ನವದೆಹಲಿ: ‘ದೇಶದ ಜನರು ನನ್ನನ್ನು ಪ್ರೀತಿಸುತ್ತಾರೆ. ಅವರು ನನ್ನ ಮೇಲಿಟ್ಟ ನಂಬಿಕೆ ಹಾಗೂ ವಿಶ್ವಾಸದಿಂದ ನಾನು ಅಮೆರಿಕ ಓಪನ್‌ನಲ್ಲಿ ಪ್ರಶಸ್ತಿ ಗೆದ್ದುಕೊಳ್ಳಲು ಸಾಧ್ಯವಾಗಿದೆ’ ಎಂದು ಮಂಗಳವಾರ ನ್ಯೂಯಾರ್ಕ್‌ನಿಂದ ಇಲ್ಲಿಗೆ ಬಂದಿಳಿದ ಸಾನಿಯಾ ಮಿರ್ಜಾ ಹೇಳಿದ್ದಾರೆ.
‘ನಿರಂತರ ಪರಿಶ್ರಮದಿಂದ ನನಗೆ ಈ ಯಶಸ್ಸು ಸಿಕ್ಕಿದೆ. ಮಾರ್ಟಿನಾ ಹಿಂಗಿಸ್ ಉತ್ತಮ ಆಟಗಾರ್ತಿ. ಅವರೊಂದಿಗೆ ಆಡುವುದು ಖುಷಿ ಕೊಟ್ಟಿದೆ. ಮುಂದಿನ ವರ್ಷವೂ ಪ್ರಶಸ್ತಿ ಜಯಿಸುವ ವಿಶ್ವಾಸ ಹೊಂದಿದ್ದೇನೆ’ ಎಂದು ಸಾನಿಯಾ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ದಿನಪತ್ರಿಕೆಗಳನ್ನು ನಾನು ನಿರಂತರವಾಗಿ ಓದುವುದಿಲ್ಲ. ಟೆನಿಸ್ ಆಡುವುದಷ್ಟೇ ನನ್ನ ಕೆಲಸ. ಕೆಲವೇ ಮಂದಿಯ ಟೀಕೆಗೆ ನಾನು ತಲೆಕೆಡಿಸಿ ಕೊಳ್ಳುವುದಿಲ್ಲ. ದೇಶದ ಜನರ ಪ್ರೀತಿ, ಬೆಂಬಲ ನನಗಿದೆ’ ಎಂದು ಹೈದರಾಬಾದ್‌ನ ಆಟಗಾರ್ತಿ ಹೇಳಿದ್ದಾರೆ.
ಸಾನಿಯಾ ಮಿರ್ಜಾ ಅವರಿಗೆ ಈ ಸಾಲಿನ ಖೇಲ್‌ರತ್ನ ಪ್ರಶಸ್ತಿ ನೀಡಿರುವುದು ಹಾಗೂ ತೆಲಂಗಾಣ ಸರ್ಕಾರದ ರಾಯಾಭಾರಿಯಾಗಿ ನೇಮಕವಾಗಿರುವುದಕ್ಕೂ ವಿರೋಧ ವ್ಯಕ್ತವಾಗಿತ್ತು.
‘ಮುಂದಿನ ಹಲವು ಟೂರ್ನಿಗಳಲ್ಲಿ ನಾನು ಮತ್ತು ಹಿಂಗಿಸ್ ಉತ್ತಮವಾಗಿ ಆಡುವ ಭರವಸೆ ಹೊಂದಿದ್ದೇವೆ. ಬ್ರೆಜಿಲ್‌ನ ಬ್ರೂನೊ ಸೊರೆಸ್ ಅವರೊಂ ದಿಗೆ ಮಿಶ್ರ ಡಬಲ್ಸ್‌ನಲ್ಲಿ ಆಡುವ ಬಗ್ಗೆ ಇನ್ನೂ ಯೋಚಿಸಿಲ್ಲ’ ಎಂದು ಅವರು ಹೇಳಿದ್ದಾರೆ.
2014ರಲ್ಲಿ ಸಾನಿಯಾ–ಬ್ರೂನೊ ಜೋಡಿ ಮಿಶ್ರ ಡಬಲ್ಸ್‌ನಲ್ಲಿ ಅಮೆರಿಕ ಓಪನ್ ಗೆದ್ದುಕೊಂಡಿತ್ತು.