ಕನ್ನಡ ವಾರ್ತೆಗಳು

ಯತೀಶ್‌ ಕೊಲೆ ಆರೋಪಿ ಲ್ಯಾನ್ಸಿ ಕೊಲೆ ಯತ್ನ ಪ್ರಕರಣ : ನಾಲ್ವರ ಸೆರೆ – ಪ್ರಮುಖ ಆರೋಪಿಗಳಿಗಾಗಿ ಶೋಧ – ಆರೋಪಿಗಳ ಮುಂದಿನ ಟಾರ್ಗೆಟ್ ಉದಯ ಶೆಟ್ಟಿ.?

Pinterest LinkedIn Tumblr

Lancy_Udaya_yatish

ಉಳ್ಳಾಲ: ಸಂತೋಷ್‌ನಗರ ನಿವಾಸಿ ಲ್ಯಾನ್ಸಿ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿರುವ ಉಳ್ಳಾಲ ಪೊಲೀಸರು ಪ್ರಮುಖ ಆರೋಪಿಗಳಾದ ಮೂವರ ಶೋಧ ಕಾರ್ಯ ಮುಂದುವರೆದಿದೆ.

ಪೊಲೀಸರು ವಶಕ್ಕೆ ತೆಗೆದುಕೊಂಡವರನ್ನು ತೊಕ್ಕೊಟ್ಟು ನಿವಾಸಿ ದೀಕ್ಷಿತ್‌, ಅಡ್ಯಾರ್‌ಪದವು ನಿವಾಸಿ ರತನ್‌, ಮೊಗವೀರಪಟ್ಣ ನಿವಾಸಿ ಸುಜನ್‌, ಸೋಮೇಶ್ವರ ನಿವಾಸಿ ನಿವೇಶ್‌ ಎಂಬವರಾಗಿದ್ದು, ಕೊಲೆ ಯತ್ನದಲ್ಲಿ ನೇರ ಭಾಗಿಯಾಗಿರುವ ಪ್ರಮುಖ ಆರೋಪಿಗಳಾದ ಚೋನಿ ಯಾನೆ ಕೇಶವ ಪೂಜಾರಿ, ರಕ್ಷಿತ್‌, ಪ್ರಶಾಂತ್‌ ಯಾನೆ ಪಚ್ಚು ತಲೆಮರೆಸಿಕೊಂಡಿದ್ದಾರೆ.

ಸಾರಸ್ವತ ಕಾಲನಿ ನಿವಾಸಿ ಯತೀಶ್‌ ಕೊಲೆ ಆರೋಪಿಯಲ್ಲಿ ಒಬ್ಬನಾದ ಸಂತೋಷ್‌ನಗರ ನಿವಾಸಿ ಲ್ಯಾನ್ಸಿ ಡಿ.ಸೋಜನನ್ನು ಚೆಂಬುಗುಡ್ಡೆ ಬಳಿ ಸ್ಕೂಟರ್‌ಗೆ ಡಿಕ್ಕಿ ಕಾರನ್ನು ಡಿಕ್ಕಿ ಹೊಡೆಸಿ ತಲವಾರಿನಿಂದ ಕಡಿದು ಕೊಎಗೆ ಯತ್ನಿಸಿದ್ದರು. ಲ್ಯಾನ್ಸಿ ಡಿ.ಸೋಜ ಗಂಭೀರ ಗಾಯಗೊಂಡು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಳೆದ ವರ್ಷ ಆಗಸ್ಟ್‌ 15ರಂದು ತೊಕ್ಕೊಟ್ಟಿನ ಬಾರ್‌ನಲ್ಲಿ ಕ್ಷುಲ್ಲಕ ವಿಚಾರಕ್ಕೆ ಸೋಮೇಶ್ವರ ಸಾರಸ್ವತ ಕಾಲನಿ ನಿವಾಸಿ ರಿಕ್ಷಾ ಚಾಲಕ ಯತೀಶ್‌ನನ್ನು ಬಗಂಬಿಲದ ಉದಯ ಶೆಟ್ಟಿ ಮತ್ತು ತಂಡ ಕೊಲೆಗೈದಿತ್ತು. ಈ ಕೊಲೆಗೆ ಲ್ಯಾನ್ಸಿ ಡಿ.ಸೋಜ ಕುಮ್ಮಕ್ಕು ಕಾರಣವಾಗಿತ್ತು. ಯತೀಶ್‌ ಕೊಲೆಯಾದ ದಿನವೇ ಆತನ ಪ್ರಾಣ ಸ್ನೇಹಿತರಾದ ಹಿಂಜಾವೇ ಕಾರ್ಯಕರ್ತರು ಕೊಲೆಗೆ ಕಾರಣರಾದ ಉದಯ ಶೆಟ್ಟಿ ಮತ್ತು ಲ್ಯಾನ್ಸಿ ಡಿ.ಸೋಜ ಕೊಲೆಗೆ ಪಣ ತೊಟ್ಟಿದ್ದರು ? ಅದರಂತೆ ಕಳೆದ ಮೂರು ತಿಂಗಳ ಹಿಂದೆ ಜೈಲಿನಿಂದ ಜಾಮೀನಿನ ಮೇರೆಗೆ ಬಿಡುಗಡೆಯಾಗಿ ಬಂದಿದ್ದ ಲ್ಯಾನ್ಸಿ ಕೊಲೆಗೆ ಯತ್ನಿಸಿದರೂ ಕಡೇ ಕ್ಷಣದಲ್ಲಿ ವಿಫಲವಾಯಿತು.

ಯತೀಶ್‌ 2014ರ ಆಗಸ್ಟ್‌ 15ರಂದು ರಾತ್ರಿ ಕೊಲೆಯಾಗಿದ್ದ. ಯತೀಶ್‌ ಕೊಲೆಯಾದ ದಿನಾಂಕವನ್ನೇ ಈ ದುಷ್ಕರ್ಮಿಗಳು ಲ್ಯಾನ್ಸಿ ಕೊಲೆಗೆ ಮುಹೂರ್ತವಿಟ್ಟಿದ್ದರು. ಲ್ಯಾನ್ಸಿಯ ಚಲನವಲನವನ್ನು ಆಗಸ್ಟ್‌ ತಿಂಗಳ ಪ್ರಾರಂಭದಲ್ಲೇ ಹಿಂಬಾಲಿಸುತ್ತಿದ್ದ ತಂಡ 2015ರ ಆಗಸ್ಟ್‌ 15ರಂದು ರಾತ್ರಿ ಕೊಲೆ ನಡೆಸುವ ಯೋಜನೆ ಹಾಕಿಕೊಂಡಿದ್ದರು ಎನ್ನುವ ಮಾಹಿತಿಯಿದ್ದು, ಆ ದಿನ ಲ್ಯಾನ್ಸಿ ಮನೆಯಿಂದ ಹೊರಗೆ ಬರದೇ ಇದ್ದರಿಂದ ಪಾರಾಗಿದ್ದ. ಆದರೆ ಈ ತಂಡ ಲ್ಯಾನ್ಸಿ ಕೊಲೆಗೆ ಹೊಂಚು ಹಾಕಿ ಕುಳಿತ್ತಿದ್ದು, ಗುರುವಾರ ದಾಳಿ ನಡೆಸಿದರೂ ಕಡೇ ಕ್ಷಣದಲ್ಲಿ ಲ್ಯಾನ್ಸಿ ಜೀವಾಪಾಯದಿಂದ ಪಾರಾಗಿದ್ದಾನೆ.

ಲ್ಯಾನ್ಸಿಯ ಮೇಲೆ ಯತೀಶ್‌ನ ಸ್ನೇಹಿತರಾದ ಹಿಂಜಾವೇ ಕಾರ್ಯಕರ್ತರಿಗೆ ಮುಖ್ಯ ವೈಷಮ್ಯ ಯತೀಶ್‌ನಿಗೆ ಉದಯ ಶೆಟ್ಟಿ ಇರಿದ ಬಳಿಕ ಕೆಳಗೆ ಬಿದ್ದು ಒದ್ದಾಡುತ್ತಿದ್ದ ಯತೀಶ್‌ನ ತಲೆಯನ್ನು ಬೂಟು ಕಾಲಿನಿಂದ ಒದ್ದಿರುವುದು. ಬಾರ್‌ನ ಸಿಸಿ ಕೆಮರಾದ ದೃಶ್ಯದಿಂದ ಯತೀಶ್‌ ಕೊಲೆಯ ಸಂಪೂರ್ಣ ಚಿತ್ರಣ ಸಿಕ್ಕಿದ್ದು, ಇದೇ ಕಾರಣಕ್ಕೆ ಎರಡನೇ ಟಾರ್ಗೆಟ್‌ ಆಗಿರುವ ಲ್ಯಾನ್ಸಿಯನ್ನು ಮುಗಿಸುವ ಯೋಜನೆ ಹಾಕಿದ್ದರು. ಕಳೆದೊಂದು ತಿಂಗಳಲ್ಲಿ ಕಾಯುತ್ತಿದ್ದರೂ ಲ್ಯಾನ್ಸಿ ಏಕಾಂಗಿಯಾಗಿ ಸಿಕ್ಕಿರಲಿಲ್ಲ. ಗುರುವಾರ ಸಿದ್ಧಗೊಂಡಿದ್ದ ತಂಡಕ್ಕೆ ಲ್ಯಾನ್ಸಿ ಏಕಾಂಗಿಯಾಗಿ ಸಿಕ್ಕಿದ್ದ.

ಇದೀಗ ಕೊಲೆ ಯತ್ನದಿಂದ ಪಾರಾಗಿರುವ ಲ್ಯಾನ್ಸಿ ಡಿ.ಸೋಜ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದು, ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತ ಯತೀಶ್‌ ಕೊಲೆಗೆ ಪ್ರತಿಕಾರ ತೀರಿಸುವ ವರ್ಷದ ಯೋಜನೆ ತಲೆಕೆಳಗಾಗಿದ್ದು ಹಿಂಜಾವೇ ಕಾರ್ಯಕರ್ತರ ಮುಂದಿನ ಟಾರ್ಗೆಟ್‌ ಯತೀಶ್‌ ಕೊಲೆಯ ಪ್ರಮುಖ ಆರೋಪಿ ಉದಯ ಶೆಟ್ಟಿ ಎನ್ನುವುದು ಖಚಿತವಾಗಿದೆ. ಉದಯ ಶೆಟ್ಟಿ ಜೈಲಿನಿಂದ ಬಿಡುಗಡೆಯಾಗುವುದನ್ನೇ ತಂಡವೊಂದು ಕಾಯುತ್ತಿದೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Write A Comment