೊಲೀಸ್ ಠಾಣೆಯ ಮೆಟ್ಟಿಲೇರಿ ಮಹಿಳಾ ಸಹಾಯವಾಣಿಯ ಅಂಗಳದಲ್ಲಿ ಇತ್ಯರ್ಥಗೊಂಡಿರುವ ಘಟನೆಯೊಂದು ನಡೆದಿದೆ.

ಸಾಫ್ಟ್‌ವೇರ್‌ ಉದ್ಯೋಗಿಗಳಾದ ಎಚ್‌ಎಸ್‌ಆರ್‌ ಲೇಔಟ್‌ನ 30 ವರ್ಷದ ಯುವಕ ಮತ್ತು ಕೊಚ್ಚಿ ಮೂಲದ 26 ವರ್ಷದ ಯುವತಿ ಇಬ್ಬರೂ ಪ್ರೀತಿಸಿ, ಮನೆಯವರ ಒಪ್ಪಿಗೆ ಮೇರೆಗೆ ಕಳೆದ ವರ್ಷ ವಿವಾಹವಾಗಿದ್ದರು.

ಆರಂಭದಲ್ಲಿ ಇಬ್ಬರ ದಾಂಪತ್ಯ ಚೆನ್ನಾಗಿಯೇ ಇತ್ತು. ಈ ಮಧ್ಯೆ ತವರು ಮನೆಗೆ ತೆರಳಿದ್ದ ಯುವತಿ, ಅಲ್ಲಿಂದ ತಮ್ಮೊಂದಿಗೆ ಎರಡು ಸಾಕು ನಾಯಿಗಳೊಂದಿಗೆ ಗಂಡನ ಮನೆಗೆ ಬಂದರು.

ಯುವತಿಗೆ ನಾಯಿಗಳ ಮೇಲೆ ಎಷ್ಟು ಪ್ರೀತಿಯೆಂದರೆ ಅವುಗಳಿಗೆ ತಾವೇ ತಿನ್ನಿಸುತ್ತಿದ್ದರಲ್ಲದೆ, ತಮ್ಮ ಹಾಸಿಗೆಯಲ್ಲಿಯೇ ಅವುಗಳನ್ನು ಮಲಗಿಸುತ್ತಿದ್ದರು. ಮನೆಯಲ್ಲಿದ್ದಾಗ ಹೆಚ್ಚಿನ ಸಮಯವನ್ನು ನಾಯಿಗಳ ಜತೆಯೇ ಕಳೆಯುತ್ತಿದ್ದರು. ಯುವತಿಗೆ ನಾಯಿಗಳ ಮೇಲಿನ ಈ ಅತಿಯಾದ ಪ್ರೀತಿ ಮನೆಯಲ್ಲಿದ್ದ ಅತ್ತೆ, ಮಾವ ಹಾಗೂ ಮೈದುನ ಅವರಿಗೆ ಬೇಸರ ತರಿಸಿತ್ತು. ಅಲ್ಲದೆ, ದೇವರ ಕೋಣೆ ಸೇರಿದಂತೆ ಮನೆಯ ಎಲ್ಲೆಂದರಲ್ಲಿ ಸ್ವೇಚ್ಛೆಯಾಗಿ ಓಡಾಡುತ್ತಿದ್ದ ನಾಯಿಗಳನ್ನು ವಾಪಸ್‌ ಊರಿಗೆ ಬಿಟ್ಟು ಬರುವಂತೆ ಒತ್ತಾಯಿಸಲಾರಂಭಿಸಿದರು.
ಪತ್ನಿಯ ಶ್ವಾನ ಪ್ರೀತಿಯಿಂದ ಬೇಸತ್ತಿದ್ದ ಯುವಕನೂ ತಂದೆ– ತಾಯಿ ಮಾತಿಗೆ ದನಿಗೂಡಿಸಿದ್ದರು.

ಆದರೆ, ಆಕೆ ಯಾರ ಮಾತಿಗೂ ಕಿವಿಗೊಡಲಿಲ್ಲ. ಬದಲಿಗೆ ‘ನಾಯಿಗಳು ನನ್ನ ಜೀವ. ನಿಮ್ಮನ್ನು ಬೇಕಾದರೆ ಬಿಡುತ್ತೇನೆ. ಆದರೆ, ಮುದ್ದು ನಾಯಿಗಳನ್ನು ಬಿಡಲಾರೆ’ ಎಂದು ಕಡ್ಡಿ ಮುರಿದಂತೆ ಪ್ರತಿಕ್ರಿಯಿಸಿದ್ದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಿತ್ತು. ಈ ವೇಳೆ ಯುವತಿಯು ಆಗಾಗ ತವರು ಮನೆ ಮತ್ತು ಸ್ನೇಹಿತರ ಮನೆಗೆ ಹೋಗಿ ಕೆಲ ದಿನ ಇದ್ದು ಬರುತ್ತಿದ್ದರು.

ನಾಯಿಗಳ ವಿಷಯಕ್ಕಾಗಿ ಮನೆಯಲ್ಲಿ ನಡೆಯುತ್ತಿದ್ದ ಜಗಳದಿಂದ ಬೇಸತ್ತ ಆಕೆ, ‘ಮನೆಯಲ್ಲಿ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಮನೆಯಲ್ಲಿ ನನಗೆ ನೆಮ್ಮದಿ ಇಲ್ಲ’ ಎಂದು ಆರೋಪಿಸಿ ಇತ್ತೀಚೆಗೆ ಪೊಲೀಸ್‌ ಠಾಣೆಯ ಮೆಟ್ಟಿಲೇರಿದರು. ದೂರು ಪರಿಶೀಲಿಸಿದ ಪೊಲೀಸರು, ಮಹಿಳಾ ಸಹಾಯವಾಣಿಗೆ ದೂರನ್ನು ವರ್ಗಾಯಿಸಿದರು.

‘ದೂರಿನ ಆಧಾರದ ಮೇಲೆ ದಂಪತಿ ಮತ್ತು ಅವರ ಕುಟುಂಬದವರನ್ನೂ ಕಚೇರಿಗೆ ಕರೆಯಿಸಿ ಆಪ್ತ ಸಮಾಲೋಚನೆ ನಡೆಸಲಾಯಿತು. ಈ ವೇಳೆ ಯುವತಿಯು, ಅತ್ತೆ– ಮಾವ ಇರುವ ಮನೆಯಲ್ಲಿ ನಾನು ಇರಲಾರೆ ಎಂದು ತಿಳಿಸಿದರು’ ಎಂದು ಮಹಿಳಾ ಸಹಾಯವಾಣಿಯ ನಿರ್ದೇಶಕಿ ರಾಣಿ ಶೆಟ್ಟಿ ಅವರು ಹೇಳಿದರು.

‘ಹಿಂದೆಯೂ ಇದೇ ರೀತಿಯ ಕೆಲ ಪ್ರಕರಣಗಳು ನಮ್ಮಲ್ಲಿಗೆ ಬಂದಿದ್ದವು. ಇಂತಹ  ಪ್ರಕರಣಗಳು ಮೇಲ್ನೋಟಕ್ಕೆ ಹಾಸ್ಯಾಸ್ಪದವಾಗಿ ಕಾಣುತ್ತವೆ. ಆದರೆ, ಒಳ ಹೊಕ್ಕಾಗ ದಾಂಪತ್ಯದ ಬಿರುಕಿಗೆ ಬೇರೆಯದೆ ಕಾರಣಗಳು ಗೋಚರಿಸುತ್ತವೆ. ಈ ಪ್ರಕರಣದಲ್ಲಿ ಪತಿ– ಪತ್ನಿ ಏಕಾಂತವಾಗಿ ಕಳೆಯಲು ಸೂಕ್ತ ವಾತಾವರಣ ಇಲ್ಲದಿರುವುದರ ಜತೆಗೆ, ಪತ್ನಿ ನಾಯಿಗಳನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದು ಸಹ ದಾಂಪತ್ಯದ ಬಿರುಕಿಗೆ ಕಾರಣ ಎಂಬುದು ಸಮಾಲೋಚನೆಯಿಂದ ಗೊತ್ತಾಯಿತು.

‘ಇದೇ ಕಾರಣಕ್ಕಾಗಿ ಯುವತಿಯು ತಮ್ಮ ಮುದ್ದು ನಾಯಿಗಳ ಜತೆಗಿನ ಒಡನಾಟ ಹೆಚ್ಚಿಸಿಕೊಂಡರಲ್ಲದೆ, ಅವುಗಳ ಜತೆಯೇ ಹೆಚ್ಚು ಸಮಯ ಕಳೆಯುತ್ತಿದ್ದರು. ಆದರೆ, ಯುವಕನ ಮನೆಯವರಿಗೆ ನಾಯಿಗಳನ್ನು ಸಾಕಿ ಅಭ್ಯಾಸವಿಲ್ಲ. ಅಲ್ಲದೆ, ಮನೆ ಮಂದಿಗಿಂತಲೂ ಹೆಚ್ಚಾಗಿ ಮನೆಯೊಳಗೆ ನಾಯಿಗಳು ಓಡಾಡಿದಾಗ, ಕ್ರಮೇಣ ಅವರಿಗೆ ನಾಯಿಗಳ ಮತ್ತು ಅವುಗಳನ್ನು ಕರೆತಂದ ಯುವತಿಯ ಮೇಲೆ ಅಸಹನೆ ಹೆಚ್ಚಾಗಿದೆ.

‘ದಂಪತಿ ಮತ್ತು ಕುಟುಂಬದವರ ಜತೆ ಹಲವು ಬಾರಿ ಆಪ್ತ ಸಮಾಲೋಚನೆ ನಡೆಸಿದ ನಂತರ, ದಂಪತಿ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದಾರೆ. ಇದಕ್ಕೆ ಯುವಕನ ಕುಟುಂಬದವರೂ ಸಮ್ಮತಿಸಿದ್ದು, ಸಮಸ್ಯೆ ಬಹುತೇಕ ಇತ್ಯರ್ಥಗೊಂಡಿದೆ’ ಎಂದರು ಅವರು ತಿಳಿಸಿದರು.

Write A Comment