ಅಂತರಾಷ್ಟ್ರೀಯ

ಭದ್ರತಾ ಮಂಡಳಿ ಸುಧಾರಣೆ ಬಗ್ಗೆ ಚರ್ಚೆ ಅಗತ್ಯ: ಭಾರತ

Pinterest LinkedIn Tumblr

1ashokವಿಶ್ವಸಂಸ್ಥೆ, ಸೆ.15: ವಿಶ್ವಸಂಸ್ಥೆಯ ಸುಧಾರಣೆಗಳಿಗೆ ಸಂಬಂಧಿಸಿ ಚರ್ಚಿಸುವ ಸಂಬಂಧ ಸೋಮವಾರ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಸೋಮವಾರ ಕೈಗೊಂಡಿರುವ ಐತಿಹಾಸಿಕ ನಿರ್ಣಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ, ಮಂಡಿಸಲಾಗಿರುವ ಮಾತುಕತೆ ಕರಡಿನ ಪಠ್ಯದ ಕುರಿತು ರಾಷ್ಟ್ರಗಳು ಚರ್ಚಿಸುವುದು ಮತ್ತು ಈ ವಿಷಯಕ್ಕೆ ಸಂಬಂಧಿಸಿ ತಮ್ಮ ನಿಲುವುಗಳನ್ನು ವ್ಯಕ್ತಪಡಿಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದೆ.

‘‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಸ್ತರಣೆಗೆ ಸಂಬಂಧಿಸಿ ಸುಮಾರು 23 ವರ್ಷಗಳ ಬಳಿಕ ಈ ರೀತಿಯ ದಾಖಲೆಯೊಂದನ್ನು ಪಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ದಾಖಲೆಯನ್ನು ಆಧಾರವಾಗಿಟ್ಟುಕೊಂಡು ಈಗಿನಿಂದಲೇ ವಿಶ್ವಸಂಸ್ಥೆಯಲ್ಲಿ ನಾವೆಲ್ಲರೂ ವಿಸ್ತೃತವಾಗಿ ಚರ್ಚಿಸುವುದನ್ನು ಪ್ರಾರಂಭಿಸಬೇಕಾಗಿದೆ’’ ಎಂದು ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿಯಾಗಿರುವ ಅಶೋಕ್ ಮುಖರ್ಜಿ ಹೇಳಿದ್ದಾರೆ.

ಭದ್ರತಾ ಮಂಡಳಿಯ ಸುಧಾರಣೆ ಹಾಗೂ ಮಾತುಕತೆ ಕರಡಿನ ಕುರಿತು ಸರಕಾರಗಳ ನಡುವಿನ ಚರ್ಚೆಯ ಮುಂದುವರಿಕೆಗೆ ಅಂಗೀಕಾರ ದೊರೆತಿರುವುದು ಯಾವುದೇ ಅಧಿಕಾರ ಹೇರಿಕೆ ಅಥವಾ ತಾಂತ್ರಿಕ ನಿರ್ಧಾರವಲ್ಲ ಎಂದೂ ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ವಿಶ್ವಸಂಸ್ಥೆಯ ಮಹಾಧಿವೇಶನದ ನಿರ್ಧಾರವು ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿ 2030ರ ಮೇಲೆ ನೇರ ಪರಿಣಾಮ ಉಂಟು ಮಾಡಲಿದೆ ಎಂದವರು ಒತ್ತಿ ಹೇಳಿದ್ದಾರೆ.

ವಿಶ್ವಸಂಸ್ಥೆಯ 69ನೆ ಮಹಾಧಿ ವೇಶನದ ಅವಧಿ ಮಂಗಳವಾರಕ್ಕೆ ಮುಗಿದಿದ್ದು, 70ನೆ ಅವಧಿ ಪ್ರಾರಂಭಗೊಂಡಿದೆ. ಈ ಹಂತದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವ ಸಂಖ್ಯೆ ಹೆಚ್ಚಳ ಮತ್ತು ಸಮಾನ ಮಹತ್ವಗಳು ಎಂಬ ವಿಷಯದ ಕುರಿತು ಕರಡು ಗೊತ್ತುವಳಿಗೆ ಸೋಮವಾರ ಅಂಗೀಕಾರ ದೊರೆತಿದೆ.

ಮಂಗಳವಾರದಿಂದ ಪ್ರಾರಂಭಗೊಂಡಿರುವ 70ನೆ ಅಧಿವೇಶನದ ವೇಳೆ ಕರಡಿನ ಪರಿಶೀಲನೆ ನಡೆಯಲಿದೆ. ಒಂದು ವೇಳೆ ಕರಡು ಅಂಗೀಕಾರಗೊಂಡಲ್ಲಿ ಭದ್ರತಾ ಮಂಡಳಿ ಪುನಾರಚನೆ ಮತ್ತು ಸದಸ್ಯತ್ವ ವಿಸ್ತರಣೆ ಕುರಿತ ಪ್ರಕ್ರಿಯೆ  ಅಧಿಕೃತವಾಗಿ ಪ್ರಾರಂಭ ಗೊಂಡಂತಾಗುತ್ತದೆ.

ವಿಶ್ವಸಂಸ್ಥೆಯ 70ನೆ ವಾರ್ಷಿಕೆತ್ಸವದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದು, ಭಾರತದ ಖಾಯಂ ಸದಸ್ಯತ್ವ ಯತ್ನಕ್ಕೆ ಬೆಂಬಲ ನೀಡುವಂತೆ ವಿವಿಧ ದೇಶಗಳೊಂದಿಗೆ ಕೇಳಿಕೊಳ್ಳಲಿದ್ದಾರೆ. ಈಗಾಗಲೇ ಹಲವು ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡ ವೇಳೆ ಭಾರತದ ಖಾಯಂ ಸದಸ್ಯತ್ವದ ಬೇಡಿಕೆಗೆ ಬೆಂಬಲ ಯಾಚಿಸಿದ್ದರು.

Write A Comment