ಕನ್ನಡ ವಾರ್ತೆಗಳು

ಎತ್ತಿನಹೊಳೆ ಯೋಜನೆಗೆ ಅನುಮತಿ ನೀಡಿದ ಕರಾವಳಿಯ ಇಬ್ಬರು ಮಾಜಿ ಮುಖ್ಯ ಮಂತ್ರಿಗಳು ಜಿಲ್ಲೆಯ ಜನರ ಕ್ಷಮೆಯಾಚಿಸಲಿ : ಪೂಜಾರಿ

Pinterest LinkedIn Tumblr

Poojary_press_meet_2

ಮಂಗಳೂರು, ಸೆ.13: ಎತ್ತಿನಹೊಳೆ ಯೋಜನೆ ಸೃಷ್ಠಿ ಮಾಡಿದ ಕರಾವಳಿಯಿಂದ ಆಯ್ಕೆಯಾದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಕರಾವಳಿಯ ಜನರ ಕ್ಷಮೆಯಾಚಿಸಬೇಕು ಎಂದು, ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಗೆ ಅನುಮತಿ ನೀಡುವ ಮೂಲಕ ಜಿಲ್ಲೆಯ ಜನತೆಗೆ ದ್ರೋಹವೆಸಗಿದ ಕರಾವಳಿ ಮೂಲದವರೇ ಆದ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ ಹಾಗೂ ಎಂ.ವೀರಪ್ಪ ಮೊಯ್ಲಿಯವರು ಜಿಲ್ಲೆಯ ಜನರ ಕ್ಷಮೆ ಕೇಳ ಬೇಕು ಎಂದರು. ಎತ್ತಿನಹೊಳೆ ಯೋಜನೆಯ ವಿರುದ್ಧದ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ತಿಳಿಸಿದರು.

Poojary_press_meet_3

ಖಾದರ್ ಯೋಜನೆ ವಿರುದ್ಧ್ದ ಧ್ವನಿ ಯೆತ್ತಲಿ :

ಸಚಿವ ಯು.ಟಿ.ಖಾದರ್ ಮಾತಾಡುವಾಗ ಆಲೋಚನೆ ಮಾಡಬೇಕು. ಅವರು ಎತ್ತಿನಹೊಳೆ ಯೋಜನೆ ವಿರುದ್ಧ್ದ ಧ್ವನಿ ಯೆತ್ತಬೇಕು. ದ್ವಂದ್ವ ಮಾತುಗಳನ್ನು ನಿಲ್ಲಿಸಲಿ. ಎಂದ ಅವರು, ಸಂಸದರು ಕತ್ತಲಲ್ಲಿ ಇಟ್ಟು ಯೋಜನೆ ಆಗಿದೆ ಎಂದು ಹೇಳುತ್ತಾರೆ. ಸುದ್ದಿಮಾಧ್ಯಮಗಳಲ್ಲಿ ಎತ್ತಿನಹೊಳೆ ಯೋಜನೆ ಬಗ್ಗೆ ಇಷ್ಟೆಲ್ಲಾ ವರದಿಗಳು ಬರುತ್ತಿದ್ದರೂ ಅದನ್ನು ಗಮನಿಸಿಯೂ ಸಂಸದರು ಸುಳ್ಳು ಹೇಳುತ್ತಿದ್ದಾರೆ ಎಂದು ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಮಹಾದಾಯಿ ಯೋಜನೆ ನಿಲ್ಲಿಸಿದ್ದು ವಾಜಪೇಯಿ: ಮಹಾದಾಯಿ ಯೋಜ ನೆಯ ಬಗ್ಗೆ ಬಿಜೆಪಿ ಸುಳ್ಳು ಹೇಳುತ್ತಿದೆ. ಸೋನಿಯಾ ಗಾಂಧಿಯವರ ಹೆಸರನ್ನು ಇದರಲ್ಲಿ ತರಲಾಗುತ್ತಿದೆ. ಮಹಾದಾಯಿ ಯೋಜನೆಯನ್ನು ನಿಲ್ಲಿಸಿದ್ದು ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ. ಇದೀಗ ಬಿಜೆಪಿ ಸುಳ್ಳು ಹೇಳುವ ಮೂಲಕ ರಾಜಕಾರಣ ಮಾಡುತ್ತಿದೆ ಎಂದು ಪೂಜಾರಿ ಆಪಾದಿಸಿದರು.

Poojary_press_meet_1

ವಿದ್ಯುತ್ ನೀಡದ ಕೇಂದ್ರ: ರಾಜ್ಯದಲ್ಲಿ 135 ತಾಲೂಕುಗಳಲ್ಲಿ ಬರ ಇದ್ದು ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಕೇಂದ್ರ ಸರಕಾರ ತನ್ನಲ್ಲಿ ಬೇಕಾದಷ್ಟು ವಿದ್ಯುತ್ ಇದೆ ಎಂದು ಹೇಳುತ್ತಿದೆ. ಆದರೆ ವಿದ್ಯುತ್ ನೀಡುವಂತೆ ರಾಜ್ಯ ಸರಕಾರ ವಿನಂತಿಸಿದರೂ ವಿದ್ಯುತ್ ನೀಡುತ್ತಿಲ್ಲ. ವಿದ್ಯುತ್ ಕೇಂದ್ರದಿಂದ ಪಡೆಯುತ್ತಿಲ್ಲ ಎಂದು ಸುಳ್ಳು ಆಪಾದನೆ ಮಾಡಲಾಗುತ್ತಿದೆ. 19 ಬಿಜೆಪಿ ಸಂಸದರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು ಇದ್ದರೂ ಕೇಂದ್ರದಿಂದ ವಿದ್ಯುತ್ ತರಿಸಲು ಇವರಿಗೆ ತಾಕತ್ತಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಮನಪಾ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮಾಜಿ ಮೇಯರ್ ಮಹಾಬಲ ಮಾರ್ಲ, ಕಾಂಗ್ರೆಸ್ ಮುಖಂಡರಾದ ದೀಪಕ್ ಪೂಜಾರಿ, ಟಿ.ಕೆ.ಸುಧೀರ್, ಅರುಣ್ ಕುವೆಲ್ಲೊ, ನಾಗೇಂದ್ರಕುಮಾರ್, ನಝೀರ್ ಬಜಾಲ್, ಕರುಣಾಕರ್ ಶೆಟ್ಟಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment