ಬೆಂಗಳೂರು: ಉದ್ಯಾನನಗರಿಯಲ್ಲಿ ಮತ್ತೆ ಕ್ರಿಕೆಟ್ ಕಲರವಕ್ಕೆ ಮುನ್ನುಡಿ ಬರೆಯಲು ವೇದಿಕೆ ಸಜ್ಜಾಗಿದೆ. ಹೊಸ ಕೋಚ್ ರಾಹುಲ್ ದ್ರಾವಿಡ್ ಮಾರ್ಗ ದರ್ಶನದಲ್ಲಿ ತರಬೇತುಗೊಂಡಿ ರುವ ಭಾರತ ‘ಎ’ ತಂಡ ಮತ್ತೊಂದು ಸವಾಲನ್ನು ಎದುರು ನೋಡುತ್ತಿದೆ.
ಉನ್ಮುಕ್ತ್ ಚಾಂದ್ ನಾಯಕತ್ವದ ಆತಿಥೇಯರು ಬಾಂಗ್ಲಾದೇಶ ‘ಎ’ ಎದುರು ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದ್ದಾರೆ. ಸರಣಿಯ ಮೊದಲ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಮುಹೂರ್ತ ನಿಗದಿಯಾಗಿದೆ.
ಉಳಿದ ಪಂದ್ಯಗಳು ಸೆ. 18 ಮತ್ತು 20 ರಂದು ನಡೆಯಲಿವೆ. ಏಕದಿನ ಸರಣಿಯ ಬಳಿಕ ಪ್ರವಾಸಿ ತಂಡ ಮೈಸೂರಿನಲ್ಲಿ ರಣಜಿ ಚಾಂಪಿಯನ್ ಕರ್ನಾಟಕದ ವಿರುದ್ಧ ಮೂರು ದಿನಗಳ ಪಂದ್ಯ ಆಡಲಿದೆ. ಇದೇ ಮಾದರಿಯ ಇನ್ನೊಂದು ಪಂದ್ಯ ಸೆ. 27ರಂದು ಇಲ್ಲಿ ಆಯೋಜನೆಯಾಗಿದೆ.
2013ರಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ‘ಎ’ ತಂಡಗಳ ನಡುವೆ ಇಲ್ಲಿ ಎರಡು ಏಕದಿನ ಪಂದ್ಯಗಳು ನಡೆದಿತ್ತು. ಉಭಯ ತಂಡಗಳು ತಲಾ ಒಂದು ಗೆಲುವು ಪಡೆದಿದ್ದವು. ಈಗ ಮತ್ತೆ ‘ಎ’ ತಂಡಗಳ ಸರಣಿ ಆರಂಭವಾಗಿದೆ.
ಹಿರಿಯ ಮತ್ತು ಯುವ ಆಟಗಾರರನ್ನು ಒಳಗೊಂಡಿರುವ ಆತಿಥೇಯ ತಂಡ ಚೈತನ್ಯದ ಚಿಲುಮೆಯಾಗಿದೆ. ಏಕೆಂದರೆ, ಆಟಗಾರ ರಲ್ಲಿ ಸ್ಫೂರ್ತಿ ತುಂಬುವ ದ್ರಾವಿಡ್ ತಂಡದ ಕೋಚ್ ಆದ ಮೂರು ತಿಂಗಳ ಲ್ಲಿಯೇ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ.
ದ್ರಾವಿಡ್ ‘ಎ’ ತಂಡದ ಕೋಚ್ ಆದ ಬಳಿಕ ಭಾರತ ತಂಡ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ‘ಎ’ ತಂಡಗಳ ಎದುರು ಏಕದಿನ ಸರಣಿ ಜಯಿಸಿದೆ. ತಂಡದಲ್ಲಿ ಸ್ನೇಹಮಯ ವಾತಾವರಣ ಮೂಡಿಸಿರುವ ದ್ರಾವಿಡ್ ಬಲಿಷ್ಠ ‘ಯುವ ಪಡೆ’ಯನ್ನು ಕಟ್ಟಲು ಹಂತ ಹಂತವಾಗಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಈ ವಿಷಯವನ್ನು ಅವರು ಮಂಗಳ ವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಬಲಿಷ್ಠ ತಂಡ ಕಟ್ಟಬೇಕಾದರೆ ಹೆಚ್ಚು ಪಂದ್ಯಗಳನ್ನು ಆಡಬೇಕು. ಆದ್ದರಿಂದ ‘ಎ’ ತಂಡಗಳ ನಡುವಿನ ಸರಣಿ ಯುವ ಆಟಗಾರಿಗೆ ಅತ್ಯುತ್ತಮ ಅವಕಾಶ. ಅವರಿಗೆ ಉತ್ತಮ ಕೌಶಲಗಳನ್ನು ಹೇಳಿ ಕೊಡಬೇಕು’ ಎಂದರು.
ಹಿಂದಿನ ಎರಡೂ ಸರಣಿಗಳಿಗಿಂತ ಬಾಂಗ್ಲಾ ಎದುರಿನ ಸರಣಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈ ಟೂರ್ನಿ ಮುಗಿದ ಎರಡೇ ದಿನಗಳಲ್ಲಿ ಪ್ರತಿಷ್ಠಿತ ದೇಶಿ ಟೂರ್ನಿ ರಣಜಿ ಆರಂಭವಾಗಲಿದೆ. ಜೊತೆಗೆ, ದಕ್ಷಿಣ ಆಫ್ರಿಕಾ ಎದುರು ಎರಡೂವರೆ ತಿಂಗಳು ಸರಣಿ ಆಯೋಜನೆಯಾಗಿದೆ. ಹರಿಣಗಳ ನಾಡಿನ ತಂಡ ಒಂದು ಅಭ್ಯಾಸ ಪಂದ್ಯ ಆಡಿದ ಬಳಿಕ ಮೂರು ಟ್ವೆಂಟಿ–20, ಐದು ಏಕದಿನ ಮತ್ತು ನಾಲ್ಕು ಟೆಸ್ಟ್ಗಳನ್ನು ಆಡಲಿದೆ. ಸೆ. 29ರಂದು ಆರಂಭವಾಗಲಿರುವ ಸರಣಿ ಡಿಸೆಂಬರ್ 7ರಂದು ಮುಕ್ತಾಯವಾಗಲಿದೆ.
ಆದ್ದರಿಂದ ಸುದೀರ್ಘ ಅವಧಿಯ ಸರಣಿಗೆ ಹಿರಿಯ ಆಟಗಾರರು ಫಿಟ್ನೆಸ್ ಮತ್ತು ಫಾರ್ಮ್ ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಸುರೇಶ್ ರೈನಾ ‘ಎ’ ಸರಣಿಗೆ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೂರು ದಿನಗಳ ಪಂದ್ಯಕ್ಕೆ ಶಿಖರ್ ಧವನ್ ಹಾಗೂ ರವೀಂದ್ರ ಜಡೇಜ ಆಯ್ಕೆಯಾಗಿದ್ದಾರೆ.
ಈ ಅನುಭವಿ ಆಟಗಾರರಿಗೆ ಬಾಂಗ್ಲಾ ಎದುರಿನ ಟೂರ್ನಿ ಅಭ್ಯಾಸಕ್ಕೆ ವೇದಿಕೆಯೆನಿಸಿದೆ. ರಾಷ್ಟ್ರೀಯ ತಂಡ ದಲ್ಲಿ ಅವಕಾಶ ಪಡೆಯಲು ಕಾಯುತ್ತಿ ರುವ ಯುವ ಆಟಗಾರರಿಗೆ ಸರಣಿ ಅಗ್ನಿಪರೀಕ್ಷೆ ಎನಿಸಿದೆ.
ತಂಡವನ್ನು ಮುನ್ನಡೆಸಲಿರುವ ದೆಹಲಿಯ ಉನ್ಮುಕ್ತ್ ಚಾಂದ್, ಕರ್ನಾಟಕದ ಮಯಂಕ್ ಅಗರವಾಲ್, ಮನೀಷ್ ಪಾಂಡೆ ಮತ್ತು ಕರುಣ್ ನಾಯರ್, ಎಸ್. ಅರವಿಂದ್ ಕೇರಳದ ಸಂಜು ಸ್ಯಾಮ್ಸನ್, ಮಹಾರಾಷ್ಟ್ರದ ಕೇದಾರ್ ಜಾಧವ್, ಕರಣ್ ಶರ್ಮಾ ಸೇರಿದಂತೆ ಇನ್ನಿತರ ಯುವ ಆಟಗಾರ ರಿಗೆ ಬಾಂಗ್ಲಾ ಎದುರಿನ ಸರಣಿ ಪರೀಕ್ಷೆ ಯೂ ಹೌದು. ಅವಕಾಶವೂ ಹೌದು. ಈ ಸರಣಿಯಲ್ಲಿ ಉತ್ತಮ ಸಾಮರ್ಥ್ಯ ನೀಡುವ ಆಟಗಾರರನ್ನು ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಆಯ್ಕೆ ಮಾಡಲಾಗುತ್ತದೆ.
ರಾಷ್ಟ್ರೀಯ ತಂಡದ ಆಯ್ಕೆಯೂ ಬೆಂಗಳೂರಿನಲ್ಲಿ ನಡೆಯಲಿದ್ದು, ಆಯ್ಕೆ ಸಮಿತಿಯವರು ಪಂದ್ಯ ಗಳನ್ನು ವೀಕ್ಷಿಸಲಿದ್ದಾರೆ. ಆದರಿಂದ ‘ಯುವಪಡೆ’ಯ ಶಕ್ತಿ ಹೇಗೆ ಅನಾವರಣ ಗೊಳ್ಳಲಿದೆ ಎನ್ನುವ ಕುತೂಹಲ ಇಮ್ಮಡಿಸಿದೆ.
ಪ್ರವಾಸಿಗರೂ ಬಲಿಷ್ಠ: ‘ಎ’ ತಂಡಗಳ ನಡುವಿನ ಸರಣಿಯನ್ನು ಗಂಭೀರವಾಗಿ ಪರಿಗಣಿಸಿರುವ ಬಾಂಗ್ಲಾ ಕ್ರಿಕೆಟ್ ಮಂಡಳಿ 15 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಸಕ್ಲೆನ್ ಸಾಜಿಬ್ ಅವರನ್ನು ಹೊರತುಪಡಿಸಿ ಉಳಿದೆಲ್ಲಾ ಆಟಗಾರ ರು ರಾಷ್ಟ್ರೀಯ ತಂಡದಲ್ಲಿ ಆಡಿದ ಅನು ಭವಿಗಳೇ. ಆದ್ದರಿಂದ ಪ್ರಬಲ ಪೈಪೋಟಿ ಕಂಡು ಬರುವುದಂತೂ ನಿಶ್ಚಿತ.
ಈ ಸರಣಿಯನ್ನು ಆತಿಥೇಯರೂ ಲಘುವಾಗಿ ಪರಿಗಣಿಸಿಲ್ಲ. ‘ಬಾಂಗ್ಲಾ ತಂಡ ಅನುಭವಿ ಆಟಗಾರರನ್ನು ಆಯ್ಕೆ ಮಾಡಿದೆ. ಇದು ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ಕಠಿಣ ಸವಾಲು ಎದುರಾಗುವುದರಲ್ಲಿ ಅನುಮಾನವಿಲ್ಲ’ ಎಂದು ದ್ರಾವಿಡ್ ಹೇಳಿದ್ದು ಇದಕ್ಕೆ ಸಾಕ್ಷಿ.
ತಿರುಗೇಟು ನೀಡುವುದೇ: ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ತಂಡ ಇದೇ ವರ್ಷದ ಜೂನ್ನಲ್ಲಿ ಬಾಂಗ್ಲಾ ಎದುರು ಏಕದಿನ ಸರಣಿ ಸೋತು ಭಾರಿ ಮುಖಭಂಗಕ್ಕೆ ಒಳಗಾಗಿತ್ತು.
ಆಗ ಬಾಂಗ್ಲಾ ತಂಡದಲ್ಲಿದ್ದ ಬಹುತೇಕ ಆಟಗಾರರೇ ಈಗ ‘ಎ’ ಸರಣಿಯಲ್ಲಿ ಆಡುತ್ತಿದ್ದಾರೆ. ಆದ್ದರಿಂದ ಭಾರತದ ‘ಹಿರಿಯರು’ ಅನುಭವಿಸಿದ್ದ ನಿರಾಸೆಗೆ ‘ಯುವಪಡೆ’ ತಿರುಗೇಟು ನೀಡಲಿದೆಯೇ ಎನ್ನುವ ಕುತೂಹಲ ಸರಣಿಯ ಆಸಕ್ತಿ ಹೆಚ್ಚಿಸಿದೆ.
ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ: ಪಂದ್ಯಗಳನ್ನು ವೀಕ್ಷಿಸಲು ಸಾರ್ವಜನಕರಿಗೆ ಉಚಿತ ಪ್ರವೇಶವಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಯ ನಾಲ್ಕನೇ ಗೇಟ್ ನಿಂದ ಕ್ರೀಡಾಂಗಣ ಪ್ರವೇಶಿಸಬಹುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ತಿಳಿಸಿದೆ.
ತಂಡಗಳು ಇಂತಿವೆ
ಭಾರತ ‘ಎ’: ಉನ್ಮುಕ್ತ್ ಚಾಂದ್ (ನಾಯಕ), ಮಯಂಕ್ ಅಗರವಾಲ್, ಮನೀಷ್ ಪಾಂಡೆ, ಸುರೇಶ್ ರೈನಾ, ಕೇದಾರ್ ಜಾಧವ್, ಸಂಜು ಸ್ಯಾಮ್ಸನ್, ಕರುಣ್ ನಾಯರ್, ಕುಲದೀಪ್ ಯಾದವ್, ಜಯಂತ್ ಯಾದವ್, ಕರಣ್ ಶರ್ಮಾ, ರಿಷಿ ಧವನ್, ಎಸ್. ಅರವಿಂದ್, ಧವಳ್ ಕುಲಕರ್ಣಿ, ರುಷ್ ಕಲಾರಿಯಾ ಮತ್ತು ಗುರುಕೀರತ್ ಸಿಂಗ್.
ಬಾಂಗ್ಲಾದೇಶ ‘ಎ’: ಮೊಮಿನುಲ್ ಹಕ್ (ನಾಯಕ), ನಾಸಿರ್ ಹುಸೇನ್, ಅನಾಮುಲ್ ಹಕ್, ರುಬೆಲ್ ಹುಸೇನ್, ಶಿವಗತ ಹಮ್, ಲಿಟನ್ ಕುಮಾರ್ ದಾಸ್, ಶಬ್ಬೀರ್ ರಹಮಾನ್, ಸಕ್ಲೆನ್ ಸಾಜಿಬ್, ಸೌಮ್ಯ ಸರ್ಕಾರ್, ತಸ್ಕನ್ ಅಹ್ಮದ್, ಅಲ್ ಅಮಿನ್ ಹುಸೇನ್, ಶೌಫಿಯುಲ್ ಇಸ್ಲಾಮ್, ರೋನಿ ತಾಲ್ಲೂಕದಾರ್, ಅರಾಫತ್ ಸನ್ನಿ ಮತ್ತು ಜುಬೀರ್ ಹುಸೇನ್ ಲಿಖನ್.
ಅಂಪೈರ್ಗಳು: ಕೆ. ಶ್ರೀನಾಥ್ ಮತ್ತು ಪಿ. ಜಯಪಾಲ್. ರೆಫರಿ: ಎಸ್. ಶರತ್.
ಆರಂಭ: ಬೆಳಿಗ್ಗೆ 9ಕ್ಕೆ.